ಶತಮಾನದ ಜಲಾಶಯ ನಾಲ್ಕನೇ ಬಾರಿ ಕೋಡಿ ಬೀಳುವ ಕ್ಷಣ ಸಮೀಪ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಬರಪೀಡಿತ ಜಿಲ್ಲೆಯ ರೈತರ ಸಂಜೀವಿನಿ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಗೆ ಕೇವಲ ಮೂರು(ಮೂರು ಮಟ್ಟಿಲು) ಅಡಿ ಮಾತ್ರ ಬಾಕಿ ಇದ್ದು ಪ್ರಸಕ್ತ ಸಾಲಿನಲ್ಲೂ ಡ್ಯಾಂ ಭರ್ತಿ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಜಿಲ್ಲೆಯ ಜನತೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ದಿನಗಳು ದಿನೇ ದಿನೇ ಹತ್ತಿರ ಬರುತ್ತಿವೆ. ತಾಲೂಕಿನ ವಿವಿ ಪುರದಲ್ಲಿ ಬಿಡು ಬೀಸಾಗಿ ಹರಡಿಕೊಂಡಿರುವ ವಿವಿ ಸಾಗರ ಜಲಾಶಯದ ನೀರು ಮತ್ತೆ 127ಅಡಿ ತಲುಪಿದೆ.
ಇನ್ನು ಕೇವಲ 3 ಅಡಿ ನೀರು ಸಂಗ್ರಹವಾದರೆ ಶತಮಾನದ ಜಲಾಶಯ ನಾಲ್ಕನೇ ಬಾರಿ ಕೋಡಿ ಬೀಳುವ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು. ಕಳೆದ ಜನವರಿಯಲ್ಲಿ ಮೂರನೇ ಬಾರಿ ಕೋಡಿ ಬಿದ್ದಿದ್ದ ಜಿಲ್ಲೆಯ ಜೀವನಾಡಿ ಜಲಾಶಯ ಕೇವಲ ಎಂಟು ತಿಂಗಳ ನಂತರ 127 ಅಡಿ ತಲುಪಿದ್ದು ಇನ್ನು 3 ಅಡಿ ನೀರು ಬಂದರೆ ಕೋಡಿ ಬೀಳಲಿದೆ.30 ಟಿಎಂಸಿ ನೀರಿನ ಸಂಗ್ರಹದ ಸಾಮರ್ಥ್ಯವಿರುವ ಜಲಾಶಯವು ದಿನಾಂಕ 2-9-2025 ರ ಮಾಹಿತಿಯoತೆ 127 ಅಡಿ ತಲುಪಿದೆ.
710 ಕ್ಯೂಸೆಕ್ಸ್ ಭದ್ರಾ ನೀರಿನ ಒಳ ಹರಿವು ಇದ್ದು ಅದರ ಜೊತೆಗೆ ಮಳೆಯೂ ಸಹಕರಿಸಿದರೆ ಕೋಡಿಯ ದಿನಗಳು ಇನ್ನೂ ಸನಿಹಕ್ಕೆ ಬರಲಿವೆ.1933 ರಲ್ಲಿ ಜಲಾಶಯವು ಮೊದಲ ಬಾರಿಗೆ ಕೋಡಿ ಬಿದ್ದಿದ್ದು ಬಿಟ್ಟರೆ ಆನಂತರ ಸುಮಾರು 89 ವರ್ಷಗಳ ನಂತರ 2022 ರಲ್ಲಿ ಎರಡನೇ ಬಾರಿ ಕೋಡಿ ಬಿದ್ದಿತ್ತು.ಆನಂತರ ಕೇವಲ ಮೂರು ವರ್ಷದ ಅಂತರದಲ್ಲಿ 2025 ರ ಜನವರಿಯಲ್ಲಿ ಮೂರನೇ ಬಾರಿ ಕೋಡಿ ಬಿದ್ದು ಜಿಲ್ಲೆಯ ಜನರ ಹರ್ಷಕ್ಕೆ ಕಾರಣವಾಗಿತ್ತು.ಬರಗಾಲದ ಪ್ರದೇಶ ಎಂದು ಹಣೆಪಟ್ಟಿ ಹಚ್ಚಿಕೊಂಡಿರುವ ಚಿತ್ರದುರ್ಗ ಜಿಲ್ಲೆಗೆ ಈ ಜಲಾಶಯವೇ ಆಧಾರ.ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರಿನ ಜನರ ಕುಡಿಯುವ ನೀರಿನ ಬವಣೆ ನೀಗಿಸಿದ ಜಲಾಶಯವಿದು.
ಹಿರಿಯೂರು ತಾಲೂಕಿನಿಂದ 20 ಕಿಮೀ ದೂರವಿರುವ ಈ ಜಲಾಶಯವು ಮೈಸೂರು ಅರಸರ ದೂರದೃಷ್ಟಿಯ ಫಲವಾಗಿ ನಿಂತಿದೆ. ಕೇವಲ ಕಲ್ಲು ಗಾರೆ ಬಳಸಿ ಕಟ್ಟಲಾಗಿರುವ ಜಲಾಶಯವು ನೂರು ವರ್ಷ ತುಂಬಿದರು ಸುಭದ್ರವಾಗಿದೆ.ಡ್ಯಾo ನ ಸುರಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಎದ್ದಾಗಆಣೆಕಟ್ಟು ತಜ್ಞ ನಿವೃತ್ತ ಚೀಫ್ ಇಂಜಿನಿಯರ್ ಎಸ್ ಬಿ ಕೊಯಮುತ್ತೂರು, ಮುಖ್ಯ ಇಂಜಿನಿಯರ್ ಗಳು ಹಾಗೂ ಅಣೆಕಟ್ಟು ಸುರಕ್ಷಾ ಸಮಿತಿ ಸದಸ್ಯರು ಡ್ಯಾo ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಡ್ಯಾo ಸುಭದ್ರವಾಗಿದೆ ಎಂದು ಹೇಳಿ ಕೆಲವು ಸಲಹೆ ನೀಡಿ ಹೋಗಿದ್ದರು. ಇದೀಗ ಮತ್ತೆ ನಾಲ್ಕನೇ ಬಾರಿ ಜಲಾಶಯ ಕೋಡಿಯತ್ತ ಸಾಗುತ್ತಿದೆ.
