ಎಸ್ಟಿ ಮೀಸಲಾತಿ ಗುತ್ತಿಗೆ ಪಡೆದ ರೀತಿ ವರ್ತಿಸುತ್ತಿರುವ ವಾಲ್ಮೀಕಿ ಗುರು ಪೀಠ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾಡುಗೊಲ್ಲ ಮತ್ತು ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದನ್ನು ನಾವುಗಳು ವಿರೋಧಿಸುತ್ತಿಲ್ಲ. ಇದನ್ನು ವಿರೋಧಿಸುವಂತೆ ಪ್ರಚೋಧಿಸಿ ಜಾತಿ ಮತ್ತು ಪಂಗಡಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವವರ ವಿರುದ್ದ ಎಚ್ಚರಿಕೆಯಿಂದ ಇರುವಂತೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ಗೆರೆಗಲ್ ಪಾಪಯ್ಯ ಮನವಿ ಮಾಡಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ತಿಂಗಳ 18 ಹರಿಹರ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ನಾಯಕ ಜಾತಿಗೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆಗೊಳಿಸುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸುವಂತೆ ಮ್ಯಾಸ ನಾಯಕ ಬುಡಕಟ್ಟು ಜನರನ್ನು ಕುರುಬರ ವಿರುದ್ದ ಎತ್ತಿ ಕಟ್ಟುವ ಕುತಂತ್ರ ರೂಪಿಸಿ ಮ್ಯಾಸ ನಾಯಕ, ತಳವಾರ, ಪರಿವಾರ ಇವರುಗಳನ್ನು ಹೋರಾಟಕ್ಕೆ ಇಳಿಯುವಂತೆ ಗೊಂದಲ ಸೃಷ್ಠಿ ಮಾಡುತ್ತಿರುವುದಕ್ಕೆ ಕಿವಿಗೊಡಬಾರದೆಂದು ಮ್ಯಾಸ ನಾಯಕರನ್ನು ಎಚ್ಚರಿಸಿದರು.

- Advertisement - 

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಕುರುಬ ಜನಾಂಗ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಲು ಅರ್ಹತೆ ಹೊಂದಿದೆಯೆಂಬ ವರದಿ ನೀಡಿದೆ.

1976 ರಲ್ಲಿ ಮ್ಯಾಸ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿದೆ. ಎಸ್.ಟಿ ಮೀಸಲಾತಿ ಯಾರ ಮನೆ/ಮಠದ ಸ್ವತ್ತಲ್ಲ. ವಾಲ್ಮೀಕಿ ಗುರು ಪೀಠದವರು ಎಸ್ಟಿ ಮೀಸಲಾತಿಯನ್ನು ಗುತ್ತಿಗೆ ಪಡೆದ ರೀತಿ ವರ್ತಿಸುವಂತಿದೆ.

- Advertisement - 

ಸಂವಿಧಾನದಡಿ ಆಯಾ ವರ್ಗದ ಜಾತಿ ಜನಾಂಗದವರಿಗೆ ಅರ್ಹತೆ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಮಾನ ಹಕ್ಕಿದೆ. ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಕುರುಬರು ಸೇರ್ಪಡೆಯಾಗಲು ವಿಶಿಷ್ಟವಾದ ಬುಡಕಟ್ಟು ಲಕ್ಷಣಗಳಿದೆಯೋ ಇಲ್ಲವೋ ಎನ್ನುವುದನ್ನು ರಾಜ್ಯ ಸರ್ಕಾರಗಳು ವರದಿ ತಯಾರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತದೆ. ಆಗ ಸಂಸತ್ನಲ್ಲಿ ಚರ್ಚಿಸಿ ಅಂತಹ ಜಾತಿಗಳನ್ನು ಪರಿಶಿಷ್ಟ ಪಂಗಕ್ಕೆ ಸೇರಿಸುತ್ತದೆನ್ನುವ ಸತ್ಯ ಗೊತ್ತಿದ್ದರೂ ವಿನಾ ಕಾರಣ ಗೊಂದಲ ಸೃಷ್ಟಿಸಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಬಾರದೆಂದರು.

ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಸಿ.ಎಸ್.ಜೋಗೇಶ್, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಮಲ್ಲೇಶ್ ಪಿ.ಜಾಲಿಕಟ್ಟೆ, ಎಂ.ಕೆ.ಬೋಸಪ್ಪ, ಚಂದ್ರಣ್ಣ, ಗಿರೀಶ್, ಕೆ.ಬಿ.ಓಬಣ್ಣ, ಮಂಜುನಾಥ, ಡಾ.ಅನ್ನಪೂರ್ಣ ಜೋಗೇಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Share This Article
error: Content is protected !!
";