ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುದ್ಧ……,
ಯುದ್ಧವೆಂದರೆ, ಎದುರಿಗಿರುವವರನ್ನು ನಮ್ಮ ಶತ್ರುಗಳೆಂದು ಭಾವಿಸಿ ಹೊಡೆಯುವುದು, ಗಾಯಗೊಳಿಸುವುದು, ಶರಣಾಗಿಸುವುದು, ಕೊಲ್ಲುವುದು, ಆ ಜಾಗವನ್ನು ಆಕ್ರಮಿಸುವುದು, ವಶಪಡಿಸಿಕೊಳ್ಳುವುದು…..
ಯುದ್ಧವೆಂದರೆ,
ನಮ್ಮ ಪ್ರತಿಸ್ಪರ್ಧಿಯೂ ಸಹ ನಮ್ಮನ್ನು ಶತ್ರುವೆಂದು ಪರಿಗಣಿಸಿ ನಮ್ಮನ್ನೂ ಅದೇ ರೀತಿಯಲ್ಲಿ ಕೊಲ್ಲುವುದು ಮತ್ತು ವಶಪಡಿಸಿಕೊಳ್ಳುವುದು…
ಯುದ್ಧವೆಂದರೆ,
ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು, ವಿರೋಧಿಯನ್ನು ನಾಶ ಮಾಡುವುದು, ಹಾಗೆಯೇ ಶತ್ರುವಿಗೂ ಕೂಡ….
ಯುದ್ಧವೆಂದರೆ,
ಎರಡೂ ಕಡೆಯ ಎಷ್ಟೋ
ತಂದೆ ತಾಯಂದಿರು ತಮ್ಮ ಕರುಳಕುಡಿಯನ್ನು ಕಳೆದುಕೊಳ್ಳುವುದು,
ಎಷ್ಟೋ ಮಕ್ಕಳು ಅನಾಥರಾಗುವುದು,
ಎಷ್ಟೋ ಜನ ಗಾಯಾಳುವಾಗುವುದು, ಎಷ್ಟೋ ಜನರ ಬದುಕು ಸರ್ವನಾಶವಾಗುವುದು…..
ಯುದ್ಧವೆಂದರೆ,
ಈಗಿನ ಸಾಮಾನ್ಯ ಬದುಕು ದುಸ್ತರವಾಗುವುದು,
ಬೆಲೆ ಏರಿಕೆಯಾಗುವುದು, ಕಾಳಸಂತೆಕೋರರಿಗೆ ದಂಧೆಯಾಗುವುದು,
ಕಳ್ಳಕಾಕರು, ವಂಚಕರು, ದರೋಡೆಕೋರರಿಗೆ ಹೆಚ್ಚಿನ ಅವಕಾಶವಾಗುವುದು, ಭ್ರಷ್ಟರಿಗೆ ಸುವರ್ಣಾವಕಾಶ ಒದಗಿಸುವುದು, ಕಾನೂನು ಸುವ್ಯವಸ್ಥೆ, ಹದಗೆಡುವುದು, ಈಗಿರುವ ನೆಮ್ಮದಿ ಹಾಳಾಗುವುದು,
ಸದಾ ಸಾವಿನ ಆತಂಕದಲ್ಲಿಯೇ ಬದುಕುವುದು,
ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವುದು, ನಮ್ಮ ಆರೋಗ್ಯಕ್ಕೆ ಸಮಸ್ಯೆಯಾಗುವುದು, ಊಟ ತಿಂಡಿ ನಿದ್ದೆ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗುವುದು ಇತ್ಯಾದಿ ಇತ್ಯಾದಿ…….
ಯುದ್ಧದ ಗೆಲುವೆಂದರೆ, ಸ್ಮಶಾನ ವಿಜಯೋತ್ಸವ, ಸಾವಿನ ರಣೋತ್ಸವ,
ನೋವಿನ ನಲಿವೋತ್ಸವ, ಬದುಕಿನ ವೈರಾಗ್ಯೋತ್ಸವ, ಗೆದ್ದರೂ ಸೋತರು ಅಂತಹ ವ್ಯತ್ಯಾಸವೇನಿಲ್ಲ……..
