ಹೆಣ್ಣು ಮಕ್ಕಳ ಮತ್ತು ದಮನಿತ ಸಾಮಾಜಿಕ ವಲಯಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಸಾಧುವಲ್ಲ-ವಡ್ಡಗೆರೆ ನಾಗರಾಜಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ನಾಲೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ
self assertion of womanhood against macho- manhood ರೂಕ್ಷ ಚರ್ಚೆಗಳು ಸಾಹಿತ್ಯಕ ಚರ್ಚೆಗಳ ಪರಿಧಿಯನ್ನು ಉಲ್ಲಂಘಿಸುತ್ತಿವೆ. ಕವಯಿತ್ರಿ

ಮಮತಾ ಜಿ ಸಾಗರ ಅವರ ಮೂರು ಸಾಲುಗಳ “ನಾನು” ಎಂಬ ಕವಿತೆ ಕುರಿತು ಮಾತ್ರವೇ ಇಲ್ಲಿ ಚರ್ಚೆ ನಡೆಯದೆ ಸಂಸ್ಕೃತದ ಕಾಳಿದಾಸ ಮತ್ತು ಶಂಕರಾಚಾರ್ಯ ಮುಂತಾದವರ ಸಾಹಿತ್ಯ ಸೃಜನೆಗಳ ಚರ್ಚೆಗೂ ಇದು ವಿಸ್ತರಿಸಿಕೊಂಡು ನಮ್ಮ ಖಾಸಗಿ ಸಂಗತಿಗಳನ್ನು ಕೂಡಾ ಕಟಕಟೆಗೆ ನಿಲ್ಲಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆಯಾದರೂ ಹೆಣ್ಣು ಮಕ್ಕಳ ಮತ್ತು ದಮನಿತ ಸಾಮಾಜಿಕ ವಲಯಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಪ್ರಯತ್ನಗಳು ಸಾಧುವಲ್ಲ. ಯಾವುದೇ ಕವಿ- ಕವಯಿತ್ರಿಯ ಸಾಹಿತ್ಯಕ ಅಭಿವ್ಯಕ್ತಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, “The poet has nothing do with his pretty” ಎನ್ನುತ್ತಾನೆ T.S.Eliot. ಹಾಗೆಯೇ ಮುಂದುವರೆದು “The poet is half expressed in his poetry” ಎಂದು  ಕವಿತೆಯಲ್ಲಿ ಕವಿಯನ್ನು ಹುಡುಕುವ ಬಗೆಯನ್ನೂ ತಿಳಿಸುತ್ತಾನೆ. ಹೀಗಿರಲು ಕವಿಯು ಬರೆದ ಕವಿತೆಯೊಂದು ವೈಯುಕ್ತಿಕ ನೆಲೆಯನ್ನು ದಾಟಿಕೊಂಡು ಸಮಷ್ಟಿಯ ಅನುಭವ ಲೋಕದ ಭಾಗವಾಗುತ್ತದೆ. ಇದನ್ನು ಕವಿಯು ತನ್ನ ಭಾವನೆಗಳಿಂದಲೂ ವ್ಯಕ್ತಿತ್ವದಿಂದಲೂ ತಪ್ಫಿಸಿಕೊಳ್ಳುವುದು ಎನ್ನುತ್ತಾನೆ ಎಲಿಯಟ್.

Poetry is not a turning loose of emotion, but an escape from emotion ; it is not the expression of personality but an escape from personality. But, of course, only those who have personality and emotion know what it means to want to escape from these” (ಕಾವ್ಯವು ಭಾವನೆಗಳ ಬಿಡುಗಡೆಯಲ್ಲ, ಬದಲಾಗಿ ಭಾವನೆಗಳಿಂದಲೇ ತಪ್ಪಿಸಿಕೊಳ್ಳುವುದು; ಅದು ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲ, ಬದಲಾಗಿ ವ್ಯಕ್ತಿತ್ವದಿಂದಲೇ ತಪ್ಪಿಸಿಕೊಳ್ಳುವುದು. ಆದರೆ, ಸಹಜವಾಗಿ, ವ್ಯಕ್ತಿತ್ವ ಮತ್ತು ಭಾವನೆಗಳನ್ನು ಹೊಂದಿರುವವರಿಗೆ ಮಾತ್ರ ಇವುಗಳಿಂದ ತಪ್ಪಿಸಿಕೊಳ್ಳಲು ಬಯಸುವುದರ ಅರ್ಥವೇನೆಂದು ತಿಳಿದಿದೆ) ಎಂದು ವ್ಯಕ್ತಿತ್ವ ಮತ್ತು ಭಾವನೆಗಳನ್ನು ಹೊಂದಿರುವ ಕವಿ ತಪ್ಪಿಸಿಕೊಳ್ಳುವುದರ ಬಯಕೆಯ ಅರ್ಥವನ್ನು ಕೂಡಾ ತಿಳಿದಿರುತ್ತಾನೆಂದು ಹೇಳುತ್ತಾನೆ ಟಿ.ಎಸ್. ಎಲಿಯಟ್.

 ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆಯು ಬಹಳ ಹಿಂದಿನಿಂದಲೂ ಸಾಗಿಬಂದಿರುವ ಭಾವನೆಗಳು ಮತ್ತು ವ್ಯಕ್ತಿತ್ವದಿಂದ ತಪ್ಪಿಸಿಕೊಳ್ಳುವ ಬಗೆಗಳ ಹುಡುಕಾಟದ ಮುಂದುವರಿಕೆಯೇ ಆಗಿದೆ. ಕಾವ್ಯವು public domain ಗೆ ಬಂದ ಬಳಿಕ ಕವಿಯ ಸಾಹಿತ್ಯಕ ಅಭಿವ್ಯಕ್ತಿಗಳಿಗೆ ಎದುರಾಗಿ ಬರುವ ಭಿನ್ನಮತೀಯ ಅಥವಾ ಸಹಮತೀಯ ಅಭಿಪ್ರಾಯಗಳಿಗೂ ಕವಿಯೇ ಹೊಣೆಯಾಗುತ್ತಾನೆ. 

ಏಕೆಂದರೆ, ಯಾವತ್ತೂ ತನ್ನ ಭಾವನೆಗಳಿಗೆ ಸೂಕ್ತವಾದ ಆಲೋಚನೆ ಮತ್ತು ಶಬ್ದಗಳನ್ನು ಕವಿಯೇ ಧ್ಯಾನಿಸಿ ಕಾವ್ಯದ ಶಬ್ದಶರೀರವನ್ನು ನಿರ್ಮಿಸಿರುತ್ತಾನೆ. ಬರೆಯುವವರೆಗೂ ಕವಿತೆ ಕವಿಯ ಭಾಷೆ, ಭಾವನೆ ಮತ್ತು ಆಲೋಚನೆಯ ಹಂಗಿನಲ್ಲಿಯೇ ಇರುತ್ತದೆ. ಒಂದೊಮ್ಮೆ ಬರೆದು ಅಭಿವ್ಯಕ್ತಿಸಿದ ಮೇಲೆ ಅದು ಓದುಗರ ಹಾಗೂ ಕೇಳುಗರ ಸಮಷ್ಟಿ ವಲಯಕ್ಕೆ ಬಂದುಬಿಡುತ್ತದೆ. ಕವಿ ಜಿ.ಎಸ್. ಶಿವರುದ್ರಪ್ಪನವರು, “ಎಲ್ಲ  ಕೇಳಲಿ ಎಂದು ನಾನು ಹಾಡುವುದಿಲ್ಲ. ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂದು ಹೇಳಿರುವಂತೆ ಕಾವ್ಯ ಸೃಜನೆಯು ಮೂಲಭೂತವಾಗಿ ಕವಿಯ ಅನಿವಾರ್ಯ ಸ್ವ-ಕರ್ಮ. ಕವಿಯ ಹಾಡನ್ನು ಯಾರೇ ಕೇಳಲಿ ಬಿಡಲಿ, ಎಲ್ಲರೂ ಕೇಳದಿದ್ದರೂ ಓದದಿದ್ದರೂ ಕೆಲವರಾದರೂ ಕೇಳುತ್ತಾರೆ, ಓದುತ್ತಾರೆ. ಕೇಳುವವರು ಅಥವಾ ಓದುವವರು ಪ್ರಶ್ನಿಸುವ ಭಿನ್ನಮತದ ಅಥವಾ ಒಪ್ಪುವ ಸಹಮತದ ಅಭಿಪ್ರಾಯ ದಾಖಲಿಸುವ ಅವಕಾಶವನ್ನು   ಕಳೆದುಕೊಳ್ಳಬಾರದು. ಓದುವ, ಕೇಳುವ ಹಾಗೆಯೇ ಪ್ರಶ್ನಿಸುವ ಪ್ರಕ್ರಿಯೆಗಳಿಂದಾಗಿಯೇ ಕಾವ್ಯದ ವಿಕಾಸವೂ ಸಾಧ್ಯವಾಗುತ್ತದೆ.

