ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪೂರ್ವ ಮುಂಗಾರು ಹಂಗಾಮಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಬಯಲು ಸೀಮೆಯ ಬರ ಪೀಡಿತ ಜಿಲ್ಲೆಗಳ ಕೆರೆ, ಕಟ್ಟೆ ಜಲಾಶಯಗಳಿಗೆ ನೀರು ಹರಿಸಲು ಭದ್ರಾದಿಂದ ನೀರನ್ನೆತ್ತಲು ಅನುಮತಿ ನೀಡಬೇಕಾದ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದ್ದು ಜನಪ್ರತಿನಿಧಿಗಳು ಕೂಡಾ ನಮಗೇಕೆ ಎನ್ನುವ ಧೋರಣೆ ತಾಳಿದಂತಿದೆ.
ಪ್ರತಿ ವರ್ಷ ಮುಂಗಾರು ಹಂಗಾಮಿನ ಜೂನ್-15 ರಿಂದ ಮೂರು ತಿಂಗಳ ಕಾಲ ವಾಣಿ ವಿಲಾಸ ಸಾಗರ ಸೇರಿದಂತೆ ಮತ್ತಿತರ ಯೋಜನೆಗಳಿಗೆ ನೀರು ಹರಿಸುವುದು ಕಡ್ಡಾಯವಾಗಿದೆ. ಜೂನ್ ತಿಂಗಳು ಕಳೆದು ಜುಲೈ ತಿಂಗಳಲ್ಲಿ ವಾರ ಕಳೆದರೂ ಸರ್ಕಾರ ಇನ್ನೂ ಭದ್ರಾದಿಂದ ನೀರನ್ನೆತ್ತಲು ಯಾವುದೇ ಅನುಮತಿ ನೀಡದಿರುವುದು ವಿಪರ್ಯಾಸ.
ಮುಖ್ಯ ಇಂಜಿನಿಯರ್, ವಿಜನಿನಿ, ಭಮೇಯೋ, ವಲಯ ಚಿತ್ರದುರ್ಗ ಇವರು ಕಳೆದ ಮೇ-13 ರಂದೇ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ನೀರನ್ನೆತ್ತಿ ಹರಿಸಲು ಅನುಮತಿ ಕೋರಿದ್ದರು. ವ್ಯವಸ್ಥಾಪಕ ನಿರ್ದೇಶಕರು ಕೂಡಾ ವಿಳಂಬ ಮಾಡದೆ ಮೇ-15 ರಂದೇ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೋರಿಕೊಂಡಿದ್ದರು.
ಮಲೆನಾಡು ಭಾಗದ ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಒಂದು ವಾರ ಒಪ್ಪತ್ತಿಗೆ ಭದ್ರಾ ಡ್ಯಾಂ ತುಂಬುವ ಎಲ್ಲ ಸಾಧ್ಯತೆ ಇದೆ. ಭದ್ರಾವತಿ ತಾಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 40 ವರ್ಷಗಳ ನಂತರ ಈ ಬಾರಿ ಜೂನ್ ಅಂತ್ಯಕ್ಕೆ ಅತಿಹೆಚ್ಚಿನ ನೀರಿನ ಸಂಗ್ರಹವಾಗಿದೆ.
ಸದ್ಯ (ಜುಲೈ6) ಜಲಾಶಯದಲ್ಲಿ ನೀರಿನ ಮಟ್ಟ 169.6 ಅಡಿ ಇದೆ. 18391 ಒಳ ಹರಿವು, 5197 ಹೊರ ಹರಿವು ಇದ್ದು ಮಳೆ ಇನ್ನಷ್ಟು ಬಿರುಸುಗೊಂಡಿರುವುದರಿಂದ ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ.
ಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ (2024ರ ಜುಲೈ 6) 130.70 ಅಡಿ ನೀರು ಸಂಗ್ರಹವಿತ್ತು. 7736 ಕ್ಯುಸೆಕ್ ಒಳಹರಿವು ಇತ್ತು. ಪ್ರಸಕ್ತ ಸಾಲಿನಲ್ಲಿ ಜಲಾಶಯ ಭರ್ತಿಯಾಗಲು 16 ಅಡಿಯಷ್ಟೇ ಬಾಕಿ ಇದೆ. ಮಳೆಗಾಲದ ಆರಂಭದಲ್ಲಿಯೇ ಜಲಾಶಯ ಭರ್ತಿ ಆಗುತ್ತಿರುವ ಕಾರಣ ಸದ್ಯ 5197 ಕ್ಯುಸೆಕ್ ನೀರನ್ನು ಪವರ್ ಹೌಸ್ ಮೂಲಕ ನದಿಗೆ ಹರಿಸಲಾಗುತ್ತಿದ್ದು ಈ ನೀರು ಸಮುದ್ರ ಸೇರುತ್ತದೆ.
ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿದೆ. ಈಗಿನ ಮಳೆ, ಒಳಹರಿವು ಗಮನಿಸಿದರೆ ಜಲಾಶಯ ಬೇಗನೇ ಭರ್ತಿ ಆಗುವ ಸಾಧ್ಯತೆ ಇದೆ. ಈ ರೀತಿ ನದಿಗೆ ಹರಿಸುವ ನೀರನ್ನು ಚಿತ್ರದುರ್ಗ ಕಾಲುವೆ ಮೂಲಕ ಕಡೂರು, ತರೀಕೆರೆ, ವಾಣಿ ವಿಲಾಸ ಸಾಗರದ ಜಲಾಶಯಕ್ಕೆ ಹರಿಸಲಿ ಎನ್ನುವುದು ಈ ಭಾಗದ ರೈತರು ಕೋರಿಕೆಯಾಗಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಡ್ಯಾಂಗಳು ಭರ್ತಿಯಾಗಿವೆ. ಭದ್ರಾ ಡ್ಯಾಂ ಕೂಡಾ ಹತ್ತಾರು ದಿನದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.
ಆದರೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆಯಿಂದಾಗಿ ವಿವಿ ಸಾಗರ ಜಲಾಶಯಕ್ಕೆ ಹನಿ ನೀರು ಬಂದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿನಲ್ಲಿನ ತೋಟಗಾರಿಕೆ ಬೆಳೆಗಳು ಒಣಗುತ್ತಿರುವುದರಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಳೆದ ಜೂನ್-27ರಿಂದ ಪ್ರತಿನಿತ್ಯ ಸುಮಾರು 580 ಕ್ಯುಸೆಕ್ ನೀರನ್ನು ಎಡ ಮತ್ತು ಬಲ ಕಾಲುವೆಗಳಲ್ಲಿ ಹರಿಸಲಾಗುತ್ತಿದೆ. ಇಂದಿನ ನೀರಿನ ಮಟ್ಟ 125.20 ಅಡಿ ಇದೆ. ಚಿತ್ರದುರ್ಗ ಕಾಲುವೆ ಮೂಲಕ ರಾಜ್ಯ ಸರ್ಕಾರ ತುರ್ತು ನೀರು ಹರಿಸಿದರೆ ವಿವಿ ಸಾಗರ, ಕಡೂರು, ಹೊಸದುರ್ಗ ಕೆರೆಗಳಿಗೆ ಶೇ.50ರಷ್ಟು ನೀರು ಹರಿಸಲು ಅನುಕೂಲವಾಗಲಿದೆ.
ಏನಿದು ಯೋಜನೆ-
ಭದ್ರಾ ಮೇಲ್ದಂಡೆ ಯೋಜನೆಯು ತುಂಗಾ ನದಿಯಿಂದ 17.40 ಟಿಎಂಸಿ ಮತ್ತು ಭದ್ರಾದಿಂದ 12.50 ಟಿಎಂಸಿ ಸೇರಿಸಿ ಒಟ್ಟು 29.90 ಟಿಎಂಸಿ ನೀರನ್ನ ಬರಪೀಡಿತ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಒಟ್ಟು 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ಇದೇ ಜಿಲ್ಲೆಗಳಡಿ ಬರುವ 367 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ 50%ರಷ್ಟು ನೀರು ತುಂಬಿಸಲು ಯೋಚಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು 2007-08ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದು ಭದ್ರಾ ಜಲಾಶಯದಿಂದ ವೈ-ಜಂಕ್ಷನ್ ವರೆಗೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆಯ ಕಾಮಗಾರಿಗಳು ಪೂರ್ಣಗೊಂಡಿವೆ. 2019ನೇ ಸಾಲಿನಿಂದ ಮುಂಗಾರು ಹಂಗಾಮಿನಲ್ಲಿ ಹೆಬ್ಬೂರು ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ಪ್ರತಿ ವರ್ಷ ನೀರು ಹರಿಸಲಾಗುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಭಾಗವಾದ ತರೀಕೆರೆ ಏತ ನೀರಾವರಿ ಯೋಜನೆಯು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಒಟ್ಟು 20,150 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ನೀರೊದಗಿಸುವುದು ಮತ್ತು ಸದರಿ ತಾಲ್ಲೂಕುಗಳ ಒಟ್ಟು 79 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸುವ ಉದ್ದೇಶ ಹೊಂದಿದೆ.