ಯುದ್ಧವೆಂದರೆ ಕೆಲವೇ ಕೆಲವು ಜನರಿಗೆ ದೊಡ್ಡ ಲಾಭ, ಉಳಿದೆಲ್ಲ ಸಾಮಾನ್ಯ ಜನರಿಗೆ ಅತಿ ನಷ್ಟ……
ಈಗಿನ ಭಾರತ – ಪಾಕಿಸ್ತಾನ ಯುದ್ಧವೆಂದರೆ,
ಭಾರತದ 26 ಜನರನ್ನು ಕೊಂದ ಆ ದುಷ್ಟ ಆರು ಜನರಿಗಾಗಿ ಸಾವಿರ ಸಾವಿರ ಜನರನ್ನು ಬಲಿ ಕೊಡುವುದು ಮತ್ತು ಬಲಿ ಪಡೆಯುವುದು…..
ಹಾಗೆಂದು ಯುದ್ಧ ಮಾಡಬಾರದೇ, ಶರಣಾಗಬೇಕೇ, ನಾವು ಹೇಡಿಗಳೇ, ಆ ರಾಕ್ಷಸ ಭಯೋತ್ಪಾದಕರನ್ನು ಇನ್ನೆಷ್ಟು ದಿನ ಸಹಿಸುವುದು, ನಮ್ಮ ರಕ್ಷಣೆ ಮಾಡಿಕೊಳ್ಳಬಾರದೇ, ಭಯೋತ್ಪಾದಕರನ್ನು ಸರ್ವನಾಶ ಮಾಡಬಾರದೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಏಳುತ್ತದೆ……
ಖಂಡಿತ ಭಯೋತ್ಪಾದಕರನ್ನು ಸರ್ವನಾಶ ಮಾಡಲೇಬೇಕು, ನಮ್ಮ ರಕ್ಷಣೆ ಮಾಡಿಕೊಳ್ಳಲೇಬೇಕು.
ಆದರೆ ಅದಕ್ಕಾಗಿ ಇರುವ ಎಲ್ಲ ಪರ್ಯಾಯ ಸಾಧ್ಯತೆಗಳನ್ನು ಪರಿಶೀಲಿಸಬೇಕು…..
ಯುದ್ಧ
ಅಂತಿಮ ಅಸ್ತ್ರವಾಗಬೇಕು,
ಯುದ್ಧ ಅನಿವಾರ್ಯವಾಗಬೇಕು, ಯುದ್ಧ
ಈಗಿನ ನಮ್ಮ ಪರಿಸ್ಥಿತಿಗಿಂತ ಮುಂದಿನ ನಮ್ಮ ಪರಿಸ್ಥಿತಿ ಉತ್ತಮವಾಗುತ್ತದೆ ಎಂದು ಖಾತ್ರಿ ಆಗಬೇಕು,
ಯುದ್ದ
ಒಬ್ಬ ಶತ್ರು ಮತ್ತಷ್ಟು ಶತ್ರುಗಳಿಗೆ ದಾರಿ ಮಾಡಿ ಕೊಡುವುದಿಲ್ಲ ಎನ್ನುವುದು ಸ್ಪಷ್ಟವಾಗಬೇಕು, ಯುದ್ಧ
ನಮ್ಮ ಜೀವನಮಟ್ಟ ಸುಧಾರಿಸುತ್ತದೆ ಎಂಬ ಭರವಸೆ ಮೂಡಿಸಬೇಕು………
ತುಂಬಾ ಆಶ್ಚರ್ಯವಾಗುತ್ತಿದೆ ಮತ್ತು ಕಾಡುತ್ತಿದೆ ಈ ವಿಷಯ………..
ಯೋಚಿಸಿ ನೋಡಿ…….