ಪ್ರಶ್ನಿಸುವ ಧ್ವನಿಗಳು ಅನೇಕ ಮತ್ತು ಪ್ರಶ್ನಿಸುವ ಬಗೆಗಳು ವಿಭಿನ್ನ. ಯಾಕೆಂದರೆ ಕಾವ್ಯವು ಓದುಗರ/ ಕೇಳುಗರ ವಿವಿಧ ಅನುಭವ ಸ್ತರಗಳೊಂದಿಗೆ ಪ್ರಯಾಣಿಸುತ್ತದೆ. ಆಯಾ ಯುಗಧರ್ಮದ ಮೌಲ್ಯಪ್ರಜ್ಞೆಯ ಪರೀಕ್ಷೆಗೆ ಕಾವ್ಯ ಎದುರಾಗುವ ಮೂಲಕವೇ ಅದರ ಪ್ರಸ್ತುತತೆ ಇರುತ್ತದೆ. ಸಹೃದಯಿಗಳು ಓದುವ ಪ್ರತಿಯೊಂದೂ ಕವಿತೆ ತನ್ನ ಓದಿನ ಸಂದರ್ಭದಲ್ಲಿ ಆಯಾ ಕಾಲದ ಮೌಲ್ಯಪ್ರಜ್ಞೆಯ ವಿಮರ್ಶೆಯ ಆವರಣಕ್ಕೆ ಬರುತ್ತದೆ. ಕಣ್ಣೆದುರಿನ ಸಾಮಾಜಿಕ ಪ್ರಶ್ನೆಗಳಿಗೆ ಉತ್ತರವಾಗಿ ಕವಿಯು ನೀಡುವ ಕೊಡುಗೆಯೇ ಕಾವ್ಯ. ಒಳ್ಳೆಯ ಕವಿತೆ ನಮ್ಮ ಆಲೋಚನಾ ವಿಧಾನವನ್ನು ಬದಲಾಯಿಸಲು ನೆರವಿಗೆ ಬರುತ್ತದೆ. ಅದು ಜನರ ನೋವಿಗೆ ಮಿಡಿಯುತ್ತಲೇ ಪ್ರಪಂಚದ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಕವಿಗಳ ಕವಿತೆಗಳ ಸಾಮಾಜಿಕ ಪ್ರಸ್ತುತತೆಯನ್ನು ಪ್ರಶ್ನಿಸುವ ಕೇಳ್ವಿಕೆಗಳಿಗೆ ಅವಕಾಶವಿಲ್ಲದ ಹೊರತು ಕವಿಯ ಕರ್ಮವೇ ವ್ಯರ್ಥ. ಆಗ ಅವನ ಕಾವ್ಯವೂ ವ್ಯರ್ಥವಲ್ಲವೇ..?

ಕವಿಗಳು ತಮ್ಮೊಳಗಿನ ಅನುಭವಗಳನ್ನು ಮಥಿಸಿ ಕಾವ್ಯದ ಮೂಲಕ ಅಭಿವ್ಯಕ್ತಿಗೊಳಿಸುವಾಗಲೇ ತಮ್ಮ ಕಾವ್ಯದ ಸಾಮಾಜಿಕ ಪರಿಣಾಮಗಳೇನೆಂಬುದನ್ನು ಕುರಿತು ದೂರಗಾಮಿ ದೃಷ್ಟಿಯಿಂದಲೂ ಸೂಕ್ಷ್ಮತೆಯಿಂದಲೂ ವಿಚಾರ ಮಾಡಿಯೇ ಅಭಿವ್ಯಕ್ತಿಸಬೇಕಿದೆ. ವಿಚಾರಮತಿಯುಳ್ಳ ಕವಿ ಎಷ್ಟೇ ಸೂಕ್ಷ್ಮತೆಯಿಂದ, ತಾಯ್ತನದ ಭಾವುಣಿಕೆಯಿಂದ, ವಿಶಾಲ ಬಂಧುತ್ವ ಪ್ರೇಮದಿಂದ ಬರೆದಾಗಲೂ ಕೆಲವೊಮ್ಮೆ ವ್ಯತಿರಿಕ್ತವಾಗಿ ಕಾವ್ಯವು ಸಮಾಜದ ಮೇಲೆ ಪರಿಣಾಮಿಸಿಬಿಡುತ್ತದೆ. ಆಗಲೂ ಕೇಳ್ವಿಗಳಿಗೆ ಉತ್ತರಿಸುವ ಸಹನಾಮಯ ಗುಣವನ್ನು ಕವಿ ಮೈಗೂಡಿಕೊಳ್ಳಬೇಕಾಗುತ್ತದೆ. ಉತ್ತರ ಹುಡುಕುವ ಜವಾಬ್ದಾರಿ ಕೇವಲ ಕವಿಯೊಬ್ಬನಿಗೆ ಸೇರಿದ್ದೆಂದು ತಿಳಿಯುವುದು ತಪ್ಪು. ಕೇಳ್ವಿಗಳಿಗೆ ಉತ್ತರ ಹುಡುಕುವುದು ಕೂಡಾ ಪ್ರಜ್ಞಾವಂತರ ಸಾಮುದಾಯಿಕ ಜವಾಬ್ದಾರಿಯಾಗಿರುತ್ತದೆ.

