ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪಕ್ಷದ ಹಿರಿಯರು ಹಾಗೂ ಕೇಂದ್ರದ ಮಾಜಿ ಸಚಿವರೂ ಆದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರನ್ನು ಸೋಮವಾರ ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಸರಳ ಹಾಗೂ ಸಜ್ಜನಿಕೆಯ, ಕಾರ್ಯಕರ್ತ ಸ್ನೇಹಿ ಸದಾನಂದಗೌಡರು ನಡೆದುಬಂದ ಹಾದಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಪರಿ ಅನನ್ಯವಾದುದು.
ಅವರ ಮಾರ್ಗದರ್ಶನ ನಮ್ಮಂತವರಿಗೆ ಸದಾ ಸ್ಫೂರ್ತಿ ಹಾಗೂ ಚೈತನ್ಯ ತುಂಬುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಹಾಗೂ ಹೋರಾಟಗಳನ್ನು ರೂಪಿಸುವ ಕುರಿತು ಅವರಿಂದ ಸೂಕ್ತ ಸಲಹೆಗಳನ್ನು ಪಡೆದು, ಪಕ್ಷದ ಚಟುವಟಿಕೆಗಳಲ್ಲಿ ಎಂದಿನಂತೆ ಅವರು ನಮ್ಮೊಡನಿದ್ದು ಶಕ್ತಿ ತುಂಬಬೇಕೆಂದು ವಿಜಯೇಂದ್ರ ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಉಪಸ್ಥಿತರಿದ್ದರು.

