ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಂದಿ ತ್ಯಾಜ್ಯದ ವಾಸನೆಯಿಂದ ಕಂಗೆಟ್ಟಿದ್ದ ಬೈರಸಂದ್ರ ಗ್ರಾಮದ ಜನತೆಗೆ ಕೊನೆಗೂ ದುರ್ವಾಸನೆಯಿಂದ ಮುಕ್ತಿ ಸಿಗುವ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರು ಗ್ರಾಮಾಂತರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ಬೈರಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಚತೆ ಕಾಪಾಡದ ಹಂದಿಸಾಕಣೆ ಮಾಡುತ್ತಿರುವ ಹಂದಿ ಮಾಲಿಕರನ್ನ ತರಾಟೆಗೆ ತೆಗೆದುಕೊಂಡರು.
ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ ಮಾನ್ಯ ದಂಡಾದಿಕಾರಿಗಳಾದ ಮಲ್ಲಪ್ಪ ಕುರುಗೋಳ ಹಾಗೂ ತಾಲ್ಲೂಕು ಮುಖ್ಯ ಕಾರ್ಯ ನಿರ್ವಾಹಕರಾದ ಮಂಜುನಾಥ್ ರವರು ಗ್ರಾಮಸ್ಥರು ದೂರು ನೀಡಿದ ಹಿನ್ನಲೆ ಹಂದಿಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ತದನಂತರ ಹಂದಿ ಸಾಕಣೆ ಮಾಲಿಕರು ಹೈಕೋರ್ಟಿನ ಪ್ರತಿಯನ್ನ ದಂಡಾದಿಕಾರಿಗಳ ಗಮನಕ್ಕೆ ತಂದ ಹಿನ್ನಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರಿಪೋರ್ಟ್ ಕೊಟ್ಟ ನಂತರ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲಾಗಿತ್ತು. ಕೋರ್ಟ್ ಆದೇಶದಂತೆ ಸ್ಥಳ ಪರಿಶೀಲನೆ ಮಾಡುವಂತೆ ಮಾನ್ಯ ದಂಡಾಧಿಕಾರಿಗಳು ಸಹ ಮಾಲಿನ್ಯ ನಿಯಂತ್ರಣ ಗ್ರಮನಕ್ಕೆ ತಂದಿದ್ದರು.
ಮಾನ್ಯ ಹೈಕೋರ್ಟಿನ ಆದೇಶದಂತೆ ಬೈರಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಶಿವಕುಮಾರ್ ಮತ್ತು ಅವರ ತಂಡ ಹಂದಿಗೂಡಿನಿಂದ ಅರ್ಕಾವತಿ ಕೆರೆ ವ್ಯಾಪ್ತಿಯ ದೊಡ್ಡತುಮಕೂರು ಕೆರೆಗೆ ಹಂದಿ ತ್ಯಾಜ್ಯ ಬಿಡುತ್ತಿರುವುದನ್ನ ಕಂಡು ಬೇಸರ ವ್ಯಕ್ತಪಡಿಸಿದರು.
ತಾವು ಹೈಕೋರ್ಟಿಗೆ ಪ್ರಸ್ತುತ ವಿಚಾರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು. ಹಾಗೂ ಸ್ಥಳೀಯ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ತಿಳಿಹೇಳಿ ಜನರ ಜೀವ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುವ ಇಂತಹವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರು . ಏನಾದರಾಗಲಿ ಹಂದಿ ವಾಸನೆಯಿಂದ ಮುಕ್ತಿ ಸಿಗುವ ಸಮಯ ಬರಲಿದೆ ಎಂದು ಬೈರಸಂದ್ರ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