ಇವತ್ತಿನ ಸಾಮಾಜಿಕ ವಿದ್ಯಮಾನಗಳನ್ನು ಗಮನಿಸಿದಾಗ ಓದುಗರ ಹಾಗೂ ಕೇಳುಗರ ಕೇಳ್ವಿಕೆಗಳು ಬಲು ರೂಕ್ಷವಾಗಿವೆ. ಬ್ರಿಟಿಷ್ ಭಾರತದಲ್ಲಿದ್ದ ಪೊಲೀಸರು ಠಾಣೆಗಳಲ್ಲಿ ಲಾಕಪ್ಪುಗಳಲ್ಲಿ ತಪ್ಪಿತಸ್ಥರನ್ನು (ಆರೋಪಿಗಳನ್ನು) ತನಿಖಿಸುವ ಭಾಷೆ, ಶೈಲಿ ಮತ್ತು ವಿಧಾನಗಳ ಕೇಳ್ವಿಕೆಗಳು ಮೇಲುಗೈ ಸಾಧಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆಯೆಂಬುದರ ಕನಿಷ್ಠ ಗುರುತು ಕೂಡಾ ಈಗಿನ ಕೇಳ್ವಿಕೆಗಳಲ್ಲಿ ಕಾಣಿಸುತ್ತಿಲ್ಲ. ಪ್ರಶ್ನಿಸುವ ಮನೋಧರ್ಮ ಸ್ವಾಗತಾರ್ಹ. ಪ್ರಶ್ನಿಸದೆಯೇ ಶಿಕ್ಷಿಸುವುದಾಗಲೀ ಆಖೈರು ತೀರ್ಪು ಬರೆಯುವ ತೀರ್ಮಾನಕ್ಕೆ ಬರುವುದಾಗಲೀ ನಾಗರಿಕ ಲಕ್ಷಣವಲ್ಲ.

ನಮ್ಮನ್ನು ರಾಜ ರಾಣಿಯರು ಆಳುತ್ತಿದ್ದ ರಾಜಸತ್ತೆಯ ಕಾಲದಲ್ಲಿ ರಾಜಗುರುವಿನ ವಾಕ್ಕಿಗೆ ಚ್ಯುತಿಬಾರದಂತೆ ನಡೆದುಕೊಳ್ಳುವುದೇ ರಾಜಧರ್ಮದ ಪಾಲನೆ ಎಂದು ತಿಳಿಯಲಾಗಿತ್ತು. ರಾಜಗುರುಗಳು ಸಹಜವಾಗಿ ಪುರೋಹಿತಶಾಹಿಗಳೇ ಆಗಿರುತ್ತಿದ್ದರು. ಹಾಗಾಗಿಯೇ ಆಗಿನ ಕಾಲದ ಸಂಸ್ಕೃತ ಕವಿಗಳು ತಮ್ಮ ಮತಧಾರ್ಮಿಕ ಸಾಹಿತ್ಯ ಕೃತಿಗಳನ್ನು ಯಾರೇ ಪ್ರಶ್ನಿಸುವ ಸ್ವಾತಂತ್ರ್ಯವನ್ನು ಪ್ರತಿಬಂಧಿಸಿ ರಾಜಠಸ್ಸೆಯ ಮುದ್ರೆಯೊತ್ತಿದರು. ರಾಮಾಯಣ ಮಹಾಭಾರತ ಭಗವದ್ಗೀತೆ ಮನುಸ್ಮೃತಿ ಮಾತ್ರವಲ್ಲದೆ ಸಂಸ್ಕೃತ ಕವಿ ಕಾಳಿದಾಸ, ಶಂಕರಾಚಾರ್ಯ ಮುಂತಾದವರ ಕೃತಿಗಳು ಇಂತಹ ರಾಜಮುದ್ರೆ ಪಡೆದುಕೊಂಡವು. ಹಾಗಾಗಿಯೇ ಸಂಸ್ಕೃತ ಭಾಷೆಯಲ್ಲಿ ಪ್ರಕಟವಾದ ಕೃತಿಗಳು ಪ್ರಮಾಣ ಗ್ರಂಥಗಳಾದವು. ಭಗವದ್ಗೀತೆಯನ್ನು ಅಂತಹ ಪ್ರಮಾಣ ಗ್ರಂಥವನ್ನಾಗಿ ಕೋರ್ಟುಗಳಲ್ಲಿ ಇತ್ತೀಚಿನವರೆಗೂ ಅಳವಡಿಸಲಾಗಿತ್ತು. ಸಂಸ್ಕೃತವೇ ಪ್ರಭುತ್ವ ಭಾಷೆಯಾದ ಕಾರಣದಿಂದ ರಾಜಠಸ್ಸೆಯೊಂದಿಗೆ ಆ ಭಾಷೆಯ ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ ಸಂಸ್ಕೃತ ಪದಗಳು ಕೂಡಾ ಮಡಿಯಿರದ ರಚನೆಗಳಾಗಿ ಸಾಮಾಜಿಕ ಅಂಗೀಕಾರ ಮತ್ತು ಸ್ವೀಕೃತಿ ಪಡೆದುಕೊಂಡವು. ಇದಕ್ಕೆ ಜನಪ್ರಿಯ ಉದಾಹರಣೆಗಳನ್ನು ನೋಡುವುದಾದರೆ…

