ವೇದಾವತಿ ನೀರಿನ ಕೊರತೆ ಧರ್ಮಪುರ ಕೆರೆಗೆ ಹೋಗುವ ನೀರು ಸ್ಥಗಿತ, ಹರಿಯಬ್ಬೆ ಅಜ್ಜಿಕಟ್ಟೆಗೆ ನೀರು ಹರಿವುದೇ ಡೌಟ್!?..

WhatsApp
Telegram
Facebook
Twitter
LinkedIn

ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಹೊಸಹಳ್ಳಿ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿಂದ ಐತಿಹಾಸಿಕ ಧರ್ಮಪುರ ಕೆರೆಗೆ ನೀರು ಪಂಪ್ ಮಾಡುತ್ತಿದ್ದ ವ್ಯವಸ್ಥೆಗೆ ಗ್ರಹಣ ಹಿಡಿದಿದೆ.

ಹೊಸಹಳ್ಳಿ ಬ್ಯಾರೇಜ್ ನಿಂದ ಪ್ರಯೋಗಾರ್ಥವಾಗಿ ಧರ್ಮಪುರ ಕೆರೆ ಸೇರಿ ಇತರೆ 8 ಕೆರೆ, ಕಟ್ಟೆಗಳಿಗೆ ಕಳೆದ 15 ದಿನಗಳಿಂದ ವೇದಾವತಿ ನೀರು ಪಂಪ್ ಮಾಡಿ ಹರಿಸಲಾಗುತ್ತಿತ್ತು. ಪೈಪ್ ಲೈನ್ ಮೂಲಕ ನೀರು ಹರಿದು ಬಂದು ಕೆರೆ, ಕಟ್ಟೆ ಸೇರುವುದನ್ನನು ಕಣ್ಣಾರೆ ಕಂಡ ಸಾರ್ವಜನಿಕರು ಕೊನೆ ಮೊದಲಿಲ್ಲದಂತೆ ನೀರು ನೋಡಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದರು.

ಆದರೆ ಈಗ ವೇದಾವತಿ ನದಿಯಲ್ಲಿ ನೀರಿನ ಒಳ ಹರಿವು ಸ್ಥಗಿತವಾಗಿದೆ. ಹೊಸಹಳ್ಳಿ ಬ್ಯಾರೇಜ್ ನಲ್ಲಿ ಮೂರು ಮೀಟರ್ ನಷ್ಟು ನೀರು ನಿಲುಗಡೆಯಾಗುತ್ತಿದ್ದು ಆ ನೀರಿನಲ್ಲಿ ಈಗಾಗಲೇ ಒಂದು ಮೀಟರ್ ನಷ್ಟು ನೀರನ್ನು ಲಿಫ್ಟ್ ಮಾಡಿ 9 ಕೆರೆಗಳಿಗೆ ಹರಿಸಲಾಗಿದೆ. ಧರ್ಮಪುರ ಸೇರಿ ಇತರೆ 8 ಕೆರೆ ಕಟ್ಟೆಗಳಿಗೆ ಹೊಸಹಳ್ಳಿ ಬ್ಯಾರೇಜ್ ನಲ್ಲಿರುವ ನೀರು ಖಾಲಿ ಮಾಡದಂತೆ ಹೊಸಹಳ್ಳಿ, ಕಲಮರಹಳ್ಳಿ ಸೇರಿದಂತೆ ಮತ್ತಿತರ ಹಳ್ಳಿಗಳ ರೈತರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿರುವುದು ಒಂದು ಕಡೆಯಾದರೆ ಬ್ಯಾರೇಜ್ ಗೆ ಬರುತ್ತಿರುವ ನೀರಿನ ಒರತೆ ಸ್ಥಗಿತವಾಗಿರುವುದರಿಂದ ಲಿಫ್ಟ್ ಮಾಡುತ್ತಿರುವ ಪಂಪ್ ಗಳಿಗೆ ಬ್ಯಾರೇಜ್ ನಲ್ಲಿರುವ ಶಿಲ್ಟ್ ತುಂಬಿಕೊಂಡು ಪಂಪ್ ಗಳಿಗೆ ಹಾನಿ ಆಗುವುದರಿಂದ ನೀರನ್ನು ನಿಲುಗಡೆ ಮಾಡಲಾಗಿದೆ. ಹಾಗಾಗಿ ಹೊಸಹಳ್ಳಿ ಬ್ಯಾರೇಜ್ ನಲ್ಲಿ ನೀರು ಸ್ಥಗಿತ ಮಾಡಲಾಗಿದೆ.

