ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದುರ್ಗದ ವೇಣು
ಕೋಟೆ ಕೊತ್ತಲಗಳೊಂದಿಗೆ ವಾದ
ಕಲ್ಲು ಬೆಟ್ಟಗಳ ಜೊತೆ ಸಂವಾದ
ಮೇಲುದುರ್ಗವೇ,ಆಧ್ಯಾತ್ಮದೂರು
ತುಪ್ಪದ ಕೊಳ,ಇಳಿಜಾರು ಬಂಡೆ
ಕುಳಿತು ಓಡಾಡಿ ಈಜಾಡಿದ
ಬುರುಜು ಬತೇರಿ ಅಕ್ಕತಂಗಿ ದೊಡ್ಡೊಂಡ
ಹೀಗೆ,ಗತ ಚರಿತ್ರೆಯ ಅನ್ವೇಷಿಸಿ,
ಬರೆದೆ ಸುತ್ತು ಕೋಟೆಯ ಇತಿಹಾಸ
ಸಾಲು ಪುಟಗಳು,ಸಾವಿರಾರು
ಕಲ್ಲರಳಿ ಹೂವಾಗಿ,ಮುದವಿಟ್ಟಿವೆ
ರಾಜಮಾತೆ ಗಂಡೋಬಳವ್ವೆ
ಮರೆತ ಊರಿಗೆ ಪರಿಚಯಿಸಿದೆ
ಮತ್ತಿ ತಿಮ್ಮಣ್ಣ,ಭರಮಣ್ಣನ ಸಾಹಸ
ಕೊನೆ ಮದಕರಿಯ,ರಣ ಭೀಬತ್ಸ
ಪಾಳೇಗಾರರ,ಕಾಲ ಇತಿಹಾಸ
ಬಿತ್ತಿದವೆಲ್ಲವೂ,ನಳ ನಳಿಸಿವೆ
ಅಕ್ಷರ ಅರಸನ,ಎಚ್ಚರ ಕಥೆಗಳು
ಮೌಡ್ಯ ಧಿಕ್ಕರಿಸಿ,ಅಚ್ಚಾದವು ನೂರಾರು
ಬೆತ್ತಲೆ ಸೇವೆ,ಕತ್ತಲಿಗಿಟ್ಟ ಬೆಳಕಲ್ಲವೇ
ತಿಪ್ಪಜ್ಜಿ ಮಾತು,ನಮ್ಮೊಳಗೆ ಮೆಲುಕುತ್ತವೆ
ತಿದ್ದು,ಬುದ್ಧಿಯ,ಬದುಕ ಜೋಕಾಲಿ
ಬರೆದ,ನವ್ಯ ಕಾದಂಬರಿಗಳು
ದುರ್ಗ ಸಂಗ್ರಾಮ,ಸಂಬಂಧ
ಸ್ವಾತಂತ್ರ್ಯಕಲಿಗಳ,ಬೇಡರ ದಂಗೆ
ಪ್ರೇಮಕ್ಕೊಂದು,ಪ್ರೇಮಪರ್ವ
ಪುಟ್ಟಣ್ಣನ ಗೆಳೆತನ,ಅಮೃತಗಳಿಗೆ
ಅದೆಷ್ಟೋ ಚಿತ್ರಗಳ,ಸಂಭಾಷಣೆ ಸೈ
ತಬ್ಬಿ,ಸಿನಿ ರಂಗವೂ ಮುದ್ದಾಡಿತಲ್ಲವೇ
ನೆಲ ಋಣ,ಕಣ ಕಣವು ಜೊತೆಯಲಿ
ವೇಣುಗೋಪಾಲ,ದೇವಿ ಉಚ್ಚಂಗಿ
ಸಂಪಿಗೆ ಸಿದ್ದಯ್ಯ,ಪಲ್ಗುಣನೂ ಸಂಪನ್ನ
ಜನಪರ ಬರವಣಿಗೆ,ಊರು ನಿನ್ನೊಟ್ಟಿಗೆ
ನೀ,ರಚಿಸಿದ ರುಚಿ ಸಾಹಿತ್ಯಕೆ
ರಾಜ ಬೀದಿಯ,ಅಭಿಮಾನದ ತೇರು
ಜನಮಾನಸದಿ ಜನಪ್ರಿಯನಾದೆ
ಆಡಳಿತದ,ಗೌರವ ಸನ್ಮಾನ
ವೃತ್ತಕ್ಕೊಂದು ಹೆಸರಾಯಿತು
ದಣಿವರಿಯದ ಬರಹ
ಬಗೆದಷ್ಟೂ ಇತಿಹಾಸವೆಷ್ಟು
ನಿಮಗೂ ಬರಹಕ್ಕೂ ಆಯುಷ್ಯ ಬರಲಿ

ನಾಡ ಸಾಹಿತ್ಯ ತೇರು ಕೈಬೀಸಿ ಕರೆಯಲಿ
ನೆಲಕು ಪುಣ್ಯ ದುರ್ಗವೂ ಧನ್ಯ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.

