ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕೋಟ್ಯಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ ವಂದೇ ಮಾತರಂಗೆ 150 ವರ್ಷ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಗೀತೆ ‘ವಂದೇ ಮಾತರಂ‘ ನ 150 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಭ್ರಮಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಂದೇ ಮಾತರಂ ಎಂದರೆ ತಾಯಿಯೇ ನಿನಗೆ ನಮಸ್ಕರಿಸುತ್ತೇನೆ ಎಂದರ್ಥ, ಭಾರತೀಯ ಸಂಸ್ಕೃತಿಯ ಹೃದಯಬಡಿತವಾಗಿದ್ದು ಸಾಂಸ್ಕೃತಿಕ ಏಕತೆಯನ್ನು ಬಿಂಬಿಸುತ್ತಾ ಭಾರತದ ವಿವಿಧ ಭಾಷೆ, ಜಾತಿ, ಧರ್ಮ ಮತ್ತು ಪ್ರದೇಶಗಳ ಜನರಲ್ಲಿ ದೇಶಭಕ್ತಿಯ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. 150 ನೇ ವರ್ಷವನ್ನು ಆಚರಿಸುತ್ತಿರುವ ಈ ಐತಿಹಾಸಿಕ ಆಚರಣೆಯ ಈ ಶುಭ ಸಂದರ್ಭವು ನಮಗೆಲ್ಲರಿಗೂ ಹೊಸ ಶಕ್ತಿ ಹಾಗೂ ಪ್ರೇರಣೆ ನೀಡಲಿದೆ.
ರಾಷ್ಟ್ರೀಯತೆಯ ಮೊದಲ ಘೋಷಣೆಯಾಗಿ ವಂದೇ ಮಾತರಂ ಬರೆದ ಬಂಕಿಮ ಚಂದ್ರ ಚಟರ್ಜಿ ಅವರಿಗೆ ವಂದಿಸಿ, ವಂದೇ ಮಾತರಂಗಾಗಿ ಜೀವನವನ್ನು ಸಮರ್ಪಿಸಿದ ದೇಶದ ಲಕ್ಷಾಂತರ ಮಹಾನ್‌ಪುರುಷರಿಗೆ, ದೇಶವಾಸಿಗಳಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. ಇದೇ ವೇಳೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸಂಭ್ರಮಾಚರಣೆಯ ಭಾಷಣದ ನೇರಪ್ರಸಾರ ವೀಕ್ಷಿಸಲಾಯಿತು ಎಂದು ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ, ವಿಧಾನಪರಿಷತ್ ವಿರೋಧ ಪಕ್ಷ ನಾಯಕರಾದ ಚಲುವಾದಿ ನಾರಾಯಣಸ್ವಾಮಿ, ಸಂಸದರಾದ ಪಿ.ಸಿ ಮೋಹನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಪಿ.ರಾಜೀವ್, ವಿಧಾನಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಕೇಶವ ಪ್ರಸಾದ್,
ರಾಜ್ಯ ಉಪಾಧ್ಯಕ್ಷ ಹಾಗೂ ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಂಚಾಲಕಿ ಮಾಳವಿಕಾ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಅಂಬಿಕಾ ಹುಲಿನಾಯ್ಕರ್, ಹೆಚ್.ಸಿ. ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

