ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಕೆಳ ಭಾಗದಲ್ಲಿ ಹಾದು ಹೋಗುವ ವೇದಾವತಿ ನದಿಗೆ ನಗರದ ಕಲುಷಿತ ನೀರು ಸೇರಿ ವೇದಾವತಿ ನದಿ ಅಪಾಯದ ಅಂಚಿಗೆ ಹೋಗುತ್ತಿರುವುದು ಖಂಡನೀಯ ಎಂದು ವಿ ವಿ ಸಾಗರ ಹೋರಾಟ ಸಮಿತಿ ನಿರ್ದೇಶಕ ಪಿಟ್ಲಾಲಿ ಕೆ ಶ್ರೀನಿವಾಸ ಆರೂಪಿಸಿದ್ದಾರೆ.
ವೇದಾವತಿ ನದಿ ಮೂಲಕ ಹರಿದು ಬರುವ ಕಲುಷಿತ ನೀರನ್ನೇ ರೈತರು ಕುಡಿದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಿರಿಯೂರು ನಗರದ ಹಲವು ಬಡಾವಣೆಗಳಿಂದ ಸಾಕಷ್ಟು ಕಲುಷಿತ ನೀರು ವಿವಿ ಸಾಗರದ ನಾಲೆಗಳಿಗೆ ಬಿಡುವುದನ್ನು ನೀರಾವರಿ ಇಲಾಖೆ ಮತ್ತು ನಗರಸಭೆ ನಿಯಂತ್ರಿಸಬೇಕಾಗಿದೆ.
ವೇದಾವತಿ ಎಡ ಮತ್ತು ಬಲ ನಾಲೆಗಳಿಗೆ ನಗರ ವಾಸಿಗಳು ಬಳಸುವಂತ ಟಾಯ್ಲೆಟ್, ಬಾತ್ ರೂಮ್, ಚರಂಡಿ ನೀರನ್ನ ಬಿಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ನಗರ ವಾಸಿಗಳಿಂದ ಇಂತಹ ಪ್ರಮಾದ ಆಗುತ್ತಿದ್ದರೂ ನೀರಾವರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ನಾಚಿಕೆಗೇಡಿತನ ಸಂಗತಿ.
ನಗರದ ಕೆಳಭಾಗದಲ್ಲಿ ಹಾದು ಹೋಗುವ ವೇದಾವತಿ ನದಿಗೆ ಕೆಲವು ಪ್ರಭಾವಿ ವ್ಯಕ್ತಿಗಳು ಹಾಗೂ ಬಲಾಢ್ಯರು ತಮ್ಮ ಲೇಔಟ್ ಗಳ ಮೂಲಕ ವೇದಾವತಿ ನದಿಗೆ ತಾವೇ ನಿರ್ಮಿಸಿದ ಯುಜಿಡಿ ಸಂಪರ್ಕವನ್ನೂ ವೇದಾವತಿ ನದಿಗೆ ಕಲ್ಪಿಸಿರುವುದರಿಂದ ಕಲುಷಿತ ನೀರು ನದಿಗೆ ಹರಿತಿದೆ ಎಂದು ಅವರು ಕಿಡಿಕಾರಿದ್ದಾರೆ.
ವೇದಾವತಿ ನದಿ ಪಾತ್ರದ ಜನರಿಗೆ ಮತ್ತು ಜಾನುವಾರುಗಳಿಗೆ ಬಹಳ ತೊಂದರೆಯಾಗುತ್ತದೆ. ವೇದಾವತಿ ನದಿ ಪಾತ್ರದಲ್ಲಿ ಅತ್ಯುತ್ತಮ ಮಳೆಯಾಗಿದ್ದು ವೇದಾವತಿ ನದಿ, ಬೋರ್ಗರಿಯುತ್ತಿದೆ. ಹಿರಿಯೂರು ನಗರದಿಂದ ಮುಂದೆ ಆಲೂರು ಪಿಟ್ಲಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರು ಬೋರ್ಗೊರೆಯುತ್ತಿದ್ದು, ಸಿಕ್ಕಾಪಟ್ಟೆ ನೊರೆ ಬರುತ್ತಿದೆ.
ಈ ರೀತಿ ನೊರೆ ಬರಲು ಕಾರಣ ನಗರದ ತ್ಯಾಜ್ಯವನ್ನು ವೇದಾವತಿ ನದಿಗೆ ಬಂದು ಬೀಳುತ್ತಿರುವುದೇ ಕಾರಣ. ಇದನ್ನು ಸೂಕ್ತವಾಗಿ ಪೌರಾಯುಕ್ತರು ಮತ್ತು ನೀರಾವರಿ ಇಲಾಖೆ ಅವಲೋಕಿಸಿ ಇದರಿಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