ಯಾರು ದೈಹಿಕವಾಗಿ ಸ್ವಲ್ಪ ಬಲಿಷ್ಠರಾಗಿದ್ದಾರೋ
ಯಾರು ಬಡ ಮತ್ತು ಕೆಳ ಮಧ್ಯಮ ವರ್ಗದಲ್ಲಿದ್ದಾರೋ,
ಯಾರು ಅಂಬೇಡ್ಕರ್ ವಾದವನ್ನು ಬೆಂಬಲಿಸುತ್ತಾರೋ,
ಯಾರು ಬಸವಣ್ಣನವರ ಅನುಯಾಯಿಗಳಾಗಿದ್ದಾರೋ,
ಯಾರು ಒಂದಷ್ಟು ಧೈರ್ಯವಾಗಿ ಚಳವಳಿ ಹೋರಾಟ ಮಾಡುತ್ತಾರೋ,
ಯಾರ ಮಕ್ಕಳು ನಮ್ಮ ಸೈನ್ಯದಲ್ಲಿ ಶೇಕಡಾ ೮೦% ರಷ್ಟು ಸೇವೆ ಸಲ್ಲಿಸುತ್ತಿದ್ದಾರೋ,
ಯಾರು ಈ ನೆಲದಲ್ಲಿ ಸಮಾನತೆ ಮತ್ತು ಮಾನವೀಯತೆ ಪ್ರತಿಪಾದಿಸುತ್ತಾರೋ,
ಯಾರು ಸಾಮಾನ್ಯವಾಗಿ ಮಾಂಸಾಹಾರಿಗಳಾಗಿದ್ದಾರೋ ಅವರಲ್ಲಿ ಬಹುತೇಕರು ಯುದ್ದವನ್ನು ವಿರೋಧಿಸುತ್ತಾರೆ. ರಕ್ತಕ್ಕೆ ರಕ್ತದ ಭಾಷೆ ಬಳಸುತ್ತಿಲ್ಲ. ಯುದ್ಧ ಬೇಡ ಶಾಂತಿ ಬೇಕು ಎನ್ನುತ್ತಿದ್ದಾರೆ.
ಅವರಿಗೂ ನೋವು, ಆಕ್ರೋಶ, ಅವಮಾನ, ಹುತಾತ್ಮರಾದವರ ಬಗ್ಗೆ ಅನುಕಂಪವಿದೆ. ಆದರೂ ಅವರು ದ್ವೇಷಕ್ಕಿಂತ ಪ್ರೀತಿಯನ್ನು ಬೆಂಬಲಿಸುತ್ತಾರೆ…….
ಆದರೆ,
ಯಾರು ಮಾತಿಗೊಮ್ಮೆ ದೇವರು, ಧರ್ಮ, ಸಂಸ್ಕೃತಿ, ಸಂಸ್ಕಾರ, ಆಧ್ಯಾತ್ಮ, ಸೃಷ್ಟಿಯ ಸಕಲ ಜೀವಿಗಳಲ್ಲಿ ದೇವರನ್ನು ಕಾಣುವ, ಗೋಹತ್ಯೆಯನ್ನು ಬಲವಾಗಿ ವಿರೋಧಿಸುವ, ಸೈನ್ಯದಲ್ಲಿ ತಮ್ಮ ಕಡೆಯಿಂದ ಕಡಿಮೆ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಈ ಸಮಾಜದ ಬಹಳಷ್ಟು ಹಣ, ಅಧಿಕಾರ, ಅಂತಸ್ತುಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ, ದೈಹಿಕವಾಗಿ ಅಷ್ಟೇನು ಪ್ರಬಲವಾಗಿಲ್ಲದ, ಸಾಮಾನ್ಯವಾಗಿ ಸಸ್ಯಾಹಾರಿ ಜನರು ಯುದ್ದಕ್ಕೆ ತಹತಹಿಸುತ್ತಿದ್ದಾರೆ. ಸೈನಿಕರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. ಸೇಡಿನ ಭಾಷೆಯಲ್ಲಿ ಮುನ್ನುಗ್ಗಲು ಹೇಳುತ್ತಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆ ಬೇಡ. ಇಡೀ ಪಾಕಿಸ್ತಾನವನ್ನು ನಾಶ ಮಾಡುವುದಾಗಿ ಹೇಳುತ್ತಿದ್ದಾರೆ……
ಎಂತಹ ವಿಪರ್ಯಾಸ ನೋಡಿ. ಈ ಅಂಕಣಕಾರರು,
ಪ್ರವಚನಕಾರರು,
ಭಾಷಣಕಾರರು,
ಸಂಸ್ಕೃತಿಯ ವಕ್ತಾರರು,
ಅರೆಬರೆ ವಿದ್ಯಾವಂತರು,
ಅತ್ಯಂತ ಸುರಕ್ಷಿತ ಸ್ಥಳದಲ್ಲಿ ಇದ್ದುಕೊಂಡು ಸೇಡಿನ ಮಾತು ಆಡುತ್ತಾರೆ. ಸೇಡು ತೀರಿಸಿಕೊಳ್ಳಲು ಅಮಾಯಕ ಬಡ ಸೈನಿಕರನ್ನು ಮುಂದೆ ತಳ್ಳುತ್ತಾರೆ. ಶಾಂತಿಯ ಮಾತನಾಡಿದರೆ, ಎಲ್ಲರ ಒಳಿತನ್ನು ಬಯಸಿದರೆ ದೇಶದ್ರೋಹಿಗಳು ಎನ್ನುತ್ತಾರೆ….
