ಚಂದ್ರವಳ್ಳಿ ನ್ಯೂಸ್, ನೆಲಮಂಗಲ(ಬೆಂ. ಗ್ರಾಮಾಂತರ):
ಮೂವರು ಮುಸುಕುಧಾರಿಗಳು ಆಟಿಕೆ ಗನ್ ತೋರಿಸಿ ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ ನೆಲಮಂಗಲದಲ್ಲಿ ಜರುಗಿದೆ.
ರಾತ್ರಿ ಚಿನ್ನದಂಗಡಿ ಮುಚ್ಚುವ ಸಂದರ್ಭದಲ್ಲಿ ಹೊಂಚು ಹಾಕಿ ದಾಳಿ ಮಾಡಿದ ಮುಸುಕುಧಾರಿ ಆರೋಪಿಗಳು ಕೇವಲ 16 ಸೆಕೆಂಡ್ಗಳಲ್ಲಿ ಕೃತ್ಯ ಎಸಗಿ ಪರಾರಿಯಾಗಿವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಜುಲೈ 24ರಂದು ನಡೆದಿದೆ.
ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ನ ರಾಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಜು.24ರ ರಾತ್ರಿ 8 ರಿಂದ 9 ಗಂಟೆಯೊಳಗೆ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶಾಪ್ಗೆ ಗನ್ ಹಿಡಿದು ನುಗ್ಗಿದ ಮೂವರು ದರೋಡೆ ಕೋರರು ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡು, ಅಂಗಡಿ ಮಾಲೀಕ ಮತ್ತು ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದಾರೆ.
ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನೂ ತಳ್ಳಿ, ಚಾಕುವಿನಿಂದ ಗಾಯ ಮಾಡಿ, ಸಿಕ್ಕ ಚಿನ್ನವನ್ನು ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಡಿವೈಎಸ್ಪಿ, ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು . ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, “ಅಂದು ಅಮಾವಾಸ್ಯೆ ಕಾರಣ ಗ್ರಾಹಕರು ಇರಲಿಲ್ಲ. ಹೀಗಾಗಿ ಮುಂಚಿತವಾಗಿ ಅಂಗಡಿ ಮುಚ್ಚುವ ವೇಳೆ ಏಕಾಏಕಿ ನುಗ್ಗಿದ್ದ ಮೂವರು ಮುಸುಕುಧಾರಿಗಳು ಟಾಯ್ ಗನ್ ತೋರಿಸಿ ಅಂಗಡಿ ಮಾಲೀಕನನ್ನು ಹೆದರಿಸಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಆಭರಣಗಳ ಬಾಕ್ಸ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೇವಲ 15 ರಿಂದ 16 ಸೆಕೆಂಡ್ಗಳಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಒಟ್ಟು 184 ಗ್ರಾಂ ಚಿನ್ನಾಭರಣವನ್ನು ದರೋಡೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುವುದಾಗಿ ಅವರು ಹೇಳಿದ್ದಾರೆ.

