ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಜನರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ಬಳಿ ನೆಲೆಸಿರುವ ಶ್ರೀ ಕಣಿವೆ ಮಾರಮ್ಮ ದೇವತೆಯ ಬ್ರಹ್ಮ ರಥೋತ್ಸವ ಸಾವಿರಾರು ಜನ ಭಕ್ತ ಸಮೂಹದ ನಡುವೆ ಭಕ್ತಿ ಭಾವದಿಂದ ಅದ್ಧೂರಿಯಾಗಿ ನೆರವೇರಿತು.
ಶ್ರೀ ಕಣಿವೆ ಮಾರಮ್ಮ ದೇವಿಯನ್ನು ದೇವಾಲಯದಿಂದ ವಿವಿಧ ವಾದ್ಯ ಸಂಗೀತಗಳೊಂದಿಗೆ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ರಥೋತ್ಸವ ನಡೆಯಿತು.
ದಾರಿ ಯುದ್ದಕ್ಕೂ ಅನೇಕ ಜನ ಭಕ್ತರು ಸಾಗಿ ಬಂದರು. ಜಾತ್ರೆ ಅಂಗವಾಗಿ ತಿಂಡಿ ತಿನಿಸುಗಳ ಅಂಗಡಿಗಳು, ಮಕ್ಕಳ ಆಟಿಕೆಗಳು, ಹೆಣ್ಣು ಮಕ್ಕಳ ಬಳೆ ಅಲಂಕಾರಿಕ ವಸ್ತುಗಳು, ಬೆಂಡು ಬತ್ತಾಸು, ವ್ಯಾಪಾರ ಜೋರಾಗಿತ್ತು. ವಾಣಿವಿಲಾಸಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಬೇರೆ ಬೇರೆ ಊರುಗಳಿಂದ ಬಂದಿದ್ದ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.