ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ರಾಜ್ಯ ನಾಯಕರ ಹಂತದಲ್ಲಿ ನಡೆಯುವ ವಿಷಯವಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ನಿರ್ಧಾರವಾಗಿರುತ್ತದೆ ಎಂದು ತಿಳಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಂಪುಟ ಪುನಾರಚನೆ ಕುರಿತಾದ ಸುದ್ದಿಗಳನ್ನು ಯಾರು ಹರಡುತ್ತಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ವಾಲ್ಮೀಕಿ ಸಮುದಾಯದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿಕೆ ನೀಡಿದ್ದರೂ, ಅದರ ಸಮಯವನ್ನು ನಿರ್ದಿಷ್ಟಪಡಿಸಿಲ್ಲ.
ಹಾಗೆಂದು ಸಂಪುಟ ಪುನಾರಚನೆಗೆ ಹೈಕಮಾಂಡ್ ನಿರ್ಧಾರ ಕೈಗೊಂಡರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಪರಮೇಶ್ವರ್ ಮಾರ್ಮಿಕವಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಔತಣಕೂಟಕ್ಕೂ ಸಂಪುಟ ಪುನಾರಚನೆ ವಿಚಾರಕ್ಕೂ ಸಂಬಂಧವಿಲ್ಲ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

