ನಗರದ ವಿವಿಧ ಭಾಗಗಳಿಗೆ ಉಪಲೋಕಾಯುಕ್ತರ ಭೇಟಿ-ಪರಿಶೀಲನೆ

News Desk
- Advertisement -  - Advertisement - 

ನಗರದ ವಿವಿಧ ಭಾಗಗಳಿಗೆ ಉಪಲೋಕಾಯುಕ್ತರ ಭೇಟಿ-ಪರಿಶೀಲನೆ
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಮಂಗಳವಾರ ರಾತ್ರಿ ೭ ಗಂಟೆಗೆ ನಗರಕ್ಕೆ ಆಗಮಿಸಿ ರಾತ್ರಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ನಿರ್ದೇಶನ ನೀಡಿ ವಿದ್ಯಾರ್ಥಿಗಳಲ್ಲಿ  ಜಾಗೃತಿ ಮೂಡಿಸಿದರು.

ನಗರದ ಎರಡು ಮಹಿಳಾ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆಗಳ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿನಿಯರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಜೊತೆಗೆ ಸ್ವಚ್ಛತೆ ಕಾಪಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ವಿದ್ಯಾರ್ಥಿಗಳು ಅಂಬೇಡ್ಕರ್‌ರವರು ರಚಿಸಿರುವ ಗ್ರಂಥಗಳನ್ನು ಹಾಗೂ ಭಾರತ ದೇಶದ ಸಂವಿಧಾನವನ್ನು ಓದಬೇಕು ವಿದ್ಯಾರ್ಥಿ ನಿಲಯವನ್ನು ನಮ್ಮ ಮನೆಯಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮದರ್ ಥೆರೆಸಾ ಫ್ಲಾರೆನ್ಸ್ ನೈಟಿಂಗೆಲ್, ಸ್ವಾಮಿ ವಿವೇಕಾನಂದರ ಬಗ್ಗೆ ಕೇಳಿದ್ದಿರಲ್ಲವೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ತಿಳಿಸಿದರು. ನಂತರ ಆಹಾರ ಶೇಖರಣೆ ಉಗ್ರಾಣಕ್ಕೆ ಭೇಟಿ ನೀಡಿ ಅಕ್ಕಿ ಹಾಗೂ ತರಕಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಹೆಚ್ಚು ದಿನ ಇಟ್ಟರೆ ಕೆಡುವ ತರಕಾರಿಗಳನ್ನು ಎರಡು ದಿನದಲ್ಲಿ ಬಳಸುವಂತೆ ತಿಳಿಸಿದರು.

- Advertisement - 

ವಿದ್ಯಾರ್ಥಿನಿಯರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಸತಿ ನಿಲಯಗಳಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕೆಂದು ಹೇಳಿದರು.

ಬುಧವಾರ ಬೆಳಿಗ್ಗೆ ಇಂದಾವರದ ನಗರಸಭೆಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು ಇದರಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ಗ್ರಾಮದ ಕಾಲುವೆಯಲ್ಲಿ ಹರಿಯುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಜೊತೆಗೆ ಸೊಳ್ಳೆ, ನೊಣಗಳು  ಹೆಚ್ಚಾಗಿರುವುದರಿಂದ  ರೋಗರುಜಿನಗಳಿಗೆ ಆಹ್ವಾನ ನೀಡಿದಂತ್ತಾಗುತ್ತದೆ ಎಂದು ಇಲ್ಲಿನ ಸಾರ್ವಜನಿಕರು ದೂರು ನೀಡಿದ್ದಾರೆಂದು ತಿಳಿಸಿದರು.