ಸದರಿ ಯೋಜನೆಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ ಯೋಜನೆಯ ಅಡಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಸುಮಾರು 12,000 ಹೆಕ್ಟೇರ್ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ತರಲಾಗಿದ್ದು, 2025 ನೇ ಸಾಲಿನ ಅಂತ್ಯಕ್ಕೆ ಉಳಿದ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ನೀರನ್ನು ಒದಗಿಸಲು ಹಾಗೂ ಇದರಡಿ ಬರುವ 79 ಕೆರೆಗಳನ್ನು ಅವುಗಳ ಸಾಮರ್ಥ್ಯದ 50% ರಷ್ಟು ತುಂಬಿಸುವ ಗುರಿ ಹೊಂದಲಾಗಿದೆ.
ಕಡೂರು ಕೆರೆ ತುಂಬಿಸುವ ಯೋಜನೆಯ ನೀರಿನ ಮೂಲವು ಭದ್ರಾ ಜಲಾಶಯವಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಕಿ.ಮೀ.26 ರಿಂದ ನೀರನ್ನೆತ್ತಲು ಅವಕಾಶ ಮಾಡಿಕೊಳ್ಳಲಾಗಿದೆ. ಕಡೂರು ಕೆರೆ ತುಂಬುವ ಯೋಜನೆಯ ಹಂತ-1 ರ ಕೆರೆಗಳಿಗೆ ನೀರೊದಗಿಸಲು ಅನುವಾಗುವಂತೆ ಎಲ್ಲಾ ಮೂಲ ಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2025ನೇ ಸಾಲಿನ ಮುಂಗಾರು ಹಂಗಾಮು ಮುಗಿಯುವ ಪೂರ್ವದಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ ಮುಖಾಂತರ ಪ್ರಾಯೋಗಿಕವಾಗಿ ನೀರನ್ನು ಹರಿಸಿ, ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕಡೂರು ಹಾಗೂ ಹೊಸದುರ್ಗ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಕೆರೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತರೀಕೆರೆ ಏತ ನೀರಾವರಿ ಯೋಜನೆ ಅಡಿ ಬರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಹಾಗೂ
ಇದರಡಿ ಬರುವ ನಿಗದಿತ 79 ಸಂಖ್ಯೆ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟನ್ನು ತುಂಬಿಸಲು ಅನುವಾಗುವಂತೆ ಸುಮಾರು 1.47 ಟಿಎಂಸಿ, ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರನ್ನು ಹರಿಸಲು ಅನುವಾಗುವಂತೆ ಸುಮಾರು 2 ಟಿಎಂಸಿ, ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕಡೂರು ಹಾಗೂ ಹೊಸದುರ್ಗ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಕೆರೆಗಳಿಗೆ ನೀರು ಹರಿಸಲು 0.50 ಟಿ.ಎಂ.ಸಿ ಹಾಗೂ ಕಡೂರು ಕೆರೆ ತುಂಬುವ ಯೋಜನೆಯ ಹಂತ-1ರಡಿ ಬರುವ
ಕೆರೆಗಳಿಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಲು ಸುಮಾರು 0.24 ಟಿಎಂಸಿ ಸೇರಿ ಒಟ್ಟಾರೆ ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನಲ್ಲಿ 4.21 ಟಿಎಂಸಿ ನೀರನ್ನೆತ್ತಲು ಸರ್ಕಾರದ ಅನುಮತಿಗಾಗಿ ಕಾದು ಕೂತಿದೆ. ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಿದಂತೆ ಭದ್ರಾ ಮೇಲ್ದಂಡೆ ಯೋಜನೆಗೂ ಆದ್ಯತೆ ನೀಡಬೇಕು. ಪೂರ್ವ ಮುಂಗಾರು ಹಂಗಾಮಿನಲ್ಲಿ ಭದ್ರಾದಿಂದ ನೀರನ್ನೆತ್ತಲು ಅನುಮತಿಸಿ ಅನುಮೋದನೆ ನೀಡಬೇಕು ಎನ್ನುವುದು ಈ ಭಾಗದ ರೈತರ ಕೋರಿಕೆಯಾಗಿದೆ.