ರಾಯಚೂರು ವಿಶ್ವ ವಿದ್ಯಾಲಯಕ್ಕೆ ವಾಲ್ಮೀಕಿ ಹೆಸರು: ಸಿದ್ದರಾಮಯ್ಯ ಘೋಷಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಲಾ  ಪರಿಶಿಷ್ಟ ವರ್ಗದ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವ ವಿದ್ಯಾಲಯಕ್ಕೆ  ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು. 

ಇಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ವಿಧಾನಸೌಧದ  ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ  ಮಾತನಾಡಿದ ಮುಖ್ಯಮಂತ್ರಿಗಳು, ತಳಸಮುದಾಯದಲ್ಲಿ ಹುಟ್ಟಿ ಸಂಸ್ಕøತ ಕಲಿತು 24 ಸಾವಿರ  ಶ್ಲೋಕಗಳು, 500 ಸಂಕಲನಗಳು ಹಾಗೂ 7 ಕಾವ್ಯಗಳನ್ನೊಳಗೊಂಡ ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ಯ ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರು ವಿಶ್ವಮಾನವರಾಗಿದ್ದರು. ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ ಎಂದರು.

  ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು.  ಇಂತಹ ಸಮಯದಲ್ಲಿ ರಾಮಾಯಣ ಬರೆದವರು ಮಹರ್ಷಿ ವಾಲ್ಮೀಕಿ ಸಮುದಾಯದವರು. ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು ಎಂದರು.

ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಶಿಕ್ಷಣ ಕಲಿತು ಬರೆದರು. ಜಗತ್ತಿಗೆ ಪ್ರೇರಣೆ ಆದರು. ವಾಲ್ಮೀಕಿಯವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ. ರಾಮನ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದರು.

 ಎಸ್‍ಸಿಎಸ್‍ಪಿ/ಟಿಎಸ್‍ಪಿ ಮೂಲಕ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ.24.1 ರಷ್ಟು ಹಣವನ್ನು ಮೀಸಲಿಡಬೇಕು ಎಂದು ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಕಾನೂನು ತಂದಿದ್ದು ನಮ್ಮ ಸರ್ಕಾರ. ಅಲ್ಲದೆ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಮ್ಮ ಸರ್ಕಾರ. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆಯನ್ನು ಮುಂದಿನ ವರ್ಷದೊಳಗೆ ಮಾಡಲಾಗುವುದು ಎಂದರು.

ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದ ಹೊರತು ಸಮಾನತೆ ಬರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ.

ನಮ್ಮ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ಹಾಗೂ ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.

 ನಾನು ಹೇಳಿದ್ದೀನಿ ಎನ್ನುವ ಕಾರಣಕ್ಕೆ ನೀವು ಇದನ್ನೆಲ್ಲಾ ನಂಬಬೇಡಿ. ಸತ್ಯ, ಸುಳ್ಳನ್ನು ಪರಾಮರ್ಷಿಸಿ, ವಿವೇಚಿಸಿ, ಸತ್ಯವನ್ನು ಧೈರ್ಯವಾಗಿ-ಬಹಿರಂಗವಾಗಿ ಮಾತಾಡುವ ಧೈರ್ಯವನ್ನು ಬಡವರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಬೆಳೆಸಿಕೊಳ್ಳುವುದರ ಜೊತೆಗೆ ಮಹರ್ಷಿಗಳ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಹರ್ಷಿ ವಾಲ್ಮೀಕಿ ಅವರಿಗೆ ನಾವು-ನೀವು ಸಲ್ಲಿಸುವ ಗೌರವ ಎಂದರು.

 ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, 2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕøತರಾದ ಬೆಂಗಳೂರು ವಿಭಾಗದ ಕಿಲಾರಿ ಜೋಗಯ್ಯ, ಬಿನ್. ಕಿಲಾರಿ ಬೋರಯ್ಯ. ಮೈಸೂರು ವಿಭಾಗದ ಡಾ|| ರತ್ನಮ್ಮ ಎಸ್. ಬೆಳಗಾವಿ ವಿಭಾಗದ ರಾಜಶೇಖರ ತಳವಾರ. ಬೆಂಗಳೂರು ಕೇಂದ್ರದ ಕೆ.ಎಸ್. ಮೃತ್ಯುಂಜಯ. ಕಲಬುರಗಿ ವಿಭಾಗದ ಶ್ರೀಮತಿ ರತ್ನಮ್ಮ ಬಿ. ಸೋಗಿ ಇವರುಗಳಿಗೆ ಮುಖ್ಯಮಂತ್ರಿಗಳು ತಲಾ 20 ಗ್ರಾಂ ಬಂಗಾರದ ಪದಕ ಹಾಗೂ ರೂ. 5 ಲಕ್ಷ ನಗದನ್ನು ನೀಡಿ ಸನ್ಮಾನಿಸಿದರು.

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ವಾಲ್ಮೀಕಿ ಸಮುದಾಯವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಮಾಜದ ಮುಖ್ಯವಾಹಿನಿಗೆ ತರಲು ವಿಶೇಷ ಕೊಡುಗೆ ನೀಡಿದೆ. ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಸಮುದಾಯದವರು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದುವರೆಯಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.  

ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಮಾತನಾಡಿ ಬಡವರು, ಹಿಂದುಳಿದವರು ಎಲ್ಲರೂ ವಿದ್ಯಾವಂತರಾಗಿ, ಸಂಘಟಿತರಾಬೇಕು. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ನೀಡುವುದರ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ರಾಜಕೀಯವಾಗಿ ಅಧಿಕಾರಕ್ಕೆ ಬರಬೇಕು. ವಸತಿ ಶಾಲೆಗಳನ್ನು ಹೆಚ್ಚಿಸಲಾಗಿದ್ದು, ವಸತಿ ಶಾಲೆಯಲ್ಲಿ ಪ್ರವೇಶ ಸಂಖ್ಯೆಗಳು ಹೆಚ್ಚಾಗಿವೆ ಎಂದರು.

 ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ  ಕೆ.ಹೆಚ್. ಮುನಿಯಪ್ಪ ಮಾತನಾಡಿ, ಇಡೀ ರಾಜ್ಯದ ಉದ್ದಕ್ಕೂ ಪ್ರತಿ ಹೋಬಳಿಗೂ ವಸತಿ ಶಾಲೆಗಳನ್ನು ನೀಡುವುದರ ಮೂಲಕ ಶೋಷಿತ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ನಾಲ್ಕು ವಾಲ್ಮೀಕಿ ಆಶ್ರಮ ಶಾಲೆಗಳನ್ನು ತೆರೆಯಲಾಗಿದ್ದು, ನಿಗಮದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಭೂ ಒಡೆತನಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಜ್ಯದಲ್ಲಿನ ಹಿಂದುಳಿದ ವರ್ಗದವರ ಬಗ್ಗೆ ಕಳಕಳಿಯನ್ನು ಹೊಂದಿರುವ ಮುಖ್ಯಮಂತ್ರಿಯವರು ಇಡೀ ರಾಷ್ಟ್ರದಲ್ಲೇ ಶೇ 24.1 ರಷ್ಟು ಅನುದಾನವನ್ನು ಈ ವರ್ಗದವರಿಗೆ ಮೀಸಲಿಟ್ಟಿದ್ದಾರೆ. ನಿಗಮಗಳಿಗೆ ಇನ್ನೂ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ನಿಗದಿಪಡಿಸಬೇಕೆಂದರು.

 ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾ ನಂದಪುರಿ ಶ್ರೀಗಳುÀ ದಿವ್ಯ ಸಾನಿಧ್ಯ ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವಿಧಾನಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ್ ಮಹದೇವಪ್ಪ ಪಟ್ಟಣ, ಶಾಸಕರಾದ ರಾಜ ವೇಣುಗೋಪಾಲ ನಾಯಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ಸೇರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";