ಅರೆ,
ಯುದ್ದೋತ್ಸಾಹಿ ಪತ್ರಕರ್ತರೇ, ಸೇಡಿನ ಮನೋಭಾವದ ಗೆಳೆಯರೇ,
ದಯವಿಟ್ಟು ನಿಮ್ಮ ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸಿ ನೇರವಾಗಿ ಕಾಶ್ಮೀರಕ್ಕೆ ಹೋಗಿ, ಅಲ್ಲಿಯ ಭಯೋತ್ಪಾದಕರನ್ನು ನಾಶಮಾಡಿ. ಆ ಪ್ರಕೃತಿಯ ಸುಂದರ ನೆಲದಲ್ಲಿ ನೆಮ್ಮದಿಯಿಂದ ವಾಸ ಮಾಡಿ. ಯಾರು ಬೇಡವೆನ್ನುತ್ತಾರೆ…..
ಅದು ಅಷ್ಟು ಸುಲಭವಾಗಿದ್ದಿದ್ದರೆ ಹಿಂದಿನ ಸರ್ಕಾರವಾಗಲಿ ಅಥವಾ ಈಗಿನ ಸರ್ಕಾರವಾಗಲಿ ಸುಮ್ಮನೆ ಇರುತ್ತಿತ್ತೇ, ಒಮ್ಮೆ ಯೋಚಿಸಿ……
ಬೇಡ ಗೆಳೆಯರೆ,
ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇವೆ. ಈ ವಿಷಯದಲ್ಲಿ ನಮ್ಮ ನಡುವೆ ಆಂತರಿಕ ಸಂಘರ್ಷ ಬೇಡ. ಅದು ದೇಶವನ್ನು ದುರ್ಬಲಗೊಳಿಸುತ್ತದೆ. ಇದನ್ನು ಶತ್ರುಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರಿಗೆ ಅವಕಾಶ ಕೊಡಬೇಡುವುದು ಬೇಡ……
ನಿಮ್ಮ ಅಭಿಪ್ರಾಯ,
ಆರೆಸ್ಸೆಸ್ ಪರವಾಗಿರಲಿ, ಬಿಜೆಪಿ ಪರವಾಗಿರಲಿ, ಕಾಂಗ್ರೆಸ್ ಪರವಾಗಿರಲಿ, ಕಮ್ಯುನಿಸ್ಟ್ ಪರವಾಗಿರಲಿ,
ನಕ್ಸಲಿಸಂ ಪರವಾಗಿರಲಿ,
ಅಂಬೇಡ್ಕರ್ ವಿಚಾರದ ಪರವಾಗಿರಲಿ,
ಬಸವಣ್ಣನವರ ಪರವಾಗಿರಲಿ,
ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಬುದ್ಧ, ಜೈನ, ಲಿಂಗಾಯತ ಯಾರದೇ ಪರವಾಗಿರಲಿ ಆದರೆ ಮೊದಲಿಗೆ ಭಾರತದ ಪರವಾಗಿರಲಿ. ದೇಶ ಉಳಿದರೆ ಮಾತ್ರ ನಾವು ನೀವು ಎಲ್ಲರೂ…..
