ಅಧಿವೇಶನದಲ್ಲಿ 99 ಗಂಟೆ 34 ನಿಮಿಷ ನಡೆದ ಕಾರ್ಯಕಲಾಪ-ಸಭಾಧ್ಯಕ್ಷ ಯು.ಟಿ ಖಾದರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹದಿನಾರನೇ ವಿಧಾನಸಭೆಯ ಆರನೇ ಅಧಿವೇಶನವು 03ನೇ ಮಾಚ್ ರಿಂದ 21ನೇ ಮಾರ್ಚ್, 2025 ರವರೆಗೆ ಒಟ್ಟು 15 ದಿನಗಳ ಕಾಲ ಸುಮಾರು 99 ಗಂಟೆ 34 ನಿಮಿಷಗಳ ಕಾಲ ಕಾರ್ಯಕಲಾಪ ನಡೆದು ಮುಕ್ತಾಯಗೊಂಡಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ತಿಳಿಸಿದರು.

ಇಂದು ವಿಧಾನಸೌದದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 3 ರಂದು ಗೌರವಾನ್ವಿತ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದರು. ಮಾನ್ಯ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 14 ಸದಸ್ಯರುಗಳು ಒಟ್ಟು 08 ಗಂಟೆ 02 ನಿಮಿಷಗಳ ಕಾಲ ಭಾಗವಹಿಸಿದ್ದು, ವಂದನಾ ನಿರ್ಣಯದ ಪ್ರಸ್ತಾವವನ್ನು ಮಾರ್ಚ್ 17 ರಂದು ಅಂಗೀಕರಿಸಲಾಗಿದೆ.

2025-26 ಆಯವ್ಯಯ ಅಂದಾಜುಗಳನ್ನು ಮುಖ್ಯಮಂತ್ರಿಯವರು ಮಾರ್ಚ್ 7 ರಂದು ಮಂಡಿಸಿದ್ದಾರೆ. ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 80 ಮಾನ್ಯ ಸದಸ್ಯರುಗಳು ಒಟ್ಟು 28 ಗಂಟೆ 56 ನಿಮಿಷಗಳ ಕಾಲ ಭಾಗವಹಿಸಿದ್ದು, ಮಾರ್ಚ್ 21 ರಂದು ಮಾನ್ಯ ಮುಖ್ಯಮಂತ್ರಿಯವರು ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು. 2024-25ನೇ ಸಾಲಿನ ಪೂರಕ ಅಂದಾಜುಗಳ (ಮೂರನೇ ಹಾಗೂ ಅಂತಿಮ ಕಂತು) ಬೇಡಿಕೆಗಳನ್ನು ಮಾರ್ಚ್ 19 ರಂದು ಮಂಡಿಸಿದ್ದು, ಮಾರ್ಚ್ 21 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.

ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಮಾನ್ಯ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲಿನ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.

2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ, ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ವರದಿ, ಕರ್ನಾಟಕ ವಿಧಾನ ಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2024-25ನೇ ಸಾಲಿನ ಐದನೇ ವರದಿ, ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ನಾಲ್ಕನೇ ವರದಿ ಹಾಗೂ ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ 2024-25ನೇ ಸಾಲಿನ ಎರಡನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 12 ಅಧಿಸೂಚನೆಗಳು, 2 ಆಧ್ಯಾದೇಶಗಳು ಮತ್ತು 122 ವಾರ್ಷಿಕ ವರದಿಗಳು, 111 ಲೆಕ್ಕ ಪರಿಶೋಧನಾ ವರದಿಗಳು. 01 ಅನುಪಾಲನಾ ವರದಿಗಳು ಹಾಗೂ 01 ಅನುಸರಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು.
ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕಗಳೂ ಸೇರಿದಂತೆ ಒಟ್ಟು 27 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಿದಂತೆ, ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ, ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.

ನಿಯಮ 60 ರಡಿಯಲ್ಲಿ ನೀಡಿದ್ದ 03 ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದನ್ನು ಸೇರಿದಂತೆ ಒಟ್ಟು 04 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ಅವಧಿಯಲ್ಲಿ ಒಟ್ಟು 50 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 3096 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 195 ಪ್ರಶ್ನೆಗಳ ಪೈಕಿ 189 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 2583 ಪ್ರಶ್ನೆಗಳ ಪೈಕಿ 2190 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ ಸ್ವೀಕೃತವಾದ 260 ಸೂಚನೆಗಳ ಪೈಕಿ 133 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 388 ಸೂಚನೆಗಳ ಪೈಕಿ 175 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಮಾನ್ಯ ಸದಸ್ಯರಾದ ಹೆಚ್.ಕೆ. ಸುರೇಶ್ ಹಾಗೂ ಶ್ರೀ ದರ್ಶನ್ ಪುಟ್ಟಣ್ಣಯ್ಯ ರವರುಗಳು ನೀಡಿರುವ 02 ಖಾಸಗಿ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಎರಡು ಹಕ್ಕುಚ್ಯುತಿ ಸೂಚನೆಗಳನ್ನು ತನಿಖೆ, ಪರಿಶೀಲನೆ ಮತ್ತು ವರದಿಗಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ವಹಿಸಲಾಗಿದೆ. ಶೂನ್ಯ ವೇಳೆ ಅಡಿಯಲ್ಲಿ 14 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದರು.

ಮಾರ್ಚ್ 4 ಮಂಗಳವಾರದಂದು ವಿಧಾನಸೌಧದ ವಿಧಾನಸಭೆಯ ಸಭಾಂಗಣ ಮೊಗಸಾಲೆ ಪ್ರವೇಶಿಸುವ ದ್ವಾರದ ಬಳಿ ಕರ್ನಾಟಕ ರಾಜ್ಯದ  ವಿಧಾನಸಭೆಯ ಹಿಂದಿನ ಅಧಿವೇಶನಗಳು, ಮೈಸೂರಿನ ಸಾರ್ವಜನಿಕ ಕಚೇರಿ ಕಟ್ಟಡ, ಜಗನ್ನೋಹನ್ ಅರಮನೆ, ಕ್ರಾಫರ್ಡ್ ಹಾಲ್ ಮತ್ತು ಬೆಂಗಳೂರಿನ ಸರ್ ಕೆ.ಪಿ. ಪುಟ್ಟಣ ಚೆಟ್ಟಿ ಪುರಭವನ, ಓಲ್ಡ್ ಪಬ್ಲಿಕ್ ಆಫೀಸ್ ಕಟ್ಟಡ, ಆಥಾರ ಕಛೇರಿ ಕಟ್ಟಡಗಳಲ್ಲಿ ನಡೆದಿದ್ದು, ಸದರಿ ಕಟ್ಟಡಗಳ ವರ್ಣ ಚಿತ್ರಗಳನ್ನು ಅನಾವರಣಗೊಳಿಸಲಾಗಿತ್ತು. ಅಲ್ಲದೆ  ಪಂಡಿತ್ ಜವಹರಲಾಲ್ ನೆಹರು ರವರು ವಿಧಾನ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಲ್ಪಟ್ಟ ಸಂದರ್ಭ, ಶ್ರೀ ಜಯಚಾಮರಾಜ ಒಡೆಯರ್ ಅವರು ಅಂದಿನ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಹಾಗೂ ಇನ್ನಿತರರೊಂದಿಗೆ ವಿಧಾನ ಸೌಧ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಿಸುತ್ತಿರುವ ಹಾಗೂ ಅಂದಿನ ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರು ಸದನಗಳ ಸದಸ್ಯರುಗಳನ್ನುದ್ದೇಶಿಸಿ ಭಾಷಣ ಮಾಡುತ್ತಿರುವ ಸಂದರ್ಭಗಳ ವರ್ಣ ಚಿತ್ರಗಳನ್ನು ಸಹ ಅನಾವರಣಗೊಳಿಸಲಾಗಿತ್ತು ಎಂದರು.

ಅಧಿಕೃತ ನಿರ್ಣಯಗಳನ್ನು ಮಾರ್ಚ್ 20 ರಂದು ಸದನದಲ್ಲಿ ಮಂಡಿಸಲಾಗಿದ್ದು, ಸದನವು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಸರ್ಕಾರಿ ಭದ್ರತಾ ಪತ್ರಗಳ ಅಧಿನಿಯಮ, 2006 (2006 ಕೇಂದ್ರ ಅಧಿನಿಯಮ 38) ಮತ್ತು ಸಾರ್ವಜನಿಕ ಋಣ ಅಧಿನಿಯಮ, 1944 (1944 ಕೇಂದ್ರ ಅಧಿನಿಯಮ 18) ನಿರಸನದ ಪ್ರಸ್ತಾವನೆಗೆ ಸಂಸತ್ತು ಮಾಡಿರುವ ತಿದ್ದುಪಡಿಗೆ ಸದನದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮುಂಗಡ ಪತ್ರದ ಒಂದು ಭಾಗವನ್ನು ಕೇವಲ ಅದೇ ಉದ್ದೇಶಕ್ಕಾಗಿ ಮೀಸಲಿಡುವ ಬಗ್ಗೆ.
ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿರುವ ಕೇಂದ್ರ ಸರ್ಕಾರದ ವಕ್ಸ್ (ತಿದ್ದುಪಡಿ) ಮಸೂದೆ, 2024ನ್ನು ಹಿಂಪಡೆಯುವ ಬಗ್ಗೆ.

ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್ (ಮಿನಿಮಮ್ ಕ್ವಾಲಿಫಿಕೇಷನ್ಸ್ ಫಾರ್ ಅಪಾಯಿಂಟ್ಮೆಂಟ್ ಅಂಡ್ ಪ್ರಮೋಷನ್ ಆಫ್ ಟೀಚರ್ಸ್ ಅಂಡ್ ಅಕಾಡೆಮಿಕ್ ಸ್ಟಾಫ್ ಇನ್ ಯುನಿವರ್ಸಿಟೀಸ್ ಅಂಡ್ ಕಾಲೇಜಸ್ ಅಂಡ್ ಮೆಷರ್ಸ್ ಫಾರ್ ಮೆಂಟೈನೆನ್ಸ್ ಆಫ್ ಸ್ಟಾಂಡಡ್ರ್ಸ್ ಇನ್ ಹೈಯರ್ ಎಜುಕೇಷನ್) ರೆಗುಲೇಷನ್ಸ್, 2025 ಅನ್ನು ಹಿಂಪಡೆಯ ಬಗ್ಗೆ.
ಸಚಿವರ ಹನಿಟ್ರ್ಯಾಪ್ ಸಂಬಂಧಿಸಿದಂತೆ ಸದನದಲ್ಲಿ ಉಂಟಾದ ಗದ್ದಲದಿಂದ ಶುಕ್ರವಾರ ಸದನದ ಪೀಠದ ಆದೇಶವನ್ನು ಲೆಕ್ಕಿಸದೆ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿ ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿ 18 ಜನ ವಿಧಾನಸಭಾ ಸದಸ್ಯರುಗಳನ್ನು 6 ತಿಂಗಳುಗಳ ಅವಧಿಯವರೆಗೆ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತು ಮಾಡಲಾಗಿದೆ. ಸದಸ್ಯರು ಮುಂದೆ ರೀತಿಯ ವರ್ತಿಸದಿರಲು ಇದು ಎಚ್ಚರಿಕೆ ಗಂಟೆಯಾಗಿದೆ. ಮುಖ್ಯಮಂತ್ರಿಗಳು ಸದನದಲ್ಲಿ  ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.

ಸದನ ನಡೆಸಲು ಸಹಕರಿಸಿದ ಸಭಾನಾಯಕರುಮುಖ್ಯಮಂತ್ರಿಗಳು, ಸಚಿವ ಸಂಪುಟದ ಸದಸ್ಯರು ಉಪ ಸಭಾಧ್ಯಕ್ಷರು ಸರ್ಕಾರಿ ಮುಖ್ಯ ಸಚೇತಕರು ವಿರೋಧ ಪಕ್ಷದ ನಾಯಕರು ವಿರೋಧ ಪಕ್ಷದ ಮುಖ್ಯ ಸಚೇತಕರು ಎಲ್ಲಾ ಮಾನ್ಯ ಸದಸ್ಯರುಗಳು ಮಾಧ್ಯಮ ಪ್ರತಿನಿಧಿಗಳು ಇಲಾಖಾ ಮುಖ್ಯಸ್ಥರು, ಅಧಿಕಾರಿಸಿಬ್ಬಂದಿಗಳು ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ವಿಧಾನಸಭೆಯ ಸಭಾಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು.

ಬಾರಿ ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳ ಅಭೂತಪೂರ್ವ ಯಶಸ್ಸು ಕಂಡಿದೆ. ಇನ್ನು ಮುಂದೆ ಪ್ರತಿ ವರ್ಷ ಪುಸ್ತಕ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಶಾಶ್ವತ ವಿದ್ಯುತ್ ಅಲಂಕಾರವನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಶನಿವಾರ, ಭಾನುವಾರ, ರಾಷ್ಟ್ರೀಯ ಹಬ್ಬಗಳು ಹಾಗೂ ಪ್ರಮುಖ ಸಮಾರಂಭಗಳಂದು ವಿದ್ಯುತ್ ದೀಪಗಳು ವಿಧಾನಸೌಧವನ್ನು ಅಲಂಕರಿಸಲಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";