“ಕಮಲಾ ಕುಚ ಚೂಚುಕ ಕುಂಕುಮತೋ ನಿಯತಾರುಣಿ ತಾತುಲ ನೀಲತನೋ” ಎಂಬ ಗೀತೆಯನ್ನು ಡಾ.ಎಂ.ಎಸ್.ಸುಬ್ಬಲಕ್ಷ್ಮೀ ಅವರ ಕಂಠದಲ್ಲಿ ಲಕ್ಷ್ಮಿಯ ಮೊಲೆ ತೊಟ್ಟುಗಳು ಕುಂಕುಮದಂತೆ ಶೋಭಿಸುತ್ತವೆ ಎಂದು ಸುಪ್ರಭಾತವನ್ನಾಗಿ ಆಲಿಸುತ್ತಿದ್ದೇವೆ. ಇದೇ ದೇವಿ ಸರಸ್ವತಿಯನ್ನು ಕಾಳಿದಾಸ ಕವಿಯು ತನ್ನ ಶಾಮಲಾದೇವಿ ದಂಡಕದಲ್ಲಿ  “ಕುಚೋನ್ನತೆ ಕುಂಕುಮರಾಗಶೋಣೆಅಂದರೆ ದೊಡ್ಡ ಗಾತ್ರದ ಮೊಲೆಯವಳು ಸರಸ್ವತಿ ದೇವಿ ಎಂದು ವರ್ಣಿಸಿರುವುದನ್ನು ಡಾ.ರಾಜ್ ಕುಮಾರ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. “ಸಮುದ್ರವಸನೇ ದೇವಿ ಪರ್ವತ ಸ್ತನ ಮಂಡಲೇ” ಪರ್ವತಗಳನ್ನೇ ಮೊಲೆಗಳನ್ನಾಗಿ ಹೊಂದಿರುವವಳೆಂದು ಭೂದೇವಿಯನ್ನು ಕೀರ್ತಿಸಲಾಗಿದೆ. ಹೀಗೆ ದೇವಾನು ದೇವತೆಯರನ್ನು ನೇರಾನೇರ ಲೈಂಗಿಕ ಅಂಗಾಂಗಗಳ ಶಬ್ದಗಳಿಂದಲೇ ಸೂಚಿಸಿ ಭಕ್ತಿಪರವಶ ಗೀತೆಗಳನ್ನಾಗಿಸಲಾಗಿದೆ. ಇವೆಲ್ಲವೂ ಇರುವುದು ಸಂಸ್ಕೃತ ಭಾಷೆಯಲ್ಲಿ. ಇವತ್ತಿನ ಲೇಖಕರಾದ ನಾವು, ಹೀಗೇನಾದರೂ ಇದೇ ಲೈಂಗಿಕ ಅಂಗಾಂಗಗಳನ್ನು ಸೂಚಿಸಿ ದೇವಾನು ದೇವತೆಯರ ಬಗ್ಗೆ ನಮ್ಮ ನಮ್ಮ ದೇಶಭಾಷೆಗಳಲ್ಲಿ ವರ್ಣಿಸಿ ಬರೆದರೆ ಏನು ಗತಿ ? ಎಂಬ ಕೇಳ್ವಿಕೆಗಳು ನಮಗೆ ಬಹಳ ಮುಖ್ಯ.

ಪ್ರಜಾಪ್ರಭುತ್ವ ವ್ಯವಸ್ಥೆಯ ಇಂದಿಗೂ ಕೂಡಾ ಕೇಳ್ವಿಕೆಗಳನ್ನು ಹತ್ತಿಕ್ಕುವ ಕೋಮುವಾದಿ ರಾಜಕಾರಣ ನಡೆಯುತ್ತಿದೆ. ತಪ್ಪು ಮಾಡಿದವರನ್ನು ಬ್ರಿಟಿಷ್ ಭಾರತದ ಆಗಿನ ಪೊಲೀಸರು ತನಿಖಿಸಿ ದಂಡಿಸುತ್ತಿದ್ದ ರೀತಿಗಿಂತಲೂ ಅಮಾನುಷವಾಗಿಯಾವುದೇ ತಪ್ಪು ಮಾಡದಿದ್ದರೂ ಹೆಣ್ಣಾಗಿ- ಅಸ್ಪೃಶ್ಯನಾಗಿ ಹುಟ್ಟಿದ ತಪ್ಪಿಗಾಗಿ ಮನುಧರ್ಮೀಯರು ತಮ್ಮದೇ ಸಹಮಾನವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದಾರೆ.

