ಧರ್ಮಪುರ ಕೆರೆಗೆ ಹರಿದ ವೇದಾವತಿ, ಶತಮಾನದ ಕನಸು ನನಸು..

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೃಹತ್ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಸೇರಿದಂತೆ ಎಲ್ಲ ಯೋಜನೆಗಳಿಂದ ಧರ್ಮಪುರ ಹೋಬಳಿ ವಂಚಿತವಾಗಿದೆ. ಇದರಿಂದಾಗಿ ಧರ್ಮಪುರ ಕೆರೆ ಸೇರಿದಂತೆ ಇತರೆ 15 ಕೆರೆಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಆದರೆ ವೇದಾವತಿ ನದಿಗೆ ಅಡ್ಡಲಾಗಿ ಹೊಸಳ್ಳಿ ಸಮೀಪ ಒಂದು ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿಂದ ಐತಿಹಾಸಿಕ ಧರ್ಮಪುರ ಕೆರೆ ಸೇರಿದಂತೆ ಇತರೆ 9 ಕೆರೆಗಳಿಗೆ ಲಿಫ್ಟ್ ಮಾಡಿ ಭರ್ತಿ ಮಾಡಲಾಗುತ್ತದೆ.

1982ರಲ್ಲಿ ಮತ್ತು 2022ರಲ್ಲಿ ಧರ್ಮಪುರ ಕೆರೆ ಸಂಪೂರ್ಣ ತುಂಬಿ ಕೋಡಿ ಹರಿದಿದ್ದು ಬಿಟ್ಟರೆ ಇಲ್ಲಿಯ ತನಕ ಪೂರ್ಣ ಪ್ರಮಾಣದ ನೀರು ಹರಿದು ಬಂದಿಲ್ಲ. ಆದರೆ ಈಗ ಹೊಸಳ್ಳಿ ಬ್ಯಾರೇಜ್ ನಿಂದ ನೀರು ಲಿಫ್ಟ್ ಮಾಡಿ ಧರ್ಮಪುರ ಕೆರೆಗೆ ಹರಿಸುತ್ತಿರುವುದರಿಂದ ಒಂದಿಷ್ಟು ನೀರು ಶೇಖರಣೆ ಆಗುತ್ತಿದೆ.

ಯೋಜನಾ ವೆಚ್ಚ-
ಸುಮಾರು 90 ಕೋಟಿ ರೂ.ವೆಚ್ಚದಲ್ಲಿ ಧರ್ಮಪುರ ಕೆರೆ ಸೇರಿ ಇತರೆ 7 ಕೆರೆಗಳಿಗೆ ಬ್ಯಾರೇಜ್ ನಿಂದ ಲಿಫ್ಟ್ ಮಾಡಿ ಪೈಪ್ ಲೈನ್ ಮೂಲಕ ಹರಿಸುವ ಕಾರ್ಯ ಸಂಪೂರ್ಣ ಮುಗಿದಿದ್ದು ಈಗ ಸರಾಗವಾಗಿ ನೀರು ಹರಿಯುತ್ತಿದೆ. ಇದಕ್ಕಾಗಿ ಈ ಯೋಜನೆಯ ರೂವಾರಿಗಳಾದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಈ ಭಾಗದ ರೈತಾಪಿ ವರ್ಗ ಅಭಿನಂದಿಸುವ ಕಾರ್ಯ ಮಾಡಲು ಚಿಂಚಿಸುತ್ತಿದೆ. ಮಾಜಿ ಶಾಸಕಿಯವರು ದಿನಾಂಕ ನಿಗದಿ ಮಾಡಿದರೆ ಅದ್ಧೂರಿಯಾಗಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಹೋರಾಟದ ಹಿನ್ನೋಟ-ಭದ್ರಾ ಮೇಲ್ದಂಡೆ ಯೋಜನೆ 23 ಸಾವಿರ ಕೋಟಿ ರೂ.ಗಳಲ್ಲಿ ಅನುಷ್ಠಾನ ಆಗುತ್ತಿದ್ದರೂ ಧರ್ಮಪುರ ಕೆರೆಗೆ ಹನಿ ನೀರು ಸಿಗುತ್ತಿಲ್ಲ ಎನ್ನುವ ಸತ್ಯ ಅರಿತ ಧರ್ಮಪುರ ಭಾಗದ ರೈತರು, ನೀರಾವರಿ ಹೋರಾಟಗಾರರು ನೂರಾರು ದಿನಗಳ ಕಾಲ ನಾನಾ ರೀತಿಯ ಹೋರಾಟ ಕಟ್ಟಿದರು.

