ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜ.೧೩ ರಿಂದ ೧೯ ರವರೆಗೆ ನಡೆದ ಪ್ರಥಮ ವಿಶ್ವ ಖೋ-ಖೋ ಪಂದ್ಯಾವಳಿಗಳ ಚಿನ್ನದ ಪದಕ ವಿಜೇತರಾದ ರಾಜ್ಯದ ಚೈತ್ರ, ಗೌತಮ್ ಇವರುಗಳಿಗೆ ಹೆಚ್ಚಿನ ಧನ ಸಹಾಯದ ಜೊತೆಗೆ ಸರ್ಕಾರಿ ನೌಕರಿ ನೀಡುವಂತೆ ಜಿಲ್ಲಾ ಖೋ-ಖೋ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು. ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜುರವರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಿ ರಾಜ್ಯದ ಕ್ರೀಡಾ ನೀತಿಯನ್ನು ಬದಲಾಯಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ವಿಶ್ವಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಪಕ್ಕದ ರಾಜ್ಯಗಳಲ್ಲಿ ನೀಡುವಂತೆ ಎ.ಗ್ರೇಡ್ ಮತ್ತು ಬಿ.ಗ್ರೇಡ್ ಹುದ್ದೆಯನ್ನು ಕೊಡಬೇಕು. ಕನಿಷ್ಟ ಐವತ್ತು ಲಕ್ಷ ರೂ.ಗಳ ಬಹುಮಾನದ ಮೊತ್ತವನ್ನು ಪ್ರತಿ ಕ್ರೀಡಾಪಟುವಿಗೂ ಘೋಷಿಸಬೇಕು. ಅಧಿಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ಅನುದಾನ ಬಿಡುಗಡೆಗೊಳಿಸಬೇಕು. ರಾಜ್ಯ ಒಲಂಪಿಕ್ ಸಂಸ್ಥೆ ಮೂಲಕ ಅನುದಾನ ಕೇಳುವ ಪದ್ದತಿ ರದ್ದಾಗಬೇಕು. ರಾಜ್ಯದ ಎಲ್ಲಾ ಕ್ರೀಡಾ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.