ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೂಣಿಕೆರೆ ಗ್ರಾಮದಲ್ಲಿ ಡೆಂಗ್ಯೂ ಉಲ್ಬಣಿಸುತ್ತಿದೆ. ಗ್ರಾಮದ ಯಾವುದೇ ಚರಂಡಿ ಸೇರಿದಂತೆ ಬೀದಿ, ತಿಪ್ಪೆಗುಂಡಿ ಮತ್ತಿತರ ಜಾಗದಲ್ಲಿ ಸಾಕಷ್ಟು ಮಲೀನವಾಗಿದ್ದು ಡೆಂಗ್ಯೂ ಜ್ವರ ಹೆಚ್ಚಳಕ್ಕೆ ಕಾರಣವಾಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿ, ಸೊಳ್ಳೆಗಳ ನಿಯಂತ್ರಣದೊಂದಿಗೆ ಡೆಂಗ್ಯೂ ರೋಗ ನಿಯಂತ್ರಣ ಮಾಡುವಂತೆ ಹಾಗೂ ಸೊಳ್ಳೆ ನಿರ್ಮೂಲನೆಗಾಗಿ ಫಾಗಿಂಗ್ ಮಾಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು.
ಗ್ರಾಮದಲ್ಲಿ ಒಂದು ವರ್ಷ ಒಂಬತ್ತು ತಿಂಗಳ ಗಂಡು ಮಗುವಿಗೆ ಡೆಂಗ್ಯೂ ಪಾಸಿಟಿವ್ ಬಂದಿದೆ. ಗ್ರಾಮದಲ್ಲಿನ ಮಕ್ಕಳು, ವಯೋವೃದ್ಧರು ಸೇರಿದಂತೆ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವವರನ್ನು ರಕ್ಷಿಸಲು ಕೂಡಲೇ ಡೆಂಗ್ಯೂ ಮುಕ್ತ ಗ್ರಾಮ ಮಾಡಬೇಕು, ಹಾಗೂ ಇಡೀ ಗ್ರಾಮದಲ್ಲಿನ ಎಲ್ಲ ಮನೆಗಳ ಮುಂದೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ದಿನ ಬಿಟ್ಟು ದಿನ ಫಾಗಿಂಗ್ ಮಾಡುವಂತೆ ಕೂನಿಕೆರೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕೂನಿಕೆರೆ ಗ್ರಾಮದ ಚರಂಡಿಗಳಲ್ಲಿ ಹಲವು ದಿನಗಳಿಂದ ಕೊಳಚೆ ನೀರು ತುಂಬಿ ದುರ್ನಾತ ಬಡಿಯುತ್ತಿದೆ. ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಊರಿನ ತುಂಬಾ ಗಿಡ ಗಂಟೆಗಳು, ಮುಳ್ಳಿನ ಕೊಂಬೆಗಳು ರಾಜಾಜಿಸುತ್ತಿವೆ. ಸ್ವಚ್ಛತೆ ಎನ್ನುವುದೇ ಕಾಣುವದಂತಾಗಿದೆ.
ಮಿತಿ ಮೀರಿ ಸೊಳ್ಳೆಗಳು ಹೆಚ್ಚಿರುವುದರಿಂದ ಈಗಾಗಲೇ ಕೂನಿಕೆರೆ ಗ್ರಾಮದಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿದ್ದು ಉಲ್ಬಣಗೊಳ್ಳುವ ಮುನ್ನ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕು.
ಚಿಕ್ಕ ಚಿಕ್ಕ ಮಕ್ಕಳಿಗೆ ಸೊಳ್ಳೆಗಳ ಕಚ್ಚುವುದರಿಂದ ಡೆಂಗ್ಯೂ ಜ್ವರದಂತಹ ಮಾರಕ ಕಾಯಿಲೆ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜರೂರಾಗಿ ಗ್ರಾಮದ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು. ಪ್ರತಿನಿತ್ಯ ಇಲ್ಲ ವಾರದಲ್ಲಿ ಮೂರು ಸಲ ಸ್ವಚ್ಛತೆ ಮಾಡಬೇಕು. ಈಗಾಗಲೇ ಗ್ರಾಮದಲ್ಲಿ ಎರಡರಿಂದ ಮೂರು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ಮುಂದೆ ಇದೇ ರೀತಿಯ ಪ್ರಕರಣಗಳು ಮುಂದುವರಿಯದಂತೆ ಗ್ರಾಮದ ಸ್ವಚ್ಛತೆಗೆ ವಿಶೇಷ ಹೊತ್ತು ನೀಡಬೇಕು ಎಂದು ಕೂನಿಕೆರೆ ಮಾರುತೇಶ, ಮಾರುತಿ, ಕುಮಾರ್, ದೇವರಾಜ್, ಭಾಸ್ಕರ, ಸ್ವಾಮಿಲಿಂಗಪ್ಪ, ಎಸ್.ಕುಮಾರ, ಪುಟ್ಟಪ್ಪ, ಮಹೇಶ್ ಸೇರಿದಂತೆ ಕೂನಿಕೆರೆ ಗ್ರಾಮಸ್ಥರು ಗ್ರಾಪಂ ಆಡಳಿತಕ್ಕೆ ಮನವಿ ಮಾಡಿ ಒತ್ತಾಯಿಸಿದ್ದಾರೆ.