ಈಡುಗಾಯಿ ಒಡೆಯುವ ಚಳವಳಿಗೆ ಕರೆ ನೀಡಿದ ವಾಟಾಳ್ ನಾಗರಾಜ್

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ರಾಜ್ಯಾದ್ಯಂತ ಏಪ್ರಿಲ್
26ರಂದು ಈಡುಗಾಯಿ ಒಡೆಯುವ ಚಳವಳಿಗೆ ಕರೆ ನೀಡಲಾಗಿದ್ದು ಹೋರಾಟ ಬೆಂಬಲಿಸುವಂತೆ ಜನತೆಯಲ್ಲಿ ಕನ್ನಡಪರ, ಜನಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಮಂಡ್ಯದಲ್ಲಿ ಗುರುವಾರ ಅವರು ಸಾಂಕೇತಿಕವಾಗಿ ಈಡುಗಾಯಿ ಒಡೆದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜನ ಸಾಮಾನ್ಯರಿಗಾಗಿ ಈ ಹೋರಾಟ ಮಾಡಲಾಗುತ್ತಿದೆ. ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರಂತರವಾಗಿ ಒತ್ತಾಯಿಸಿಕೊಂಡು ಬರಲಾಗುತ್ತಿದೆ. 1956ರಲ್ಲಿ ಕರ್ನಾಟಕ ಏಕೀಕರಣ ಸಂದರ್ಭದಿಂದಲೂ ಹೋರಾಟ ಮಾಡಲಾಗಿತ್ತು ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಬಂದರುಗಳ ಬೆಳವಣಿಗೆ, ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನವಾಗಿಲ್ಲ. MES ನಿಷೇಧಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. MES ಗಡಿನಾಡಿಗೆ ಮಾರಕ. ಅದರ ನಿಷೇಧ ಈವರೆಗೂ ಆಗಿಲ್ಲ ಎಂದು ಅವರು ಆರೋಪಿಸಿದರು.
ಕಳಸಾ, ಬಂಡೂರಿ
, ಮೇಕೆದಾಟು ಯೋಜನೆಗಳು ಕೂಡ ಜಾರಿಯಾಗಿಲ್ಲ. ಪರಭಾಷಿಕರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಕರಿಂದ ಅಪರಾಧ ಕೃತ್ಯಗಳು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿಯಾಗಿಲ್ಲ, ಕನ್ನಡಿಗರಿಗೆ ಉದ್ಯೋಗದ ಬಗ್ಗೆ ಕ್ರಮ ಕೈಗೊಂಡಿಲ್ಲ, ಐಟಿ-ಬಿಟಿ ಒತ್ತಾಯಕ್ಕೆ ಮಸೂದೆ ಜಾರಿಯಾಗಿಲ್ಲ, ಇವುಗಳ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ. ಕಳೆದ 22ರಂದು ಬಂದ್ ಕರೆ ಕೊಟ್ಟಿದ್ದೆವು. ಮಂಡ್ಯದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಗಾಗಿ ಮಂಡ್ಯ ಜನಕ್ಕೆ ಧನ್ಯವಾದ ಹೇಳುತ್ತೇನೆ. ಇದೇ 26ಕ್ಕೆ ರಾಜ್ಯದ ಉದ್ದಗಲಕ್ಕೂ ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ ಈಡುಗಾಯಿ ಒಡೆಯುವ ಚಳವಳಿ ನಡೆಸಲಾಗುತ್ತಿದೆ. ಕನಿಷ್ಠ ಎರಡು ಕೋಟಿ ಈಡುಗಾಯಿ ಒಡೆಯುವ ಪ್ರಯತ್ನ ಮಾಡಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

 ಇದೇ ಸಂದರ್ಭದಲ್ಲಿ ಅವರು ಜಾತಿ ಗಣತಿ ವಿಚಾರ ಕುರಿತು ಮಾತನಾಡಿ, ನಾನು ಇವತ್ತಿನವರೆಗೂ ಜಾತಿ ಬಗ್ಗೆ ಮಾತಾಡಿಲ್ಲ. ಅದನ್ನು ಯಾಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ರಾಜ್ಯ ಉದಯವಾಗಿದ್ದು ಭಾಷೆ ಮೇಲೆ. ಮೈಸೂರಿನಲ್ಲಿ ಸಮಗ್ರ ಕರ್ನಾಟಕ ಆಗಬೇಕು ಎಂದಿದ್ದು ಕುವೆಂಪು. ಇವತ್ತು ಜಾತಿಯ ಕರ್ನಾಟಕ ಆಗ್ತಿದೆ. ನಾವು ಬಹಳ ಗಂಭೀರವಾಗಿ ಇರಬೇಕಿದೆ. ಬಸವಣ್ಣ, ಕನಕದಾಸರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷಗಳೂ ಜಾತಿ ಹಿಂದೆ ಬಿದ್ದಿವೆ. ಸಿದ್ದರಾಮಯ್ಯನವರೇ ಕರ್ನಾಟಕದ ಕೊನೆಯ ಕೊಂಡಿ. ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ ಎಂದು ವಾಟಾಳ್ ನಾಗರಾಜ್ ಮಾರ್ಮಿಕವಾಗಿ ತಿಳಿಸಿದರು.

ಹನಿಟ್ರ್ಯಾಪ್ ಕುರಿತು ಸದನದಲ್ಲಿ ಚರ್ಚೆ ಮಾಡ್ತಾರೆ. ನಿಮ್ಮ ಮನೆಯಲ್ಲಿ ಚರ್ಚೆ ಮಾಡಿ. ಶಾಸನ ಸಭೆಯಲ್ಲಿ ಈ ವಿಷಯ ಚರ್ಚೆ ಬೇಕಾ? ಶಾಸನಸಭೆಯ ಗಂಭೀರತೆ ಏನಾಗಬೇಕು? ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ವಿಧಾನಸಭೆ, ಪರಿಷತ್ತಿನ ಘನತೆ, ಗಾಂಭೀರ್ಯ ಕುಸಿಯುತ್ತಿದೆ. ಮೇಧಾವಿಗಳ ನಾಮಕರಣ ಆಗುತ್ತಿಲ್ಲ. ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನಪರಿಷತ್ತು ವ್ಯಾಪಾರೀಕರಣ ಆಗ್ತಿದೆ. ಇವಾಗ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅವನ್ನೂ ಹಂಚಿಕೆ ಮಾಡಿಕೊಳ್ತಾರೆ. ವ್ಯಾಪಾರೀಕರಣ, ಜಾತೀಕರಣದ ಮೇಲೆ ಆಯ್ಕೆ ಆಗುತ್ತಿದೆ. ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡ್ತೀರಲ್ಲ, ಕರ್ನಾಟಕದ ಅಭಿವೃದ್ಧಿ ಬಗ್ಗೆ ಒಂದು ದಿನವಾದ್ರೂ ಚರ್ಚೆ ಮಾಡಿದ್ರಾ? ಎಂದು ವಾಟಾಳ್ ನಾಗರಾಜ್ ತೀಕ್ಷ್ಣವಾಗಿ ಪ್ರಶ್ನಿಸಿದರು.

 

Share This Article
error: Content is protected !!
";