ಡ್ಯಾo ನಿರ್ಮಾಣ ಕಾಲದಲ್ಲಿ ಹಣದ ಅಡಚಣೆ ಆದಾಗ ಸ್ವತಃ ಮೈಸೂರು ಮಹಾರಾಣಿಯವರು ತಮ್ಮ ಒಡವೆಗಳನ್ನು ಮಾರಿ ಡ್ಯಾo ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸಿದ್ದರು. 1897 ರಲ್ಲಿ ಪ್ರಾರಂಭವಾದ ಡ್ಯಾo ಕಾಮಗಾರಿಯನ್ನು ಸತತವಾಗಿ ಹತ್ತು ವರ್ಷಗಳ ಶ್ರಮದಲ್ಲಿ ನಿರ್ಮಿಸಲಾಯಿತು.ಅಲ್ಲಿಂದ ಇಲ್ಲಿಯವರೆಗೆ ಈ ಭಾಗದ ರೈತರನ್ನು ಪೋಷಿಸುತ್ತಲೇ ಬಂದಿರುವ ಡ್ಯಾo ತಾಲೂಕಿನ ಮೂರನೇ ಒಂದು ಭಾಗದ ಕೃಷಿಗೆ ಆಧಾರವಾಗಿದೆ.
ಸುಮಾರು 12, 135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ಡ್ಯಾo ನೀರುಣಿಸುತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡೇನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಆವತಿ ನದಿಯ ಜೊತೆ ಸೇರಿ ವೇದಾವತಿಯಾಗಿ ಹರಿದು ವಿವಿ ಸಾಗರ ಜಲಾಶಯ ಸೇರುತ್ತದೆ.118 ವರ್ಷಗಳ ಇತಿಹಾಸವಿರುವ ಜಲಾಶಯ 135.25 ಅಡಿ ಎತ್ತರವಿದೆ. 1933 ರಲ್ಲಿ 135 ಅಡಿ,1934 ರಲ್ಲಿ 130 ಅಡಿ,1957 ರಲ್ಲಿ 125 ಅಡಿ ನೀರಿನ ಸಂಗ್ರಹ ಕಂಡ ಜಲಾಶಯವು ಡೆಡ್ ಸ್ಟೋರೇಜ್ ದಿನಗಳನ್ನು ಸಹ ಕಂಡಿದೆ.ಇದೀಗ ಭದ್ರಾದ ನೀರು ಮತ್ತು ಮಳೆಯ ಆಸರೆಯಿಂದ ದಿನೇ ದಿನೇ ತನ್ನ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದು ಇದೇ ವರ್ಷದಲ್ಲಿ ಮತ್ತೊಮ್ಮೆ ಡ್ಯಾo ಕೋಡಿ ಬೀಳುವ ಕ್ಷಣಗಳು ಎದುರಾದರೂ ಆಶ್ಚರ್ಯವಿಲ್ಲ.
ಜಲಾಶಯದ ನೀರು ಲಕ್ಷಾಂತರ ಕುಟುಂಬಗಳಿಗೆ ಆಧಾರವಾಗಿದ್ದು ತಾಲೂಕಿನ ಹಳ್ಳಿಗಳ ಮನೆ ಮನೆಗೆ ವಿವಿ ಸಾಗರದ ಕುಡಿಯುವ ನೀರು ಹರಿಸುವ ಮನೆ ಮನೆ ಗಂಗೆ ಯೋಜನೆ ಚಾಲ್ತಿಯಲ್ಲಿದೆ. ತಾಲೂಕಿನ ಹಲವು ಕೆರೆಗಳನ್ನು ತುಂಬಿಸುವ ಯೋಜನೆ ಈಗಾಗಲೇ ಕೆಲವು ಕಡೆ ಜಾರಿಯಲ್ಲಿದ್ದು ಇನ್ನಷ್ಟು ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನಗಳು ನಡೆಯುತ್ತಿವೆ.
ಬೆಟ್ಟಗಳ ಸಾಲಲ್ಲಿ ಆಗಾಧ ಜಲರಾಶಿ ಹೊತ್ತು ನಿಂತಿರುವ ವಿವಿ ಸಾಗರದ ಬಳಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಜಲಾಶಯದ ಮುಂದಿನ ಪಾರ್ಕ್ ಗಳು ನಿರ್ವಹಣೆಯ ಕೊರತೆಯಿಂದ ನರಳುತ್ತಿವೆ. ಅವುಗಳಿಗೆ ಕಾಯಕಲ್ಪ ನೀಡಬೇಕಿದೆ.ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾಗಿದ್ದು ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಳವಾಗುತ್ತಿದೆ.