ನೀರಾವರಿ ತಜ್ಞ ಕೆ.ಸಿ.ರೆಡ್ಡಿ ವರದಿ ಶಿಫಾರಸು ಅನ್ವಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಧರ್ಮಪುರ ಕೆರೆಗೆ ಪೂರಕ ನಾಲೆಗೆ ಬಗ್ಗೆ ಮೂರು ಕಡೆಯಿಂದ ನೀರು ಹರಿಸಬಹುದು ಎಂದು ಗುರುತಿಸಿದ್ದರೂ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿ ಹಲವು ಕೆರೆ ಕಟ್ಟೆಗಳಿಗೆ ನೀರು ನೀಡಿದ್ದರೂ ಇದೇ ಕೆಲಸವನ್ನು ಧರ್ಮಪುರ ಕೆರೆಗೆ ನೀರು ಭರ್ತಿ ಮಾಡಲು ಅನುಷ್ಠಾನಾಧಿಕಾರಿಗಳು ಮಾಡದಿರುವುದು ಅತ್ಯಂತ ನೋವಿನ ಸಂಗತಿ.

ಹಲವು ಯೋಜನೆ ಪ್ರಸ್ತಾಪ-
ಹಿರಿಯೂರು ತಾಲೂಕಿನ ಧರ್ಮಪುರ ಕೆರೆಗೆ ಫೀಡರ್ ಕಾಲುವೆ ನಿರ್ಮಿಸಿ ಭದ್ರಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಅಥವಾ ವೇದಾವತಿ ನದಿ ಮೂಲ
, ಸುವರ್ಣಮುಖಿ ನದಿಯಿಂದ ನೀರು ಹರಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಹೇಮಾವತಿ ನೀರನ್ನು ಕಳ್ಳಂಬೆಳ್ಳ ದೊಡ್ಡಕೆರೆಗೆ ತುಂಬಿಸಿ ನಂತರ ಮದಲೂರು ಕೆರೆಯಿಂದ ಗುರುತ್ವಾಕರ್ಷಣೆ ಮೂಲಕ ದೊಡ್ಡಬಾಣಗೆರೆ ಮಾರ್ಗವಾಗಿ ಧರ್ಮಪುರ ಕೆರೆಗೂ ನೀರು ಹರಿಸಲು ಸಾಧ್ಯತೆ ಇತ್ತು. ಆದರೂ ಯಾರೂ ಗಮನ ನೀಡಲಿಲ್ಲ.

ಧರ್ಮಪುರ ಕೆರೆ ಐತಿಹಾಸಿಕ ಮಾಹಿತಿ-
ಚಿತ್ರದುರ್ಗ ಜಿಲ್ಲೆಯಲ್ಲೇ ಇತಿಹಾಸ ಪ್ರಸಿದ್ಧ ಧರ್ಮಪುರ ಕೆರೆ ಎರಡನೇ ಅತಿ ದೊಡ್ಡ ಕೆರೆ. ಪಾಂಡವರು ವನವಾಸಕ್ಕೆ ಬಂದಿದ್ದಾಗ ಈ ಕೆರೆ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಇನ್ನೊಂದು ಮೂಲದ ಪ್ರಕಾರ ನೊಳಂಬ ರಾಜರು ಹೇಮಾವತಿ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದಂತಹ ಕಾಲದಲ್ಲಿ ಧರ್ಮಪುರ ಕೆರೆ ನಿರ್ಮಿಸಿದರು ಎನ್ನುವ ದಾಖಲೆ ದೊರೆಯುತ್ತದೆ.

