ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಗಡಿಭಾಗದಲ್ಲಿ ಹರಿಯುವ ವೇದಾವತಿ ನದಿಯ ನೀರು ಶಿಡ್ಲಯ್ಯನಕೋಟೆ, ನಾರಾಯಣಪುರ ಬಲದಂಡೆ ಮೂಲಕ ಟಿ.ಎನ್.ಕೋಟೆ, ಗೋಸಿಕೆರೆ, ಚೌಳೂರು, ಪರಶುರಾಮಪುರ ಕೆರೆಗಳಿಗೆ ನೀರು ತುಂಬಿಸಲು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿಗೆ ಗ್ರಾಮಸ್ಥರು ಮನವಿ ಮಾಡಿದರು.
ಪ್ರಸ್ತುತ ನಾರಾಯಣಪುರ ಬಲದಂಡೆ ನಾಲೆಯ ಪೀಡರ್‌ಚಾನಲ್‌ನಲ್ಲಿ ಹೂಳುತುಂಬಿದ್ದು ಅದನ್ನು ಪೂರ್ಣಪ್ರಮಾಣದಲ್ಲಿ ತಗೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಶಾಸಕರಿಗೆ ಮನವಿ ಮಾಡಲಾಯಿತು. ವಾಣಿವಿಲಾಸ ಸಾಗರ ಡ್ಯಾಂ ಕೋಡಿಬೀಳುವ ಸಂಭವವಿದ್ದು, ಕೋಡಿ ನೀರು ಸರಾಗವಾಗಿ ಫೀಡರ್ ಚಾನಲ್‌ಮೂಲಕ ಕೆರೆಗಳಿಗೆ ಹರಿಯಲು ಹೂಳು ಎತ್ತಿಸುವಂತೆ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ತಾವು ನೀಡಿದ ಮನವಿಯನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇಂದೇ ಸೂಚನೆ ನೀಡುವ ಭರವಸೆ ನೀಡಿದರು.
ಪರಶುರಾಮಪುರ ಎ.ನಾಗರಾಜ್, ಪರಶುರಾಮಪುರ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ಕಾಂಗ್ರೆಸ್ ಮುಖಂಡ ಚನ್ನಕೇಶವ, ನಿವೃತ್ತ ಪ್ರಾಂಶುಪಾಲ ಶಿವಲಿಂಗಪ್ಪ, ಭಗತ್‌ಸಿಂಗ್ ರಂಗಸ್ವಾಮಿ, ಬಸವರಾಜು, ದೊಡ್ಡಬೀರನಹಳ್ಳಿ ರಾಜಣ್ಣ, ಕೈಲಾಸ್, ಪಟೇಲ್, ಗೋಸಿಕೆರೆ ನಾಗೇಂದ್ರಪ್ಪ, ಜಯಕುಮಾರ್, ಉಮಾಮಹೇಶ್ವರಪ್ಪ, ಮಹೇಶಪ್ಪ ಮುಂತಾದವರು ಉಪಸ್ಥಿತರಿದ್ದರು.

