ಪುರೋಹಿತಶಾಹಿಗಳ ಮೌಢ್ಯ ಮಾಂಗಲ್ಯ ಧಿಕ್ಕರಿಸಬೇಕು-ವಡ್ಡಗೆರೆ ನಾಗರಾಜಯ್ಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶಾಂತಕುಮಾರ್ ಪಿ ಮತ್ತು ದೀಪಾ ಆರ್ ಇವರ ಮಂತ್ರ ಮಾಂಗಲ್ಯ ಒಲವಿನ ವಿವಾಹವನ್ನು ಹಿರಿಯ ಕವಿ ಸಾಮಾಜಿಕ ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ
, ದಾರ್ಶನಿಕ ಕವಿ ಕುವೆಂಪು ಪ್ರಣೀತ ವಿವಾಹ ಸಂಹಿತೆಯನ್ನು ಬೋಧಿಸಿ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.

- Advertisement - 

ಬುದ್ಧ ಶಾಸನ ಮದುವೆ, ವಚನ ಮಾಂಗಲ್ಯ ಮದುವೆ, ಬಳಗದಾನ‌ ಮದುವೆ ಹಾಗೂ ಮಂತ್ರ ಮಾಂಗಲ್ಯ ಮದುವೆಯ ಅಗತ್ಯವನ್ನು ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿದರು.

- Advertisement - 

ಬ್ರಾಹ್ಮಣ ಪುರೋಹಿತರನ್ನು ಬಹಿಷ್ಕರಿಸಿ ನಡೆಸುವ ಬುದ್ಧ ಶಾಸನ ಮದುವೆ‘, ‘ಬಳಗದಾನ ಮದುವೆ‘, ‘ವಚನ ಮಾಂಗಲ್ಯ ಮದುವೆ‘, ‘ಮಂತ್ರ ಮಾಂಗಲ್ಯ ಮದುವೆ ಹಾಗೂ ಸಂವಿಧಾನ ಸಾಕ್ಷಿ ಮದುವೆಗಳು ಬ್ರಾಹ್ಮಣ ಪುರೋಹಿತಶಾಹಿಗಳು ಹೇರಿರುವ ಮೌಢ್ಯಗಳನ್ನು ಧಿಕ್ಕರಿಸುತ್ತವೆ. ಇಂತಹ ಮದುವೆಗಳು ಹೆಚ್ಚು ಹೆಚ್ಚು ಮುನ್ನೆಲೆಗೆ ಬರಬೇಕಿದೆ ಎಂದು ಅವರು ಕರೆ ನೀಡಿದರು.

ತಳಸಮುದಾಯಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಬಳಗದಾನ ಮದುವೆಯ ಪ್ರಧಾನ ಲಕ್ಷಣವೆಂದರೆ, ಗಂಡು ಮತ್ತು ಹೆಣ್ಣಿನ ಮನೆಗಳ ಮುಂದೆ ಹಸಿರು ಚಪ್ಪರ ಹಾಕಿ, ಕಟ್ಟೆಮನೆ ಯಜಮಾನರು, ಕುಲದ ಹಿರಿಕರು, ಬಂಧು ಬಳಗದವರು ಸೇರಿ ಮದುವೆಯಲ್ಲಿ ಗಂಡು- ಹೆಣ್ಣಿನ ಕೊರಳುಗಳಿಗೆ ಪರಸ್ಪರ ಸಂಬಂಧಮಾಲೆ ಧಾರಣೆ ಮಾಡಿಸುವುದು. ಸಂಬಂಧ ಮಾಲೆ ಧರಿಸಿಕೊಳ್ಳುವ ಮೂಲಕ ಸತಿಪತಿಯಾದವರಿಗೆ ಕುಲಸ್ವಾಮಿಗಳು, ಆದಿಮ ಬುಡಕಟ್ಟು ಮೂಲದಿಂದಲೂ ಈವರೆಗೆ ಸಾಗಿಬಂದಿರುವ ಸಂಸ್ಕೃತಿ ನಿಷ್ಠವಾದ ಕೆಲವು ಆಚರಣೆಗಳನ್ನು ಕೈಗೊಂಡು ಕುಟುಂಬ ಸ್ಥಾಪನೆಗೆ ಒಳಪಡಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

- Advertisement - 

ಸಂವಿಧಾನ ಸಾಕ್ಷಿ ಮದುವೆಪ್ರಕಾರ ಮದುವೆಯಾಗುವವರು ಪರಸ್ಪರ ಸಮಾನ ಸಂಬಂಧ ಮಾಲೆ ಧರಿಸಿಕೊಂಡು, ಅಂಬೇಡ್ಕರ್ ಅವರ ಸಂವಿಧಾನದ ರಕ್ಷಕರು ತಾವಾಗುತ್ತೇವೆಂದು ಹೊಣೆಗಾರಿಕೆ ಹೊರುವುದು ಹಾಗೂ ಅಂಬೇಡ್ಕರ್ ಅವರ ಆಶಯ ಮತ್ತು ತತ್ವಗಳಿಗೆ ಬದ್ದರಾಗುತ್ತೇವೆಂದು ಹಾಗೂ ತಮ್ಮ ವ್ಯಾಪ್ತಿಯಲ್ಲಿ ಸಿಗುವ ನಾಗರಿಕರನ್ನು ಬಾಬಾಸಾಹೇಬ್ ಅಂಬೇಡ್ಕರ್ ನವಯಾನದ ದಾರಿಯಲ್ಲಿ ನಡೆಸುವ ಜವಾಬ್ದಾರಿ ಹೊರಬೇಕಿದೆ ಎಂದು ಡಾ.ವಡ್ಡಗೆರೆ ನಾಗರಾಜಯ್ಯ ಕರೆ ನೀಡಿದರು.

ಶಿರಾ ತಾಲ್ಲೂಕಿನ ಕಸಾಪ ಅಧ್ಯಕ್ಷ ತಾವರೆಕೆ ಲಕ್ಷ್ಮಣ್ ಮಾತನಾಡಿ, ಮಂತ್ರ ಮಾಂಗಲ್ಯ ಒಲವಿನ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿರುವ ಶಾಂತಕುಮಾರ್ ಮತ್ತು ದೀಪಾ ಅವರಿಗೆ ವಿಶ್ವಮಾನವ ಧರ್ಮವನ್ನು ಪಾಲಿಸಬೇಕಾದ ಬಗೆಯನ್ನು ಕುರಿತು ಕಿವಿ ಮಾತು ಹೇಳಿದರು.

ಮುಖ್ಯ ಶಿಕ್ಷಕ ರಾಜಣ್ಣ ಭಾರತದ ಸಂವಿಧಾನದ ಪ್ರಸ್ತಾವನೆ ಪ್ರಮಾಣ ವಚನ ಬೋಧಿಸಿದರು. ಸಾಮಾಜಿಕ ‌ಕಾರ್ಯಕರ್ತ ಸಂತೋಷ್ ಕೋಡಿಹಳ್ಳಿ, ಸಂಶೋಧನಾರ್ಥಿ ಶಶಿಧರ್ ಕೋಡಿಹಳ್ಳಿ, ದಸಂಸ ಕಾರ್ಯಕರ್ತ ಭೂತರಾಜ್ ಮುಂತಾದವರು ಪಾಲ್ಗೊಂಡಿದ್ದರು. ಕವಿ ಶಿವಶಂಕರ್ ಸೀಗೆಹಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share This Article
error: Content is protected !!
";