- Advertisement - 

ಕಸ ವಿಲೇವಾರಿ ಘಟಕದಲ್ಲಿ ಬಹಳ ದೊಡ್ಡ ಸಮಸ್ಯೆ ಇದೆ, ಡ್ರೈ ವೇಸ್ಟ್ ಆಗಿ ಹೊರಬರುವ ಕಸವನ್ನು ಸ್ಥಳಾಂತರ ಮಾಡದೆ ಸುಮಾರು ೨೫ ವರ್ಷಗಳಿಂದ ವಿಲೇವಾರಿ ಮಾಡದೇ, ಇಡೀ ಗುಡ್ಡ ಕಸವಾಗಿದೆ. ಇದರಿಂದ ಬರುವ ನೀರು ಕಲುಷಿತಗೊಂಡು ಕೃಷಿಗೆ, ತೋಟಗಾರಿಕೆಗೆ ಹಾಗೂ ದನಕರುಗಳಿಗೆ, ನಾಗರೀಕರಿಗೆ ತೊಂದರೆಯಾಗುತ್ತಿದೆ ಪ್ರತಿ ತಿಂಗಳು ನಡೆಯುವ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಣ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ ಈ ಕಾರ್ಯ ಅಂತಿಮಗೊಳ್ಳಲು ಸುಮಾರು ವರ್ಷಾನುಗಟ್ಟೆಲೆಯಾಗುತ್ತದೆ. ಈ ಸಂಬಂಧ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಂಜಿನಿಯರ್‌ನ್ನು ಆಹ್ವಾನಿಸಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಯಾವ ರೀತಿ ತೀರ್ಮಾನ ಮಾಡಬಹುದು ಎಂಬುದರ ಬಗ್ಗೆ ಪ್ರಸ್ತಾವನೆ ಕಳಿಸುವುದಾಗಿ ತಿಳಿಸಿದರು.

ಒಣ ಕಸ ಸ್ಥಳಾಂತರ ಸಮಸ್ಯೆಯಿದ್ದು, ಬೇರೆಡೆಗೆ ವಿಲೇವಾರಿ ಮಾಡಿದರೆ ಅಲ್ಲಿಯೂ ಇದೇ ಸಮಸ್ಯೆ ಸೃಷ್ಠಿಯಾಗುವುದು ಎಂಬುದನ್ನು ಮನಗಂಡು ಪರಿಶೀಲನೆ ನಡೆಸಿದ ಸ್ಥಳದಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನಿರ್ದೇಶನ ನೀಡಿ ಸಲಹೆ ನೀಡಲಾಗಿದೆ ಎಂದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ಬದಿ ಕಸ ವಿಲೇವಾರಿಗೆ ಕ್ರಮವಹಿಸಲಾಗಿದೆ. ಅದೇ ಮಾದರಿಯಲ್ಲಿ ಚಿಕ್ಕಮಗಳೂರಿನಲ್ಲಿಯೂ ನಿರ್ಮಾಣ ಮಾಡಿ ಕೊಳಚೆ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನು ಹೊರತುಪಡಿಸಿ, ತೋಟಗಾರಿಕೆಗೆ, ಕೃಷಿಗೆ ಬಳಸಿಕೊಳ್ಳುವಂತೆ ಸೂಚಿಸಿದರು.

ನಗರದ ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ಅಲ್ಲಿನ ಶೌಚಾಲಯ ಅಸ್ವಚ್ಚತೆ, ಕ್ಯಾಂಟೀನ್ ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ, ಪ್ರತಿದಿನ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿದ್ದೇನೆ, ಈ ಕುರಿತು ಒಂದು ಕೇಸು ದಾಖಲಿಸಿರುವುದಾಗಿ ತಿಳಿಸಿದರು.

ಸುಮಾರು ೧೯ ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಅಲ್ಲಿಯವರೆಗೆ ಒಂದು ಬೋರ್‌ವೆಲ್ ತೆಗೆಸಿ ನೀರಿನ ಸಮಸ್ಯೆ ಪರಿಹರಿಸಬೇಕು, ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಜಲ್ಲಿಯನ್ನು ಹಾಕಿ ಎತ್ತರ ಮಾಡಿ ನೀರು ಒಂದೆಡೆ ಕಾಲುವೆಗೆ ಹರಿಯುವಂತೆ ಕ್ರಮವಹಿಸುವಂತೆ ಸೂಚಿಸಿದರು.

ಈಗ ಪ್ರಕರಣ ದಾಖಲಾಗಿರುವ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಇತ್ಯರ್ಥಪಡಿಸಿದ ವರದಿ ನೀಡಿದರೆ ಪ್ರಕರಣ ವಾಪಾಸ್ ಪಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಎಂ ಪಾಟೀಲ್, ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ್ ನಲ್ಪಾಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ, ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

Share This Article
error: Content is protected !!
";