ಇಂತಹ ಧಾರ್ಮಿಕ ಪಠ್ಯಗಳನ್ನು ಮೊದಲಿಗೆ ಗಂಭೀರವಾಗಿ ಪ್ರಶ್ನಿಸಿದ್ದು ಬಸವಣ್ಣ ಮತ್ತಿತರ ವಚನಕಾರರು. ರಾಜಸತ್ತೆಯು ಕೊನೆಗೊಳ್ಳುವುದರೊಂದಿಗೆ ಪುರೋಹಿತಶಾಹಿಯೇನೂ ಕೊನೆಗಾಣಲಿಲ್ಲ. ಬಸವಣ್ಣನ ನಂತರದಲ್ಲಿ ಪುರೋಹಿತಶಾಹಿಯ ಅಕರಾಳ ವಿಕರಾಳ ಪರಿಣಾಮಗಳನ್ನು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಮತ್ತು ಅಸ್ಪೃಶ್ಯರು ಅನುಭವಿಸುತ್ತಿದ್ದುದನ್ನು ಸ್ವಯಂ ಕಂಡುಂಡ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಭಗವದ್ಗೀತೆಯ ಮರ್ಮವನ್ನು ಭೇದಿಸಿದರು. ರಾಮ ಮತ್ತು ಕೃಷ್ಣನನ್ನು ಪ್ರಶ್ನಿಸಿದರು. ಪ್ರಶ್ನಿಸುವುದನ್ನು ಹೇಳಿಕೊಟ್ಟ ಅಂಬೇಡ್ಕರ್ ಅವರೇ ನೀಡಿರುವ ಪ್ರಶ್ನಿಸುವ ಅವಕಾಶವನ್ನು ನಾವು ಕಳೆದುಕೊಳ್ಳಬಾರದು.  ಮಹಿಳೆಯರು, ಅಸ್ಪೃಶ್ಯರು, ಅಲೆಮಾರಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಪ್ರಜಾಸತ್ತೆಯ ಸಂವಿಧಾನದ ಬೆಳಕಿನಲ್ಲಿ ಹೊಸ ಕೇಳ್ವಿಕೆಗಳೊಂದಿಗೆ ತಮ್ಮ ಶಕ್ತಿಯನ್ನು ದೃಢಪಡಿಸಬೇಕಿದೆ. ನಮ್ಮ ಸಂವಿಧಾನದಿಂದ ನಮಗೆ ಸಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶವನ್ನು ಹಿಂದೆಂದಿಗಿಂತಲೂ ಈಗ ತುಂಬಾ ಜವಾಬ್ದಾರಿಯುತವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ.

ಪೂರ್ವದ ಸಂಸ್ಕೃತ ಕವಿಗಳು, ಲಾಕ್ಷಣಿಕರು, ಸಿದ್ಧಾಂತಿಗಳು, ವೇದಾಂತಿಗಳು ರಾಜಮುದ್ರೆಯೊಂದಿಗೆ ಬಿಟ್ಟುಹೋಗಿರುವ ಪೌರುಷೇಯ ರಚನೆಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಬೇಕಾಗಿದೆ. ಬುದ್ಧ ಬಸವಣ್ಣ ಅಂಬೇಡ್ಕರ್ ಕುವೆಂಪು ಅವರಂತೆ ವೈಚಾರಿಕ ಕೇಳ್ವಿಕೆಗಳನ್ನು ಮಂಡಿಸಬೇಕಿದೆ. ಬಹುಮುಖ್ಯವಾಗಿ ಅಸ್ಪೃಶ್ಯ ಮತ್ತು ಹೆಣ್ಣನ್ನು ಕುರಿತ ಸಾಂಪ್ರದಾಯಿಕ ನಿರೂಪಣೆಗಳನ್ನು ಮೊದಲು ಪ್ರಶ್ನಿಸಬೇಕಿದೆ, ಅಲ್ಲವೇ ?

ಹೆಣ್ಣನ್ನು ಕುರಿತು ಸಂಸ್ಕೃತ ಕವಿಗಳ ವರ್ಣನೆಗಳ ಮಾದರಿಯಲ್ಲಿಯೇ ನಮ್ಮ ಕನ್ನಡದ ಕವಿಗಳು ಕೂಡ ವರ್ಣಿಸಿದ್ದಾರೆ. ಲಕ್ಷ್ಮೀಶ ಗರ್ಭಿಣಿ ಸೀತೆಯನ್ನು ವರ್ಣಿಸುವಾಗ ಬಳಸುವ ಶಬ್ದಗಳಾಗಲೀ, ಹಾಗೆಯೇ ಇವನ ಪ್ರಭಾವಕ್ಕೊಳಗಾದ ಮುದ್ದಣನು ರಾಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಸಭೆಗೆ ನಡೆದು ಬರುತಿದ್ದ ಸೀತೆಯ ಅಂಗಾಂಗಗಳನ್ನು  ವರ್ಣಿಸುವುದಾಗಲೀ ಸಂಸ್ಕೃತ ಕವಿಗಳ ವರ್ಣನಾ ವಿಲಾಸದಂತೆಯೇ ಕಾಣಿಸುತ್ತದೆ. ಪುರುಷ ಕವಿಗಳು ಹೆಣ್ಣನ್ನು ಹೀಗೇಕೆ ಶಬ್ದಗಳಿಂದ ಅಲಂಕರಿಸುತ್ತಾರೆ ? ಹೆಣ್ಣು ಅಲಂಕಾರ ಪ್ರಿಯೆ ಎಂದೇ ? ನಮ್ಮ ಕನ್ನಡ ಕವಿಗಳು ಕೂಡಾ ಯಾಕೆ‌  ಸಂಸ್ಕೃತ ಕವಿಗಳ ಪ್ರಭಾವದಿಂದ ಬಿಡಿಸಿಕೊಳ್ಳಲಾಗಲಿಲ್ಲ?’

ವಾಸ್ತವವಾಗಿ ಸಾಹಿತ್ಯ ಬರೆವಣಿಗೆ ದಾಖಲಾಗಿರುವುದೇ ಪುರುಷ ಬರೆಹಗಾರರಿಂದ. ಹೆಣ್ಣಿಗೆ ಶಿಕ್ಷಣ ನಿರಾಕರಿಸಿದ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಮಹಿಳೆಯರಿಗೆ ಸಮಾನ ಶಿಕ್ಷಣ ನೀಡಿದ ಅನ್ಯ ದೇಶಗಳಲ್ಲಿ ಕೂಡಾ ಇದೇ ಚಿತ್ರಣವನ್ನು ನಾವು ಗಮನಿಸುತ್ತೇವೆ. ಇದಕ್ಕೆ ಮುಖ್ಯ ಕಾರಣ ಪುರುಷ ಪಾರಮ್ಯ. ಹೆಣ್ಣನ್ನು ಭೋಗವಿಲಾಸದ ಆಟಿಕೆಯಂತೆ ಅಥವಾ ಉಪಭೋಗದ ಸರಕಿನಂತೆ ಕಂಡಿರುವ ಭಾರತೀಯ ಪುರುಷ ಸಮಾಜ ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾಃಎಂದು ಹೇಳಿರುವುದು ಬರಿ ಬೂಟಾಟಿಕೆಯ ಮಾತು. ಅರ್ಧನಾರೀಶ್ವರ ಕಲ್ಪನೆ ಹೊರತಾಗಿ ಹೆಣ್ಣಿಗೆ ಯಾವತ್ತಿಗೂ ಪುರುಷನಿಗೆ ಸಮನಾದ ಸ್ಥಾನವನ್ನು ಭಾರತೀಯರು ನೀಡಿರುವುದಿಲ್ಲ. ಶಾಲಾ ಕಾಲೇಜು ದಾಖಲಾತಿಗಳಲ್ಲಿ ಪ್ರಥಮ ಲಿಂಗದಲ್ಲಿ ಪುರುಷ ಹಾಗೂ ಎರಡನೇ ಲಿಂಗದಲ್ಲಿ ಸ್ತ್ರೀಲಿಂಗ ದಾಖಲಾಗುವ ಈಗಿನ ಲಿಂಗಸ್ಥಾನ ನಿರ್ಧಾರವೂ ಕೂಡಾ ಪುರುಷ ನಿರ್ಮಿತಿಯಾಗಿದೆ. ಗಂಡು- ಹೆಣ್ಣು ಇಬ್ಬರೂ ಸೇರಿಕೊಂಡು ಲೈಂಗಿಕ ಅಲ್ಪಸಂಖ್ಯಾತರನ್ನು ತೃತೀಯ ಲಿಂಗದ ಸ್ಥಾನಕ್ಕೆ ದೂಡಿರುವ ಲಿಂಗ ರಾಜಕಾರಣ ನಮ್ಮಲ್ಲಿದೆ. ಹೆಣ್ಣಿನ ಲಿಂಗಸ್ಥಾನವನ್ನು ಗಂಡು ನಿರ್ದೇಶನ ಮಾಡಿದುದರಿಂಲೇ ಸೀಮನ್ ದ ಬೋವಾ ಅವರು “ಸೆಕೆಂಡ್ ಸೆಕ್ಸ್” ಕೃತಿ ಬರೆದಿರುವುದು. ಇಂತಹ ಪೌರುಷೇಯ ನಡೆಗಳೇ ಸಾಹಿತ್ಯ ಕೃತಿಗಳಲ್ಲಿ ಹೆಣ್ಣಿನ ವರ್ಣನೆಗೆ ಕಾರಣ ಮಾಡಿಕೊಟ್ಟಿವೆ.