ಧರ್ಮಪುರ ಕೆರೆ ವಿಸ್ತೀರ್ಣ-
ಧರ್ಮಪುರ ಕೆರೆ ವಿಸ್ತೀರ್ಣ 7೦೦ ಹೆಕ್ಟೇರ್ ಪ್ರದೇಶದಲ್ಲಿದ್ದು 36೦ ದಶಲಕ್ಷ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ಉದ್ದ 16೦೦ ಮೀಟರ್ ಇದ್ದು 9೦೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡಬಹುದಾಗಿದೆ.
ಅಲ್ಲದೆ ಧರ್ಮಪುರ ಕೆರೆಗೆ ನೀರು ಭರ್ತಿ ಮಾಡಿದರೆ ಪ್ರತ್ಯಕ್ಷ-ಪರೋಕ್ಷವಾಗಿ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ
, ಧರ್ಮಪುರ ಹೋಬಳಿ ಮತ್ತು ಶಿರಾ ತಾಲೂಕಿನ ನೂರಾರು ಹಳ್ಳಿಗಳು ಜಲಪೂರ್ಣಗೊಳ್ಳಲಿವೆ.

ರೈತರ ಬೇಡಿಕೆ-
ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಮಾಡಿ ವೇದಾವತಿ
, ಸುವರ್ಣಮುಖಿ, ಭದ್ರಾ, ಇತರೆ ಯಾವುದೇ ಮೂಲದಿಂದ ನೀರು ತುಂಬಿಸಿ ಎಂದು ಈ ಭಾಗದ ಜನರು ನೂರಾರು ದಿನಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೂ ಶಾಶ್ವತ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿಗಳು ಗಮನ ಹರಿಸದಿರುವುದು ನೋವಿ ಸಂಗತಿ.

ಶತಮಾನದ ಹೋರಾಟ-
ಮೈಸೂರು ರಾಜ್ಯದ ಮೈಸೂರು ಮಹಾರಾಜರ ಆಡಳಿತ ಇದ್ದಂತ ಸಂದರ್ಭದಲ್ಲಿ ದಿನಾಂಕ-07-11-1919ರಲ್ಲಿ ಮೈಸೂರು ವರ್ಕ ಪಬ್ಲಿಕ್ ಡಿಪಾರ್ಟಮೆಂಟ್ ಮುಖ್ಯ ಇಂಜಿನಿಯರ್ ಎಸ್.ಕಡಂಬಿ ಅವರು ಬೆಂಗಳೂರಿನಲ್ಲಿದ್ದ ಕಂದಾಯ ಆಯುಕ್ತರಿಗೆ ಪತ್ರವೊಂದನ್ನು ವೇದಾವತಿ ನದಿಯಿಂದ ಹಿರಿಯೂರು ತಾಲೂಕಿನ ಮುದ್ದನಹಳ್ಳಿ (ಮ್ಯಾದನಹೊಳೆ) ಬಳಿ ಒಂದು ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿಂದ ಧರ್ಮಪುರ ಕೆರೆಗೆ ನೀರು ಹರಿಸುವಂತೆ ಕೋರಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಪೂರಕ ನಾಲೆಗೆ ದಿವಾನರು ಪ್ರಸ್ತಾವ ಮಾಡಿ ನೀರು ನೀಡಲು ಚಿಂತನೆ ಮಾಡಿದ್ದರು ಎನ್ನುವುದು ವಿಶೇಷ. ಅಂದಿನಿಂದಲೂ ಈ ಭಾಗದ ರೈತರು ಧರ್ಮಪುರ ಕೆರೆ ಭರ್ತಿ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುವಂತೆ ಕೋರಿಕೊಂಡು ಬರುತ್ತಿದ್ದಾರೆ.

ದಿವಂಗತ ಬಿ.ಎಲ್ ಗೌಡ್ರು ಸಹಕಾರ ಸಚಿವರಾಗಿದ್ದಾಗ ಅಂದಿನ ಲೋಕೊಪಯೋಗಿ ಸಚಿವ ವೀರೇದ್ರಪಾಟಿಲ್‌ರವರಿಗೆ ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ವೇಳೆಗೆ ಬಿ.ಎಲ್ ಗೌಡ್ರು ಮಂಡಿಸಿದ ಈ ವಿಷಯಕ್ಕೆ ಅವರು ಕೊಟ್ಟ ಉತ್ತರ 1974 ರಿಂದ 1979ರ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಫೀಡರ್ ಕಾಲುವೆಗೆ 1.12 ಕೋಟಿ ಮಂಜೂರು ಆಗಿದೆಯೆಂದು ಹೇಳಿದ್ದರು. ಇದೇ ಆಶ್ವಾಸನೆಯೊಂದಿಗೆ ಅಡಿಪಾಯ ಹಾಕಿದರು.
ನಂತರ 1994-95 ರಲ್ಲಿ ದೇವೇಗೌಡ್ರು ಧರ್ಮಪುರಕ್ಕೆ ಆಗಮಿಸಿದಾಗ ಫೀಡರ್ ಚಾನಲ್ ಮಂಜೂರಾತಿ ಮಾಡಿಸಿಯೇ ತೀರುತ್ತೆನೆಂದು ಆಶ್ವಾಸನೆ ನೀಡಿ ಹೋದವರು ಮತ್ತೆ ಅದರ ಸುದ್ದಿ ಎತ್ತಲಿಲ್ಲ.

ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ರಾಜಕಾರಣಿ ಬಿ.ಎಲ್. ಗೌಡರು ವಿಧಾನಸಭೆಯಲ್ಲಿ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಿಸಿ ನೀರು ನೀಡುವಂತೆ ಪ್ರಸ್ತಾವ ಮಾಡಿದ್ದರು. ಅಂದಿನ ಸಚಿವ ಡಿ.ಮಂಜುನಾಥ್ ಅವರ ಒತ್ತಾಸೆ ಮೇರೆಗೆ ೨೦೦೫-೬ರ ಆಯವ್ಯಯದಲ್ಲಿ ೨ ಕೋಟಿ ರೂ. ಮತ್ತು ೨೦೦೬-೭ರಲ್ಲಿ ೨.೫೦ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ೨೦೦೭-೮ರಲ್ಲಿ ೫ ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಮೀಸಲಿಟ್ಟಿದ್ದು ಬಿಟ್ಟರೇ ಮತ್ತೇನು ಕೆಲಸ ಆಗಲಿಲ್ಲ. ಪೂರಕ ನಾಲೆ ನಿರ್ಮಿಸಿ ಎಂದು ಧರ್ಮಪುರ ನೀರಾವರಿ ಹೋರಾಟ ಸಮಿತಿಯವರು ೨೫ ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಹೋರಾಟಗಳು ವಿಧಾನಸೌಧದವರೆಗೆ ಮುಟ್ಟಿದ್ದರೂ ಪೊಳ್ಳು ಆಶ್ವಾಸನೆಗಳ ಮಹಾಪೂರವೇ ಹರಿದು ಬಂದಿದ್ದವು. ಆದರೆ ಧರ್ಮಪುರ ಕೆರೆ ನೀರು ಮಾತ್ರ ಹರಿದು ಬರಲಿಲ್ಲ.

 “ವೇದಾವತಿ ನದಿ ಜಲಮೂಲದಿಂದ ಹೊಸಳ್ಳಿ ಬ್ಯಾರೇಜ್ ನಿಂದ ಧರ್ಮಪುರ ಕೆರೆ ಸೇರಿ ಗೂಳ್ಯ, ಅಬ್ಬಿನಹೊಳೆ, ಈಶ್ವರಗೆರೆ ಧರ್ಮಪುರ, ಶ್ರವಣಗೆರೆ, ಸೂಗೂರು, ಮುಂಗಸವಳ್ಳಿ, ಹರಿಯಬ್ಬೆ ಅಜ್ಜಿಕಟ್ಟೆ ಸೇರಿ ಒಟ್ಟು 9 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ 12 ದಿನಗಳಿಂದ ನೀರನ್ನು ಪಂಪ್ ಮಾಡಿ ಹರಿಸಿದ್ದೇವೆ”. ಅಣ್ಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಚಿತ್ರದುರ್ಗ.

- Advertisement -  - Advertisement -  - Advertisement - 
Share This Article
error: Content is protected !!
";