ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡಿಗರು
ಕನ್ನಡಿಗರು ವೀರ ಕನ್ನಡಿಗರು
ನವೆಂಬರ ಮಾಸಕೆ ಸೀಮಿತರು
ಉತ್ಸವ ಉರುಪು ಆವೇಶಗಳು
ಬೆಳೆಸುವ ಉಳಿಸುವ ಕಹಳೆಗಳು
ಎಲ್ಲವೂ ಆ ದಿನಗಳಲ್ಲೇ
ವರ್ಷದಲಿ ಎಲ್ಲಿಯೂ ಕಾಣದ
ಮಾಡು ಮಡಿ ಕ್ರಾಂತಿ ಕೀರ್ತಿಯ
ನೆನಪಿಸಲೂ ಬಯಸದ
ಹೋರಾಟ ಸೋಗಿನ ಮೂರ್ಖಗಳು
ಮೆರವಣಿಗೆ ವಸೂಲಿ ಸಂಘಗಳು
ಯುದ್ಧೋನ್ಮಾದ ಧ್ವನಿವರ್ಧಕದಲ್ಲೇ
ಗಡಿ ನೆಲ ಜಲ ಅಳಿಯುತಿವೆ
ಅಕ್ಕ ಪಕ್ಕ ಅವ್ವಂದಿರ ಜರತಾರಿಲಿ
ಇದ್ದೂ ಇಲ್ಲದ ಮಲತಾಯಿ ನನ್ನವ್ವ
ಸೈನಿಕರಾರೋ ಭುವನೇಶ್ವರಿಗೆ
ಹಳದಿ ಕೆಂಪಲಿ ಜೀವ ತಳೆದು
ಪಳ್ಳೆಂದು ಹೊಳೆವ ಸೆಳೆ ಮಿಂಚಂತೆ
ಮಧ್ಯರಾತ್ರಿ ಮತ್ತೇರಿಸೋ ನಶೆಯಲಿ
ಕಳೆಗುಂದಿದ ಮುಖಗಳು
ಶವವಾದ ಮಸಿ ಫಲಕಗಳು
ಉಳಿದೆಲ್ಲವೂ ಭಜಂತ್ರಿಯ ಜೊತೆ
ನಾಡು ಮಲಗಿದಾಗ ದೆವ್ವಗಳೆದ್ದ ಹಾಗೆ
ಕರ್ಕಶ ಶಬ್ದಕೆ ಹುಚ್ಚರ ಹೆಜ್ಜೆಗಳು
ನೋಡಲು ಬೀದಿ ಮನಸುಗಳು
ನನಗನಿಸಿದ್ದಿಷ್ಟೇ
ಕನ್ನಡ ತೇರು ಎಳೆಯುತ್ತಿರುವೆವೋ

ಇಲ್ಲಾ ಮಧ್ಯದಲ್ಲಿ ನಿಲ್ಲಿಸಿ
ಬೆತ್ತಲೆ ಮಾಡುತ್ತಿರುವೆವೋ
ಕವಿತೆ: ಕುಮಾರ್ ಬಡಪ್ಪ, ಚಿತ್ರದುರ್ಗ.

