ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರಸಭೆಯ ಅನುಮತಿ ಇಲ್ಲ, ಸುತ್ತಮುತ್ತಲಿನ ನಿವಾಸಿಗಳಿಗೆ ನೋಟಿಸ್ ಇಲ್ಲ, ಏಕಾಏಕಿ ಬಂದು ಜೆಸಿಬಿಯಿಂದ ಆಶ್ರಯ ಮನೆಯನ್ನ ಧ್ವಂಸ ಮಾಡಲಾಗಿದೆ, ಬಲಾಢ್ಯರ ದೌರ್ಜನ್ಯಕ್ಕೆ ಇದ್ದ ಒಂದೇ ಒಂದು ಆಸರೆಯನ್ನ ಕಳೆದುಕೊಂಡು ಬಡ ಕುಟುಂಬ ಬೀದಿಗೆ ಬಂದಿದೆ.
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ 1ನೇ ಹಂತದಲ್ಲಿರುವ 18/1ರ ಮನೆಯಲ್ಲಿ ರಾಜರಾವ್ ಕುಟುಂಬ ಕಳೆದ 15 ವರ್ಷದಿಂದ ವಾಸವಾಗಿತ್ತು. ಏಪ್ರಿಲ್ 11ರಂದು ಶುಕ್ರವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ರಾಜರಾವ್ ಕುಟುಂಬದ ಯಾವೊಬ್ಬ ಸದಸ್ಯರು ಮನೆಯಲ್ಲಿ ಇಲ್ಲದ ವೇಳೆ, ಜೆಸಿಬಿಯಿಂದ ಮನೆಯನ್ನ ಧ್ವಂಸ ಮಾಡಲಾಗಿದೆ. ಜೆಸಿಬಿ ಕಾರ್ಯಾಚರಣೆಯಿಂದ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ವಿಷಯ ತಿಳಿದು ಸ್ಥಳಕ್ಕೆ ರಾಜರಾವ್ ಕುಟುಂಬ ಬರುವುದರಲ್ಲಿ ಇಡೀ ಮನೆ ಧ್ವಂಸಗೊಂಡಿದೆ.
ಘಟನೆ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿದ ರಾಜರಾವ್, ನಮ್ಮ ಅಜ್ಜಿ ಹೆಸರಿನಲ್ಲಿ 5 ಸಾವಿರ ಹಣವನ್ನ ಡಿಡಿ ರೂಪದಲ್ಲಿ ಅಶ್ರಯ ಕಮಿಟಿ ಕಟ್ಟಲಾಗಿರುತ್ತದೆ. ಕಾರಣಾಂತರಗಳಿಂದ ನಮಗೆ ಹಕ್ಕು ಪತ್ರ ಬಂದಿರುವುದಿಲ್ಲ, ನಿನ್ನೆ ಬೆಳಗ್ಗೆ ಲಕ್ಷ್ಮೀಯವರು ಬಂದು ಜೆಸಿಬಿಯಿಂದ ನಮ್ಮ ಮನೆಯನ್ನ ಕೆಡವಿ ಹಾಕಿದ್ದಾರೆ. ಅವರ ವಿರುದ್ಧ ನಗರಸಭೆ ಮತ್ತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಪಕ್ಕದ ಮನೆಯವರಾದ ಜಯರಾವ್ ಮಾತನಾಡಿ, ಮನೆಯನ್ನ ಜೆಸಿಬಿಯಿಂದ ಕೆಡುವ ಸಮಯದಲ್ಲಿ ಅಕ್ಕಪಕ್ಕದ ಮನೆಯವರಿಗೆ ನೋಟಿಸ್ ಕೊಟ್ಟು ಕಾರ್ಯಚರಣೆ ಮಾಡಬೇಕು. ಆದರೆ ಇವರು ಏಕಾಏಕಿ ಬಂದು ಕಾರ್ಯಚರಣೆ ನಡೆಸಿದ್ದಾರೆ. ಇದರಿಂದ ನಮ್ಮ ಮನೆ ಮತ್ತು ಪಕ್ಕದಲ್ಲಿರುವ ಸುಬ್ರಮಣಿಯವರ ಮನೆ ಹಾನಿಯಾಗಿದೆ ಎಂದರು.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಕಾರ್ತಿಕೇಶ್ವರ್.ಆರ್, , ಅಶ್ರಯ ಮನೆಗಳಲ್ಲಿ ಕೆಲವು ಮನೆಗಳ ಮಾಲೀಕತ್ವದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದೇ ಗೊಂದಲುಗಳು ಸಮಸ್ಯೆಗಳಿಗೆ ಕಾರಣವಾಗಿವೆ. ಮನೆಯನ್ನ ಕೆಡವಲು ನಗರಸಭೆಯ ಅನುಮತಿ ಅಗತ್ಯವಿದ್ದು ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ಅನುಮತಿ ನಗರಸಭೆಯಿಂದ ಕೊಟ್ಟಿಲ್ಲ. ಘಟನೆ ಸಂಬಂಧ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದರು.