ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿಎಂ ಆಗಬೇಕು. ಮಠಾಧೀಶರ ನೇತೃತ್ವದಲ್ಲಿ ಎಲ್ಲ ವೀರಶೈವ ಲಿಂಗಾಯತ ಒಳಪಂಗಡಗಳ ದೊಡ್ಡ ಮಟ್ಟದ ಸಭೆ ಮಾಡುತ್ತೇವೆ. ಅದಕ್ಕೆ ಏನು ಬೇಕೋ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲ ವೀರಶೈವ ಲಿಂಗಾಯತರು ಸೇರಿದಂತೆ ಇತರೆ ಸಮುದಾಯಗಳ ಪ್ರಶ್ನಾತೀತ ನಾಯಕ. ಅಂದು ಯಡಿಯೂರಪ್ಪ ಸಿಎಂ ಆಗಲು ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರರೂ ಸೇರಿದಂತೆ ಎಲ್ಲಾ ಸಮಾಜಗಳು ಬೆಂಬಲ ಕೊಟ್ಟಿದ್ದವು.
ಆದರೆ ವೀರಶೈವ ಲಿಂಗಾಯತ ಸಮಾಜ ಒಂದರಿಂದಲೇ ರಾಜಕಾರಣ ಮಾಡಲು ಆಗಲ್ಲ ಹಾಗೂ ಒಂದೇ ಸಮಾಜದಿಂದ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ವಿಜಯೇಂದ್ರ ಅವರ ನೇತೃತ್ವದಲ್ಲಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ. ಈಗಾಗಲೇ ನಾವು ಕೆಲ ಮಠಾಧೀಶರನ್ನು ಸಂಪರ್ಕಿಸಿದ್ದೇವೆ. ಆದರೆ, ಕೆಲವರು ಯಡಿಯೂರಪ್ಪನವರಿಗೆ ವೀರಶೈವ ಲಿಂಗಾಯತರ ಬೆಂಬಲ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಮಠಾಧೀಶರರೊಂದಿಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಸಭೆ ಮಾಡಿ ಮಠಾಧೀಶರ ಬೆಂಬಲ ಪಡೆದು, ಯಡಿಯೂರಪ್ಪ, ವಿಜಯೇಂದ್ರರಿಗೆ ಸಂಪೂರ್ಣ ಸಮಾಜ ಜೊತೆಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.
ಯತ್ನಾಳ್ಗೆ ಟಾಂಗ್:
ನಮ್ಮಲ್ಲಿ ಕೆಲ ಸ್ವಯಂಘೋಷಿತ ನಾಯಕರಿದ್ದಾರೆ. ಜನ ಮೆಚ್ಚಿದ ನಾಯಕರಾಗಬೇಕೇ ಹೊರತು ಸ್ವಯಂ ಘೋಷಿತ ನಾಯಕರಾಗಬಾರದು ಎಂದು ಯತ್ನಾಳ್ ಹೆಸರೇಳದ ಟಾಂಗ್ ನೀಡಿದರು.
ನಾನು ವೀರಶೈವ ಲಿಂಗಾಯತ ಎನ್ನುತ್ತಾರೆ. ಇವರು ಹಿಂದೂ ಹುಲಿನೋ ಇಲಿನೋ. ಮತ್ತೊಮ್ಮೆ ಉತ್ತರ ಕರ್ನಾಟಕ ಎನ್ನುತ್ತಾರೆ, ಯಾವೂ ಇಲ್ಲ. ಇವೆಲ್ಲಾ ಮುಖವಾಡಗಳು. ನೀವು ವೀರಶೈವ ನಾಯಕರಲ್ಲ, ಡಮ್ಮಿ. ನೀವೆಲ್ಲ ತಿರಸ್ಕೃತ ನಾಣ್ಯಗಳು ಎಂದು ಯತ್ನಾಳ್ ಹೆಸರೇಳದೆ ಅವರ ವಿರುದ್ಧ ರೇಣುಕಾಚಾರ್ಯ ಟೀಕಾಪ್ರಹಾರ ಮಾಡಿದರು.