9 ಕೆರೆಗಳಿಗೆ ನೀರು ಹಂಚಿಕೆ ಇಲ್ಲ-
ಧರ್ಮಪುರ ಕೆರೆ ಸೇರಿ ಇತರೆ 8 ಕೆರೆಗಳಿಗೆ ಯಾವುದೇ ಜಲ ಮೂಲದಿಂದ ನೀರು ಹಂಚಿಕೆ ಮಾಡಿಲ್ಲವಾಗಿರುವುದರಿಂದ ನೀರನ್ನು ಸದ್ಯಕ್ಕೆ ಸ್ಥಗಿತ ಮಾಡಲಾಗಿದೆ. ಮಳೆ ಬಂದಾಗ, ಮಳೆ ನೀರು ಹರಿದು ವೇದಾವತಿ ನದಿಯಲ್ಲಿ ತುಂಬಿ ಹರಿಸುವ ಸಂದರ್ಭದಲ್ಲಿ ಮಾತ್ರ ಹೊಸಹಳ್ಳಿ ಬ್ಯಾರೇಜ್ ನಿಂದ ನೀರು ಲಿಫ್ಟ್ ಮಾಡಿ 9 ಕೆರೆಗಳಿಗೆ ಭರ್ತಿ ಮಾಡಲು ಸಾಧ್ಯವಾಗಲಿದೆ. ಒಂದು ವೇಳೆ ಮಳೆ ಬಾರದೆ ವೇದಾವತಿ ನದಿ ಮೂಲ ತುಂಬಿ ಹರಿಯದಿದ್ದರೆ ಯಾವುದೇ ಕಾರಣಕ್ಕೂ 9 ಕೆರೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ, ಆದ್ದರಿಂದ ಜನಪ್ರತಿನಿಧಿಗಳು ಕೂಡಲೇ ಧರ್ಮಪುರ ಹೋಬಳಿಯ ಎಲ್ಲ ಕೆರೆಗಳಿ ವಾಣಿ ವಿಲಾಸ ಸಾಗರದಿಂದ ನೀರು ಹಂಚಿಕೆ ಮಾಡಿ 9 ಕೆರೆಗಳಿಗೆ ನೀರು ಹರಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಇಲ್ಲವಾದರೆ ಇಡೀ ಯೋಜನೆ ಹಳ್ಳ ಹಿಡಿಯಲಿದೆ.

ಏನಿದು ಯೋಜನೆ-
ಧರ್ಮಪುರ ಕೆರೆ, ಸೂಗೂರು, ಮುಂಗಸವಳ್ಳಿ, ಮುಂಗಸವಳ್ಳು ಶುದ್ಧಕಟ್ಟೆ, ಅಬ್ಬಿನಹೊಳೆ, ಈಶ್ವರಗೆರೆ, ಗೂಳ್ಯ, ಶ್ರವಣಗೆರೆ ಹಾಗೂ ಹರಿಯಬ್ಬೆ ಅಜ್ಜಿಕಟ್ಟೆ ಗಳಿಗೆ ನೀರು ಭರ್ತಿ ಮಾಡುವ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ಅವರು ರೂಪಿಸಿದ್ದರು. ಮೊದಲ ಹಂತದ ಯೋಜನೆಗೆ
40 ಕೋಟಿ ಮೀಸಲಿಟ್ಟಿದ್ದು ಪಂಪ್ ಹೌಸ್, 1.5 ಕಿ.ಮೀ  ರೈಸಿಂಗ್ ಮೈನ್, ಜಾಕ್ವೆಲ್, ಪವರ್ ಸ್ಟೇ ಷನ್, 900 ಎಚ್ಪಿ ಸಾಮರ್ಥ್ಯದ 4 ಮೋಟಾರ್ ಪಂಪ್ ಅಳವಡಿಸಲಾಗಿದೆ.
ಎರಡನೇ ಹಂತದ ಯೋಜನೆಗೆ
50 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನದಲ್ಲಿ 16 ಕಿ.ಮೀ ದೂರದ ರೈಸಿಂಗ್ ಮೈನ್, ನಂತರ ಎಚ್ಡಿಪಿಇ 17 ಕಿ.ಮೀ ಒಟ್ಟು 40 ಕಿ.ಮೀ . ಕಾಮಗಾರಿಗೆ ಬಳಸಲಾಗಿದೆ. ಈ ಯೋಜನೆಯಿಂದ  ಒಟ್ಟು 0.30 ಟಿಎಂಸಿ ಬಳಕೆ ಮಾಡಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕಾಗಿ ಧರ್ಮಪುರ ಏತ ನೀರಾವರಿ ಯೋಜನೆಗೆ 90 ಕೋಟಿ ಅನುದಾನ ಮಂಜೂರಾಗಿ ಎರಡು ಹಂತಗಳಲ್ಲಿ ಕಾಮಗಾರಿ ನಿರ್ವಹಿಸಲು ಆದೇಶ ಆಗಿತ್ತು.

