ಕರೇಕಲ್ ಕೆರೆ ಗಂಗಾಪೂಜೆ ಕಾರ್ಯದಲ್ಲಿ ಪಾಲ್ಗೊಂಡ ಗ್ರಾಮ ದೇವತೆಗಳು

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ವರ್ಷದ ಹಿಂಗಾರು ಮಳೆ ಚಳ್ಳಕೆರೆ ತಾಲ್ಲೂಕಿಗೆ ಸಮೃದ್ದವಾಗಿ ಗಂಗಾದೇವಿಯ ದರ್ಶನ ಮಾಡಿಸಿದೆ. ನಗರ ವ್ಯಾಪ್ತಿಯ ಕೆರೆಗಳಲ್ಲದೆ
, ಗ್ರಾಮೀಣ ಭಾಗದ ಎಲ್ಲಾ ಕೆರೆಗಳು ತುಂಬಿ, ಕೆಲವು ಕೋಡಿಬಿದ್ದಿವೆ.

ನಗರದ ನಾಯಕನಹಟ್ಟಿ ರಸ್ತೆಯಲ್ಲಿರುವ ಕರೇಕಲ್ ಕೆರೆಯೂ ಸಹ ಬಹಳ ವರ್ಷಗಳ ನಂತರ ತುಂಬಿಹರಿದಿದ್ದು, ಈ ಭಾಗದ ಜನರ ಸಂತೋಷ ಹೆಚ್ಚಾಗಿದೆ. ಕೆರೆ ತುಂಬಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗಂಗಾಪೂಜೆ ಸಲ್ಲಿಸಿರುತ್ತಾರೆ.

ಚಳ್ಳಕೆರೆ ನಗರದ ಪುರಾತನ ಕೆರೆಗಳಲ್ಲಿ ಒಂದಾದ ಕರೇಕಲ್ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗ್ರಾಮ ದೇವತೆಗಳಾದ ಶ್ರೀಚಳ್ಳಕೆರೆಯಮ್ಮ, ಉಡಸಲಮ್ಮ ದೇವಿಯ ಮೆರವಣಿಗೆ ಜೊತೆಗೆ ಗಂಗಾಪೂಜೆ ಕಾರ್ಯಕ್ರಮವನ್ನು ಸಹ ನಡೆಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಗೌಡ್ರರಾಮಣ್ಣ, ತಳವಾರರು, ಆಯಗಾರರು, ಮಡಿವಾಳರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಸೇರಿ ಗಂಗಾಪೂಜೆ ಕಾರ್ಯಕ್ರಮವನ್ನು ಭಕ್ತಿಯಿಂದ ನಡೆಸಿದರು.

ಪ್ರಾರಂಭದಲ್ಲಿ ಕೆರೆಯ ಏರಿಮೇಲೆ ಸ್ಥಾಪಿತವಾಗಿರುವ ಅಕ್ಕಮ್ಮದೇವತೆಗಳ ಪೂಜೆಯ ನಂತರ ಎರಡೂ ಗ್ರಾಮದೇವತೆಗಳನ್ನು ಸೂಜಿಮಲ್ಲೇಶ್ವರಸ್ವಾಮಿ ದೇವಸ್ಥಾನಕ್ಕೆ ಕರೆದ್ಯೊಯ್ದು ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.

ನಂತರ ಅಲ್ಲಿಂದ ಕರೇಕಲ್ ಕೆರೆಯ ಕೋಡಿಪ್ರದೇಶಕ್ಕೆ ತಂದು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು. ನೂರಾರು ಭಕ್ತರು ಆಗಮಿಸಿ ಗ್ರಾಮ ದೇವತೆಗಳು ನಡೆಸಿದ ಗಂಗಾಪೂಜೆ ಕಾರ್ಯವನ್ನು ಕಣ್ತುಂಬಿಕೊಂಡರು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ದೇವಸ್ಥಾನದ ಆಡಳಿತಮಂಡಳಿ ನಿರ್ದೇಶಕರಾದ ಪಿ.ತಿಪ್ಪೇಸ್ವಾಮಿ, ದಳವಾಯಿಮೂರ್ತಿ, ಚಿತ್ರಯ್ಯನಹಟ್ಟಿನಾಗರಾಜ, ಟೈಲರ್‌ವೀರೇಶ್, ಮಂಜುನಾಥ, ಬಸವರಾಜ, ನಾಗರಾಜ, ಕೋಟೆಚಂದ್ರಶೇಖರ್, ಚಿಕ್ಕಣ್ಣ, ನಾಗಣ್ಣ, ಪ್ರಸಾದ್, ರುದ್ರಣ್ಣ ಮುಂತಾದವರು ಉಪಸ್ಥಿತರಿದ್ದರು.

 

 

 

- Advertisement -  - Advertisement -  - Advertisement - 
Share This Article
error: Content is protected !!
";