ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿಮ್ಮ ಮಕ್ಕಳಿಗೆ ಕಾಲ ಕಾಲಕ್ಕೆ ಸರಿಯಾಗಿ ಲಸಿಕೆ ಕೊಡಿಸಿ, ಮಾರಕ ರೋಗಗಳು ಬಾರದಂತೆ ರಕ್ಷಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಇಲ್ಲಿನ ಗಾಂಧಿ ನಗರದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಲಸಿಕಾ ವಂಚಿತ ಮಕ್ಕಳಿಗೆ ವಿಶೇಷ ಲಸಿಕಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಲಸಿಕೆಗಳು 12 ಮಾರಣಾಂತಿಕ ಕಾಯಿಲೆಗಳಿಂದ ನಿಮ್ಮ ಮಕ್ಕಳನ್ನು ರಕ್ಷಣೆ ಮಾಡುತ್ತವೆ. 5 ವರ್ಷದಲ್ಲಿ 7 ಬಾರಿ ನಿಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತನ್ನಿ ಲಸಿಕೆ ಕೊಡಿಸಿ. ಮನೆಯ ಕೆಲಸಗಳನ್ನು ಮಾಡುವ ನೆಪ ಹೇಳಿ ಮಕ್ಕಳನ್ನು ಲಸಿಕಾ ವಂಚಿತರನ್ನಾಗಿ ಮಾಡಬೇಡಿ. ಇದು ನಿಮ್ಮ ಮಕ್ಕಳಿಗೆ ಮಾಡುವ ವಂಚನೆಯಾಗಿತ್ತದೆ ಎಂಬ ಅರಿವು ನಿಮಗಿರಲಿ ಎಂದು ಹೇಳಿದರು.
ಮಕ್ಕಳಿಗೆ ಆರು ತಿಂಗಳ ತನಕ ಎದೆ ಹಾಲನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡಿ. ಆರು ತಿಂಗಳಿನ ನಂತರ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುತ್ತಾ ಕನಿಷ್ಠ 2 ವರ್ಷಗಳಿಗೂ ಹೆಚ್ಚು ಕಾಲ ಎದೆ ಹಾಲು ನೀಡುವುದು ತಪ್ಪಿಸಬೇಡಿ. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಮಕ್ಕಳ ಆರೈಕೆ ಸಮಯದಲ್ಲಿ ದಂಪತಿಗಳು ಅಂತರದ ಹೆರಿಗೆ ಸೂತ್ರವನ್ನು ಪಾಲಿಸುವುದು ಸೂಕ್ತ ಪರಿಹಾರ. ಆರೋಗ್ಯ ಇಲಾಖೆಯು ಹಲವಾರ ಕುಟುಂಬ ಯೋಜನೆಯನ್ನು ಉಚಿತ ಸೇವೆಯನ್ನು ನೀಡುತ್ತಿದೆ. ಮಹಿಳೆಯರಿಗೆ ನುಂಗುವ ಮಾತ್ರೆ, ವಂಕಿ ಅಳವಡಿಸುವುದು, ಅಂತರ ಚುಚ್ಚು ಮದ್ದು ನೀಡುವುದು, ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವುದು, ಪುರುಷರಿಗೆ ನಿರೋಧ್ ಎನ್.ಎಸ್.ವಿ. ವಿಧಾನವಿದೆ. ದಂಪತಿಗಳು ತಮ್ಮ ಮಕ್ಕಳ ಮತ್ತು ಕುಟುಂಬದ ಸುಖಕ್ಕಾಗಿ ಈ ಉಚಿತ ಯೋಜನೆಯನ್ನು ನಿಮ್ಮದಾಗಿಸಿ ನಿಮ್ಮ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಕುಟುಂಬದ ಶ್ರೇಯಸ್ಸಿಗಾಗಿ ಅನುಸರಿಸಿ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ, ಮಕ್ಕಳ ಲಸಿಕಾ ವೇಳಾಪಟ್ಟಿ ತಿಳಿಸಿ, ಕೋವಿಡ್–19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸುಜಾತ, ಆಶಾ ಕಾರ್ಯಕರ್ತೆಯರಾದ ಪ್ರೇಮಾ, ರೇಣುಕ, ಮಕ್ಕಳು, ತಾಯಂದಿರು ಇದ್ದರು.