ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 2026-27ನೇ ಸಾಲಿನ ಎಂ.ಬಿ.ಬಿ.ಎಸ್ ಕೋರ್ಸ್ ಹಾಗೂ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಎಂ.ಡಿ. ಪದವಿಗಳ ಕೋರ್ಸ್ಗಳನ್ನು ಪ್ರಾರಂಭಿಸಲು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಳೀಯ ಪರಿಶೀಲನಾ ಸಮಿತಿ (ಎಲ್.ಐ.ಸಿ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಎಂವಿಎ ಪ್ರಕೃತಿ ಚಿಕಿತ್ಸೆ ಮತ್ತು ವೇದ ವಿಜ್ಞಾನ ಕಾಲೇಜು ಪ್ರಾಂಶುಪಾಲರು ಸಮಿತಿಯ ಅಧ್ಯಕ್ಷೆ ಡಾ. ವಿನುತಾ ರಾವ್, ಸದಸ್ಯರಾದ ಪದ್ಮಶ್ರೀ, ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಡಾ. ಶ್ರುತಿ ಎಚ್.ಪಿ, ಹಾಗೂ ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಾ. ನಾರಾಯಣ ಮೂರ್ತಿ ಅವರು ಬೆಳಿಗ್ಗೆ 9:30ಕ್ಕೆ ಆಗಮಿಸಿ, ಬೆಳಿಗ್ಗೆ 9:40ಕ್ಕೆ ಹಾಜರಾತಿ ಪರಿಶೀಲನೆ ನಡೆಸಿತು.
ಸಂಸ್ಥೆಯ ಎಲ್ಲಾ ಬೋಧಕ ಸಿಬ್ಬಂದಿಗಳ ಘೋಷಣೆ ನಮೂನೆಗಳು ಮತ್ತು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾಲೇಜು ಹಾಗೂ ಬೋಧಕ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿದರು.
ಸಂಸ್ಥೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಕ್ಕಾಗಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಯುವರಾಜ್ ಅವರು ಸ್ಥಳೀಯ ಪರಿಶೀಲನಾ ಸಮಿತಿಗೆ ವಂದನೆಗಳನ್ನು ಸಲ್ಲಿಸಿದರು.

