ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲಾ ಭೋವಿ (ವಡ್ಡರ) ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಎಸ್. ರವಿಕುಮಾರ್ ಇವರು ಹಿಂದು ಧಾರ್ಮಿಕ ಹಾಗೂ ಧರ್ಮಾದಾಯಗಳ ದತ್ತಿ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್ ಇವರನ್ನು ತೀರ್ಥಹಳ್ಳಿ ತಾಲೂಕು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತಾರೆ.
ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಭೋವಿ ಸಮಾಜಕ್ಕೆ ಒಳಮೀಸಲಾತಿ ಮತ್ತು ಸಮುದಾಯದ ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ವಿಶೇಷವಾಗಿ ಜಾತಿಗಣತಿ ಮತ್ತು ಜನಗಣತಿ ಸಂದರ್ಭದಲ್ಲಿ ’ಭೋವಿ ವಡ್ಡರ್’ ಎಂದು ಕಡ್ಡಾಯವಾಗಿ ನಮೂದಿಸಲು ಕರೆ ನೀಡಿದ್ದರು. ಅಲ್ಲದೆ ಭೋವಿ ನಿಗಮದ ಪುನರ್ನಾಮಕರಣ ಮಾಡಬೇಕೆಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೋವಿ ನಿಗಮದ ಪುನರ್ನಾಮಕರಣ ಮತ್ತು ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಭರವಸೆ ನೀಡಿದ್ದಾರೆ. ಒಳ ಮೀಸಲಾತಿಯ ಪ್ರಯೋಜನಗಳು ಸಮುದಾಯಕ್ಕೆ ತಲುಪಬೇಕಾಗಿದೆ. ಗಣತಿ ಸಂದರ್ಭದಲ್ಲಿ ಭೋವಿ ವಡ್ಡರ್ ಎಂದೇ ನಮೂದಿಸಿದ್ದಲ್ಲಿ, ಸಮಾಜದ ಜನಸಂಖ್ಯೆ ಸರಿಯಾಗಿ ದಾಖಲಾಗುತ್ತದೆ ಮತ್ತು ಸರ್ಕಾರಿ ಸವಲತ್ತುಗಳು ಸಿಗುತ್ತವೆ.
ಭೋವಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಿ, ನಿಖರ ಮತ್ತು ವೈಜ್ಞಾನಿಕ ಅಂಕಿ-ಅಂಶಗಳ ಆಧಾರದ ಮೇಲೆ ಮೀಸಲಾತಿ ನೀಡಬೇಕಿದೆ. ಸಮುದಾಯದ ಶಿಕ್ಷಣ ಮಟ್ಟ ಸುಧಾರಣೆ, ಸಮಾಜದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಕಲ್ಲು ಕ್ವಾರಿಗಳಲ್ಲಿ ಆದ್ಯತೆ ನೀಡಬೇಕಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಅನೇಕ ಮುಖಂಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಮುದಾಯದ ಜನರು ತಮ್ಮ ಜಾತಿಯ ಬಗ್ಗೆ ಕೀಳರಿಮೆ ಬಿಟ್ಟು ’ಭೋವಿ ವಡ್ಡರ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದರಿಂದ ಸಮುದಾಯದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ನೂತನ ಅಧ್ಯಕ್ಷೆ ವರಲಕ್ಷ್ಮಿ ಪ್ರಕಾಶ್ ತಿಳಿಸಿದ್ದಾರೆ.

