ಅಡಿಕೆ ತೂಕದಲ್ಲಿ ಮೋಸ: ವರ್ತಕನಿಗೆ 20 ಲಕ್ಷ ರೂ. ದಂಡ ವಿಧಿಸಿದ ಗ್ರಾಮಸ್ಥರು

khushihost

ಚಂದ್ರವಳ್ಳಿ ನ್ಯೂಸ್, ಹೊಳೆಹೊನ್ನೂರು : ರೈತರ ಮನೆ ಬಾಗಿಲಲ್ಲಿ ಒಣಗಿದ ರಾಶಿ ಅಡಿಕೆ ಖರೀದಿ ಮಾಡುತ್ತಿದ್ದ ವರ್ತಕನೊಬ್ಬ ತೂಕದಲ್ಲಿ ಮೋಸ ಮಾಡಿದ್ದಕ್ಕೆ ಗ್ರಾಮದವರೆಲ್ಲ ಸೇರಿ ಪಂಚಾಯ್ತಿ ಮಾಡಿ ಬರೋಬ್ಬರಿ ೨೦ ಲಕ್ಷ ದಂಡ ವಿಧಿಸಿದ್ದಾರೆ.

ಸಮೀಪದ ಅರಹತೋಳಲಿನ ಅಡಿಕೆ ಬೆಳೆಗಾರರ ಮನೆಯೊಂದರಲ್ಲಿ ಅಡಿಕೆಯ ಕೈ ವ್ಯಾಪಾರಕ್ಕೆ ಬಂದಿದ ಸ್ಥಳೀಯ ವರ್ತಕ ತಟ್ಟೆಹಳ್ಳಿ ದಿಲೀಪ ಗಣಕೀಕೃತ ತಕ್ಕಡಿಯಲ್ಲಿ ತೂಕ ಮಾಡಿದ್ದಾನೆ. ಆದರೆ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ ೩ ಕೆಜಿಯಂತೆ ಅಡಿಕೆ ಹೆಚ್ಚಿಗೆ ತೂಗಿ ಮೋಸ ಮಾಡಿ ಸ್ಥಳದಲ್ಲೆ ಸಿಕ್ಕಿಬಿದ್ದಿದ್ದಾನೆ.

ಇದಕ್ಕೂ ಮುನ್ನ ಒಂದು ಕ್ವಿಂಟಾಲ್‌ಗೆ ೨೦೦ ರೂಪಾಯಿ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಿಕೆ ಖರೀದಿಸಿದ್ದಾನೆ. ಖರೀದಿಸಿದ ೪೫ ಅಡಿಕೆ ಚೀಲಗಳನ್ನು ಎರಡು ವಾಹನದಲ್ಲಿ ತುಂಬಿದ್ದನು. ಖರೀದಿಸಿದ ಅಡಿಕೆ ಮೌಲ್ಯ ಮುಂಗಡವಾಗಿ ನೀಡಿದ ಹಣಕ್ಕಿಂತ ಹೆಚ್ಚಾದ ಕಾರಣ ಒಂದಷ್ಟು ಹಣವನ್ನು ತರಲು ದಿಲೀಪ್ ಊರಿಗೆ ಮರಳಿದ್ದ ವೇಳೆ ಅನುಮಾನಗೊಂಡ ಮಾಲೀಕರು ಒಂದು ಚೀಲ ಅಡಿಕೆಯನ್ನು ತಕ್ಕಡಿ ಮೇಲೆ ಇಟ್ಟಿದ್ದಾರೆ. ಯಾವುದೊ ಒಂದು ಚೀಲದಲ್ಲಿ ವ್ಯತ್ಯಾಸವಾಗಿರಬಹುದೆಂದು ಇನ್ನೊಂದೆರಡು ಚೀಲಗಳನ್ನು ಕೆಳಗಿಳಿಸಿ ತೂಕ ಮಾಡಿದ್ದಾರೆ. ವರ್ತಕ ತುಂಬಿದ ಎಲ್ಲಾ ಚೀಲಗಳಲ್ಲೂ ೩-೪ ಕೆ.ಜಿ ವ್ಯತ್ಯಾಸ ಕಂಡುಬಂದಿದೆ.

