ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿರುವ ಪುಣ್ಯಕ್ಷೇತ್ರ ತಿಪ್ಪೇರುದ್ರಸ್ವಾಮಿ ವೇದ ಪಾಠಶಾಲೆಯಲ್ಲಿ ೯ ವರ್ಷದ ಬಾಲಕನನ್ನು ಅಮಾನುಷವಾಗಿ ಥಳಿಸಿರುವ ಸಂಸ್ಕೃತ ಶಿಕ್ಷಕ ವೀರೇಶ್ ಹಿರೇಮಠ್‌ನನ್ನು ಈಗಾಗಲೆ ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬಾಬಾಸಾಹೇಬ್ ಅಂಬೇಡ್ಕರ್ ಜನತಾ ಸೇನೆಯ ರಾಜ್ಯಾಧ್ಯಕ್ಷ ರಮೇಶ್ ಎನ್.ಮಸ್ಕಲ್‌ಮಟ್ಟಿ ಹೆಚ್ಚುವರಿ ರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ತನ್ನ ಅಜ್ಜಿಗೆ ಫೋನ್ ಮಾಡಿ ಮಾತನಾಡಿದ್ದನ್ನೆ ದೊಡ್ಡ ರಾದ್ದಾಂತವನ್ನಾಗಿ ಮಾಡಿರುವ ಶಿಕ್ಷಕ ವೀರೇಶ್ ಹಿರೇಮಠ್ ಬಾಲಕನನ್ನು ಮನಸೋಇಚ್ಚೆ ಥಳಿಸಿ ಕ್ರೌರ್ಯ ಮೆರೆದಿರುವುದನ್ನು ಯಾರು ಸಹಿಸುವುದಿಲ್ಲ. ಹಾಗಾಗಿ ಕಾನೂನು ಅಡಿ ಶಿಕ್ಷೆಯಾಗಬೇಕು.
ಇತ್ತೀಚೆಗೆ ಚಿತ್ರದುರ್ಗದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ರಮೇಶ್ ಎನ್.ಮಸ್ಕಲ್‌ಮಟ್ಟಿ ವಿನಂತಿಸಿದ್ದಾರೆ. ಜಿಲ್ಲಾಧ್ಯಕ್ಷ ರಘು ಆರ್. ತಿಪ್ಪೇಸ್ವಾಮಿ ಹೆಚ್. ಇವರುಗಳು ಈ ಸಂದರ್ಭದಲ್ಲಿದ್ದರು.

