ಭಕ್ತಿ ಭಾವದ ಸಾಗರದಲ್ಲಿ ಜರುಗಿದ ಸಣ್ಣಕ್ಕಿ ವೀರಭದ್ರೇಶ್ವರ ಐತಿಹಾಸಿಕ ರಥೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ವಿಜಯನಗರ:
ಹೊಸಪೇಟೆ ನಗರದ ನೆಹರು ಕಾಲೋನಿಯಲ್ಲಿ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಯ ಐತಿಹಾಸಿಕ ರಥೋತ್ಸವವು ಭಕ್ತಿ
, ಭಾವ ಮತ್ತು ಸಂಪ್ರದಾಯದ ವೈಭವದೊಂದಿಗೆ ಭಾನುವಾರ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಭಾಗವಹಿಸಿ ರಥೋತ್ಸವವನ್ನು ಕಣ್ತುಂಬಿಕೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ರಥೋತ್ಸವಕ್ಕೂ ಮುನ್ನ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಯಿತು. ಬಳಿಕ ಶ್ರೀಗುರು ಕೊಟ್ಟೂರು ಸಂಸ್ಥಾನ ಮಠದ ಡಾ. ಬಸವಲಿಂಗ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ದೇವಾಲಯದಲ್ಲಿ ಸಂಪ್ರದಾಯದಂತೆ ಬಲಗಡೆ ಹೂವು ಬಿದ್ದ ಹಿನ್ನೆಲೆ, ಭಕ್ತರಲ್ಲಿ ಹರ್ಷೋದ್ಗಾರ ಮೂಡಿ, ಶುಭಸೂಚಕವೆಂದು ಪರಿಗಣಿಸಿ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

- Advertisement - 

ಅದಾದ ಬಳಿಕ ಭಕ್ತರು ಜೈ ವೀರಭದ್ರೇಶ್ವರಎಂಬ ಘೋಷಣೆಗಳ ನಡುವೆ ರಥಕ್ಕೆ ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿ, ಅಪಾರ ಶ್ರದ್ಧೆಯಿಂದ ರಥವನ್ನು ಎಳೆದರು. ಭಕ್ತರ ಜಯಘೋಷ, ಮಂಗಳವಾದ್ಯಗಳ ನಾದ ಹಾಗೂ ಧಾರ್ಮಿಕ ಉತ್ಸಾಹದ ನಡುವೆ ರಥೋತ್ಸವವು ಅತ್ಯಂತ ಭವ್ಯವಾಗಿ ನೆರವೇರಿತು.

ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ಭಕ್ತಾದಿಗಳು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ವೇಳೆ ಬಿಜೆಪಿ ಮುಖಂಡ ಸಿದ್ದಾರ್ಥ್ ಸಿಂಗ್, ಕಾಂಗ್ರೆಸ್ ಮುಖಂಡೆ ರಶ್ಮಿ ರಾಜಶೇಖರ ಹಿಟ್ನಾಳ್ ಸೇರಿದಂತೆ ವಿವಿಧ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ರಥೋತ್ಸವದಲ್ಲಿ ಪಾಲ್ಗೊಂಡರು.

- Advertisement - 

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಜಯನಗರ ಎಎಸ್ಪಿ ಮಂಜುನಾಥ್ ಹಾಗೂ ಟಿಬಿ ಡ್ಯಾಂ ಸಿಪಿಐ ಮಹಮ್ಮದ್ ಗೌಸ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭಕ್ತರ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿದ್ದು, ಯಾವುದೇ ಅಡಚಣೆ ಇಲ್ಲದೆ ರಥೋತ್ಸವ ಶಾಂತಿಯುತವಾಗಿ ಸಂಪನ್ನವಾಯಿತು.

ಸಾಂಪ್ರದಾಯಿಕ ನಂಬಿಕೆ, ಶ್ರದ್ಧೆ ಮತ್ತು ಸಮುದಾಯದ ಏಕತೆಯನ್ನು ಸಾರಿದ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವವು ಭಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದು, ನೆಹರು ಕಾಲೋನಿಯಲ್ಲಿ ಧಾರ್ಮಿಕ ಉತ್ಸವದ ಸಂಭ್ರಮ ಮನೆಮಾಡಿತು.

 

 

Share This Article
error: Content is protected !!
";