ಹರಿಯಬ್ಬೆ ಅಜ್ಜಿಕಟ್ಟೆ ಕಥೆ ಅಯೋಮಯ-
ಏತ ನೀರಾವರಿ ಯೋಜನೆ ಅನ್ವಯ ಅಜ್ಜಿಕಟ್ಟೆ ಕೆರೆಯನ್ನು ಮೊದಲ ಹಂತದಲ್ಲಿ ಸೇರಿಸಿರಲಿಲ್ಲ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ಉದ್ಘಾಟಿಸಲು ಬಂದ ಸಂದರ್ಭದಲ್ಲಿ ಹರಿಯಬ್ಬೆ ಅಜ್ಜಿಕಟ್ಟೆ ಕೆರೆಯನ್ನು ಸೇರ್ಪಡೆ ಮಾಡಲು ಮೌಖಿಕವಾಗಿ ಸೂಚಿಸಿದ್ದರು.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ 2ನೇ ಹಂತದಲ್ಲಿ ಹರಿಯಬ್ಬೆ ಅಜ್ಜಿಕಟ್ಟೆ ಕೆರೆ ಸೇರ್ಪಡೆಯಾಗಿದ್ದರಿಂದಾಗಿ ಮೂಲ ನಕ್ಷೆಯಲ್ಲಿ ಇದು ಸೇರಿರಲಿಲ್ಲ. ಧರ್ಮಪುರ ಕೆರೆ ಲೆವೆಲ್ ಗೂ, ಅಜ್ಜಿಕಟ್ಟೆ ಕೆರೆ ಲೆವೆಲ್ ಗೂ ಸುಮಾರು 15 ಮೀಟರ್ ಏರುಪೇರಿದೆ. ಧರ್ಮಪುರ ಕೆರೆ ತಗ್ಗಿನಲ್ಲಿದ್ದರೆ ಅಜ್ಜಿಕಟ್ಟೆ ಕೆರೆ ಎತ್ತರದಲ್ಲಿದೆ. ಹಾಗಾಗಿ ಮೂಲ ಪ್ಲಾನ್ ಪ್ರಕಾರ ಯಾವುದೇ ಕಾರಣಕ್ಕೂ ಅಜ್ಜಿಕಟ್ಟೆಗೆ ನೀರು ಹರಿಸಲು ಸಾಧ್ಯವೇ ಇಲ್ಲ.

ಕಳೆದ 15 ದಿನಗಳಿಂದ ಪ್ರಾಯೋಗಾರ್ಥವಾಗಿ ನೀರನ್ನು ಲಿಫ್ಟ್ ಮಾಡಿದ ಸಂದರ್ಭದಲ್ಲಿ ಹರಿಯಬ್ಬೆ ವಾಟರ್ ಟ್ಯಾಂಕಿನಿಂದ ಸುಮಾರು 3-4 ಕಿಲೋ ಮೀಟರ್ ದೂರದಲ್ಲಿರುವ ಅಜ್ಜಿಕಟ್ಟೆ ಕೆರೆಗೆ ಪೈಪ್ ಲೈನ್ ಮಾಡಲಾಗಿದೆ. ಜೊತೆಗೆ ಅಲ್ಲಲ್ಲಿ ಗೇಟ್ ವಾಲ್ವು ಅಳವಡಿಸಲಾಗಿದೆ. ಆದರೆ ನೀರು ಎತ್ತರಕ್ಕೆ ಏರುತ್ತಿಲ್ಲವಾದ್ದರಿಂದ ಗೇಟ್ ವಾಲ್ವುನಲ್ಲಿ ಸಾಕಷ್ಟು ನೀರು ಸೋರಿಕೆ ಆಗುತ್ತಿದೆ. ಹರಿಯಬ್ಬೆಯಿಂದ ಅರ್ಧದಷ್ಟು ದೂರಕ್ಕೆ ಮಾತ್ರ ನೀರು ಏರಿಕೆ ಆಗಿದೆ. ಅಜ್ಜಿಕಟ್ಟೆ ಕೆರೆ ತನಕ ಇನ್ನೂ 2 ಕಿಲೋ ಮೀಟರ್ ದೂರ ನೀರು ಏರಬೇಕಾಗಿದ್ದು ಅಜ್ಜಿಕಟ್ಟೆ ಕೆರೆ ಎತ್ತರದಲ್ಲಿರುವುದರಿಂದ ನೀರು ಮೇಲಕ್ಕೆ ಏರುತ್ತಿಲ್ಲ. ಹಾಗಾಗಿ ಒಂದು ಹನಿ ನೀರು ಕೂಡ ಅಜ್ಜಿಕಟ್ಟೆ ಕೆರೆಗೆ ಸೇರಿಲ್ಲ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು ಎತ್ತರಕ್ಕೆ ತಕ್ಕಂತೆ ಪ್ಲಾನ್ ಮಾಡಿ ನೀರು ಹರಿಸಬೇಕಾಗಿದೆ. ಇಲ್ಲ ಅಜ್ಜಿಕಟ್ಟೆ ಒಂದಕ್ಕೆ ನೇರವಾಗಿ ಪೈಪ್ ಲೈನ್ ಮಾಡಿ ನೀರು ಹರಿಸಬೇಕಾಗಿದೆ. ಇದು ಬಿಜೆಪಿ ಸರ್ಕಾರದಲ್ಲಿ ಆಗಿರುವುದರಿಂದ ಈಗಿನ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಗಮನ ನೀಡುವುದು ಸಾಧ್ಯವೇ ಇಲ್ಲ. ಇನ್ನೂ ಅಜ್ಜಿಕಟ್ಟೆ ಕೆರೆ ಭರ್ತಿ ಕನಸು ಅಯೋಮಯವಾಗಿರಲಿದೆ.

