ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಕುಟುಂಬಕ್ಕೆ ಹಂಚಿಕೆಯಾದ ಮುಡಾ ನಿವೇಶನಗಳನ್ನು ವಾಪಸ್ ಕೊಡುವ ನಿರ್ಣಯ ಮಾಡಿದ್ದಾರೆ ಎಂದರೆ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ನಿನ್ನೆ ರಾತ್ರಿ ಬಹಳ ಮಹತ್ತರವಾದ ಬೆಳವಣಿಗೆ ಆಗಿದೆ. ಸೈಟ್ ವಾಪಸ್ ನೀಡುವ ಕುರಿತು ಸಿಎಂ ಪತ್ನಿ ಅವರೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆಸಿದ್ದಾರೋ ಗೊತ್ತಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಯಾವ ಮುಖ್ಯಮಂತ್ರಿಗಳು ನಾನು ಜಗ್ಗಲ್ಲ ಬಗ್ಗಲ್ಲ ಎನ್ನುತ್ತಿದ್ದರೋ, 62 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡುತ್ತೇವೆ ಎನ್ನುತ್ತಿದ್ದರೋ, ಅವರೇ ಈಗ ಸೈಟ್ ವಾಪಸ್ ಕೊಡುವ ನಿರ್ಣಯ ಮಾಡಿದ್ದಾರೆ. ಅಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯವಾಗಿಯೂ ಸಿಂಪಥಿ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶ ಸ್ಪಷ್ಟವಾಗಿದೆ.
ಕೂಡಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು, ಅದಕ್ಕೂ ಮುನ್ನ ರಾಜ್ಯಪಾಲರ ಬಳಿ ಕ್ಷಮಾಪಣೆ ಕೋರಬೇಕು ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ. ‘ಕೆಟ್ಟ ಮೇಲೆ ಬುದ್ಧಿ ಬಂತು‘ ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ.
“ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ” ಎಂದು ಅಂದು ಆರ್ಭಟಿಸಿದ್ದ ಸಿದ್ದರಾಮಯ್ಯನವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು, ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿ ನಾವು ನಡೆಸಿದ
‘ಮೈಸೂರು ಚಲೋ’ ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದರು. ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ ರಾಜ್ಯಪಾಲರನ್ನು ಅವಹೇಳನ ಮಾಡಿದರು. ಅವರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು.
ನ್ಯಾಯಾಲಯದಲ್ಲಿ ಜಯ ದೊರಕದ ಹಿನ್ನಲೆಯಲ್ಲಿ ಕಾನೂನಿನ ಕುಣಿಕೆ ಬಿಗಿತ ಹೆಚ್ಚಾದಂತೆ, CBI-ED ತನಿಖೆಗಳ ನಿರೀಕ್ಷೆಯಿಂದ ಬೆದರಿದ ಮುಖ್ಯಮಂತ್ರಿಗಳು ಏಕಾಏಕಿ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿರುವುದು ಅವರು ಕಾನೂನು ಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ನಿವೇಶನ ವಾಪಸ್ ಕೊಟ್ಟಿದ್ದೇವೆ ಅಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು ಎಂದು ಅಂದುಕೊಂಡಿದ್ದರೆ ಅದು ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ, ನೀವೇಶನಗಳನ್ನು ಹಿಂದಿರುಗಿಸಿ ತಪ್ಪೊಪ್ಪಿಕೊಂಡಂತೆ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮರೆತು ಹೋಗಿರುವ ತಮ್ಮ ನೈತಿಕತೆ ಪ್ರಜ್ಞೆ ಪ್ರದರ್ಶಿಸಿದಂತಾಗುತ್ತದೆ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.