ಕೂಡಲೇ ಎಚ್ಚೆತ ಮಾಲೀಕರು ದಿಲೀಪ್ ಹಾಗೂ ಹಮಾಲಿಗಳಿಗೆ ಅಲ್ಲಿಯೇ ಇರುವಂತೆ ಹೇಳಿ ಗ್ರಾಮಸ್ಥರಿಗೆ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಸೇರಿದ ಗ್ರಾಮಸ್ಥರು ಅರಹತೋಳಲಿನ ದೇವಸ್ಥಾನದಲ್ಲಿ ಪಂಚಾಯತಿ ನಡೆಸಿದರ. ಮೋಸ ಮಾಡಿ ಸಿಕ್ಕಿಬಿದ್ದ ದಿಲೀಪನನ್ನು ಸುಮ್ಮನೆ ಬಿಡಬಾರದೆಂದು ತೀರ್ಮಾನಿಸಿದರು. ಆದರೆ ದಿಲೀಪ್, ಪಂಚಾಯಿತಿ ವೇಳೆ ತೂಕದಲ್ಲಿ ನಾನು ಮೋಸ ಮಾಡಿಲ್ಲ ನಮ್ಮ ಹಮಾಲರು ಮೋಸ ಮಾಡಿದ್ದಾರೆಂದು ಹೇಳಿ ಪ್ರಕರಣದಿಂದನುಣುಚಿಕೊಳ್ಳಲು ಯತ್ನಿಸಿದ್ದನು. ತೂಕ ಮಾಡಿದ ಹಮಾಲರನ್ನು ಸ್ಥಳಕ್ಕೆ ಕರೆಸುವಂತೆ ಗ್ರಾಮಸ್ಥರಿ ಪಟ್ಟು ಹಿಡಿದು ಕುಳಿತರು.

ಇದರಿಂದ ಹೆದರಿದ ದಿಲೀಪ್ ಹಮಾಲರಿಗೆ ಫೋನ್ ಮಾಡಿದನು. ಹಮಾಲರು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆಂದು ಹೇಳಿದ್ದರಿಂದ ಮತ್ತಷ್ಟು ಕೋಪಗೊಂಡ ಗ್ರಾಮಸ್ಥರು ದಿಲೀಪನೊಂದಿಗೆ ಮಾತಿನ ಚಕಮಕಿ ನಡೆಸಿದರು. ಬಳಿಕ ಗ್ರಾಮ ಸಮಿತಿಯ ತಿರ್ಮಾನದಂತೆ ತೂಕದಲ್ಲಿ ಮೋಸ ಮಾಡಿದ ದಿಲೀಪನಿಗೆ ಬರೋಬ್ಬರಿ ೨೦ ಲಕ್ಷ ಹಣವನ್ನು ದಂಡ ರೂಪದಲ್ಲಿ ನೀಡುವಂತೆ ಆದೇಶಿಸಿದರು. ಜೊತೆಗೆ ಇನ್ನು ಮುಂದೆ ಗ್ರಾಮಕ್ಕೆ ಅಡಿಕೆ ವಹಿವಾಟಿಗೆ ಬಾರದಂತೆ ಎಚ್ಚರಿಕೆ ನೀಡಿದರು.

ಗ್ರಾಪಂ ಸದಸ್ಯ ಸಂಗನಾಥ್, ಎ.ಆರ್ ಮಲ್ಲಪ್ಪ, ರಾಜಶೇಖರ್, ವೀರಭದ್ರಪ್ಪ, ಜಿ.ನಂದೀಶ್, ಸುರೇಶ್, ಮಹಾದೇವಪ್ಪ ಇತರರಿದ್ದರು.

- Advertisement -  - Advertisement - 
Share This Article
error: Content is protected !!
";