ವೇದಾವತಿ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಿ ಗೂಳ್ಯ, ಅಬ್ಬಿನಹೊಳೆ, ಮುಂಗುಸುವಳ್ಳಿ-1, ಮುಂಗುಸುವಳ್ಳಿ ಶುದ್ಧಕಟ್ಟೆ-2, ಈಶ್ವರಗೆರೆ, ಸೂಗೂರು, ಶ್ರವಣಗೆರೆ, ಧರ್ಮಪುರ, ಹರಿಯಬ್ಬೆ ಅಜ್ಜಿಕಟ್ಟೆ ಕೆರೆಗಳಿಗೆ ನೀರು ಪಂಪ್ ಮಾಡಲು 2022ರಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು. ಯೋಜನೆ ಆರಂಭ ಹಂತದಲ್ಲಿ ಅಜ್ಜಿಕಟ್ಟೆ ಕೆರೆ ಸೇರ್ಪಡೆ ಮಾಡಿದ್ದರೆ ಈ ತಾಂತ್ರಿಕ ಸಮಸ್ಯೆ ಬರುತ್ತಿರಲಿಲ್ಲ. ಮುಖ್ಯಮಂತ್ರಿಗಳಿಂದ ಯೋಜನೆ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಅಜ್ಜಿಕಟ್ಟೆ ಸೇರ್ಪಡೆ ಮಾಡಲು ಸೂಚಿಸಿದ್ದರಿಂದ ಈ ಸಮಸ್ಯೆ ಉಲ್ಭಸಿವಿದೆ. ಜಿ.ಭೀಮರಾಜ್, ಅನುಷ್ಠಾನಾಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ, ಚಿತ್ರದುರ್ಗ.

ವೇದಾವತಿ ನೀರಿನ ಒಳ ಹರಿವು ಸ್ಥಗಿತವಾಗಿದ್ದು ಧರ್ಮಪುರ ಸೇರಿ ಇತರೆ 8 ಕೆರೆಗಳಿಗೆ ನೀರು ಲಿಫ್ಟ್ ಮಾಡುವುದನ್ನು ಸ್ಥಗಿತ ಮಾಡಲಾಗಿದೆ. ನೀರು ಪಂಪ್ ಮಾಡಿದರೆ ಬ್ಯಾರೇಜ್ ನಲ್ಲಿರುವ ಶೀಲ್ಟ್ ಪಂಪ್ ಗೆ ಕಟ್ಟಿಕೊಂಡು ಪಂಪ್ ಹಾಳಾಗಲಿದೆ. ಹಾಗಾಗಿ ವೇದಾವತಿ ನೀರಿನ ಒಳ ಹರಿವು ಹೆಚ್ಚಳವಾದರೆ ಮತ್ತೆ ಪಂಪ್ ಮಾಡಲಾಗುತ್ತದೆ. ಇನ್ನೂ ಹರಿಯಬ್ಬೆ ಅಜ್ಜಿಕಟ್ಟೆ ಕೆರೆ ನೀರು ಏರುತ್ತಿಲ್ಲ. ಹಾಗಾಗಿ ಹೊಸ ಪಂಪ್ ಬುಕ್ ಮಾಡಿದ್ದು 15 ರಿಂದ 20 ದಿನಗಳಲ್ಲಿ ಪಂಪ್ ಬರಲಿದ್ದು ಬಂದ ತಕ್ಷಣ ಪೈಪ್ ಲೈನ್ ಗೆ ಅಳವಡಿಸಿ ಅಜ್ಜಿಕಟ್ಟೆ ಕೆರೆ ನೀರು ಭರ್ತಿ ಮಾಡುವ ಕಾರ್ಯ ಮಾಡಲಾಗುತ್ತದೆ. ಅಣ್ಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಚಿತ್ರದುರ್ಗ.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon