ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಪ್ರತಿಷ್ಠಿತ ಐಐಎನ್ ಪ್ಲಾಟಿನಂ – 2025 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಡಿಸಿಎಂ, ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಈ 7 ಜಿಲ್ಲೆಗಳ ನೀರಿನ ಬವಣೆಯನ್ನು ನೀಗಿಸಲಿರುವ ಯೋಜನೆಗೆ ಈ ಪುರಸ್ಕಾರ ಲಭಿಸಿರುವುದು ಕರ್ನಾಟಕದ ಅಭಿವೃದ್ಧಿ ಮಾದರಿಗೆ ಸಿಕ್ಕ ಮನ್ನಣೆಯಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಏನಿದು ಯೋಜನೆ-
ಪಶ್ವಿಮಾಭಿಮುಖವಾಗಿ ಹರಿಯುವ ನದಿಗಳಿಂದ ವಾರ್ಷಿಕ ೨೪.೦೧ ಟಿ.ಎಂ.ಸಿ ಪ್ರವಾಹದ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು ೫೨೭ ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ ೫೦% ರಷ್ಟು ನೀರು ತುಂಬಿಸುವ ಉದ್ದೇಶಿತ ಮಹತ್ವದ ಎತ್ತಿನಹೊಳೆ ಯೋಜನೆ ಇದಾಗಿದೆ.
ರಾಜ್ಯ ಸರ್ಕಾರವು 2014ರ ಫೆಬ್ರವರಿ 17 ರಂದು ಪರಿಷ್ಕೃತ ಯೋಜನಾ ವರದಿಗೆ ೧೨,೯೧೨.೩೬ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಯೋಜನೆಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.