ಕನ್ನಡದ ಕವಿಗಳು ಸಂಸ್ಕೃತ ಕವಿಗಳನ್ನು ಸಾಹಿತ್ಯ ಕೃತಿಗಳಲ್ಲಿ ಕೇವಲ ಲಾಕ್ಷಣಿಕ ಶೈಲಿ ಶಿಲ್ಪ ಮಾತ್ರವಲ್ಲದೆ ತಾವು ಆಯ್ಕೆಮಾಡಿಕೊಂಡ ವಸ್ತು ನಿರ್ವಣೆ ಮತ್ತು ಉಪಚಾರ ಸಂಗತಿಯಲ್ಲೂ ಅನುಕರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಂಸ್ಕೃತವನ್ನು ದೇವಭಾಷೆ ಎಂಬ ಅಪಪ್ರಥೆಯ ಹಂತಕ್ಕೆ ಎತ್ತರಿಸಿದ್ದು ಹಾಗೂ ಸಂಸ್ಕೃತ ಸಾಹಿತಿಗಳನ್ನು ಆಗಿನ ರಾಜರು ಕೃಪಾಪೋಷಣೆಯಲ್ಲಿ ಗೌರವಿಸಿ ಅವರ ಕೃತಿಗಳನ್ನು ಪ್ರಮಾಣ ಗ್ರಂಥಗಳನ್ನಾಗಿ ಜನಸಾಮಾನ್ಯರ ಮೇಲೆ ಹೇರಿರುವುದೇ ಆಗಿದೆ. ಪ್ರಭುತ್ವ ಯಂತ್ರವು ಕುಲೀನರ ಸಂಸ್ಕೃತ ಕೃತಿಗಳನ್ನು ಜನಭಾಷಿಕರ ಮೇಲೆ ಗಮಕ ಕಥಾಕಾಲಕ್ಷೇಪ ಅವಧಾನ ಇನ್ನೂ ಮುಂತಾದ ಮಾಧ್ಯಮಗಳ ಮೂಲಕ ಹೇರಿದ ಪರಿಣಾಮವಾಗಿ ಅವುಗಳು ಪ್ರತಿಪಾದಿಸುವ ಮೌಲ್ಯಗಳನ್ನು ಜನಸಾಮಾನ್ಯರು ಅನುಸರಿಸಲು ಪ್ರಯತ್ನಿಸಿರುತ್ತಾರೆ.

 ಧರ್ಮಗುರುವಿನ ಸ್ಥಾನಕ್ಕೇರಿದ ಶಂಕರಾಚಾರ್ಯನ ಸೌಂದರ್ಯ ಲಹರಿಯು ರಾಜಮುದ್ರೆಯೊಂದಿಗೆ ಧಾರ್ಮಿಕ ಮುದ್ರೆಯನ್ನೂ ಪಡೆದ ಬಳಿಕ ಹೆಣ್ಣನ್ನು ವರ್ಣಿಸುವ ಪುರುಷಶಾಹಿಯ ಪಡಿನೆಳಲು ಸಾರ್ವಜನಿಕ ಲಜ್ಜೆಯಿರದೆ ಸೃಜನಶೀಲ ಕವಿಗಳಲ್ಲಿ ಕಾಣಿಸತೊಡಗಿತು. ಇಂತಹ ಅನುಕರಣಾ ಪ್ರತ್ಯಯವು ಹೆಣ್ಣನ್ನು ಹೇಗೆಲ್ಲಾ ವರ್ಣಿಸಲು ಅವಕಾಶ ಕಲ್ಪಿಸಿ ಕನ್ನಡ ಕವಿಗಳಲ್ಲಿಯೂ ವ್ಯಕ್ತಗೊಂಡಿದೆ. 

ಇತ್ತೀಚೆಗೆ ಆಧುನಿಕ ಶಿಕ್ಷಣದ ಪ್ರಭಾವದಿಂದಾಗಿ ಮಹಿಳಾ ಚಳವಳಿ ಮತ್ತು ಮಹಿಳಾವಾದಿ ಸಾಹಿತ್ಯ ಮೂಡಿಬಂದಿದ್ದು ಪೌರುಷೇಯ ರಚನೆಗಳನ್ನು ನಿರಚಿಸುವ ಉತ್ಕರ್ಷವನ್ನು ನಾವು ಕಾಣುತ್ತಿದ್ದೇವೆ. ಇದು ಇನ್ನಷ್ಟು ಢಾಳಾಗಿ ಮತ್ತು ದಿಟ್ಟವಾಗಿ ವ್ಯಕ್ತವಾಗಬೇಕಿದೆ.
ಲೇಖನ-ವಡ್ಡಗೆರೆ ನಾಗರಾಜಯ್ಯ 8722724174.

Share This Article
error: Content is protected !!
";