ಕಾಶ್ಮೀರದ ಉದಯ, ಅದಕ್ಕಿದ್ದ ವಿಶೇಷ ಸ್ಥಾನಮಾನ, ಅದರ ರದ್ದು, ರಕ್ಷಣಾ ದೃಷ್ಟಿಯಿಂದ ಅದಕ್ಕಿರುವ ಮಹತ್ವ, ಅದಕ್ಕಾಗಿ ನಾವು ತೆರುತ್ತಿರುವ ಬೆಲೆ, ಚೀನಾ, ಪಾಕಿಸ್ತಾನದ ಭಾರತ ದ್ವೇಷ, ನಮ್ಮ ಶಕ್ತಿ ಸಾಮರ್ಥ್ಯ, ಯುದ್ಧ ಅಥವಾ ಮಾತುಕತೆಯಿಂದ ಆಗಬಹುದಾದ ಲಾಭ ನಷ್ಟಗಳು, ಭಾರತೀಯರ ಮನಸ್ಥಿತಿ ಹೀಗೆ ಇನ್ನೂ ಹಲವಾರು ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು……
ಭಾರತ ಸರ್ಕಾರ ಅದನ್ನು ನಿರ್ವಹಿಸುತ್ತದೆ. ಅದರ ಮೇಲೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ಒತ್ತಡ ಹೇರುವುದು ಬೇಡ. ನಮ್ಮ ನಮ್ಮನ್ನೇ ದೇಶದ್ರೋಹಿಗಳು ಎಂದು ಕರೆದುಕೊಳ್ಳುವುದು ಬೇಡ….
ಇಸ್ರೇಲ್ ಇಸ್ರೇಲ್ ಎಂದು ಮಾತಿಗೊಮ್ಮೆ ಹೇಳುವಿರಿ.
ಸ್ನೇಹಿತರೇ,
ಇಸ್ರೇಲ್ ನಲ್ಲಿ ಭ್ರಷ್ಟಾಚಾರ ಪ್ರಮಾಣ ಎಷ್ಟಿದೆ ಗೊತ್ತೆ,
ಅತ್ಯಾಚಾರ ಪ್ರಕರಣ ಎಷ್ಟಿದೆ ಗೊತ್ತೆ,
ವಂಚನೆ, ಕಳ್ಳತನ ಎಷ್ಟಿದೆ ಗೊತ್ತೆ,
ಅಲ್ಲಿ ಜಾತಿ, ಭಾಷೆ, ಧರ್ಮ, ದೇವರುಗಳು ಎಷ್ಟಿವೆ ಗೊತ್ತೆ, ಅಲ್ಲಿ ಬಡತನ ಅಜ್ಞಾನ ಎಷ್ಟಿದೆ ಗೊತ್ತೆ,
ಅಲ್ಲಿ ಮೀರ್ ಕುತಂತ್ರಿಗಳು ಎಷ್ಟು ಜನರಿದ್ದಾರೆ ಗೊತ್ತೆ.
ಅವರ ಪ್ರಕೃತಿ ದತ್ತ ದೇಹ ಭಾಷೆ ಗೊತ್ತೆ………..
ಈ ಎಲ್ಲವನ್ನೂ ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಿ. ನಿಮಗೆ ವಾಸ್ತವ ಅರಿವಾಗುತ್ತದೆ…..
ಇಷ್ಟೆಲ್ಲಾ ಹೇಳಿದ ನಂತರವೂ ನಾವೆಲ್ಲರೂ ಒಂದೇ. ಅವಶ್ಯವಾದರೆ ದೇಶದ ರಕ್ಷಣೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ದರಾಗೋಣ. ಆದರೆ ಹುಚ್ಚುತನದ ಭಾವನಾತ್ಮಕ ಅಭಿಪ್ರಾಯಗಳಿಗೆ ಬಲಿಯಾಗದಿರೋಣ,
ಭಯೋತ್ಪಾದಕರ ನಾಶಕ್ಕೆ
ಪಣತೊಡೋಣ,
ವಿವೇಚನೆಯಿಂದ……ಲೇಖನ-ವಿವೇಕಾನಂದ. ಎಚ್. ಕೆ.
9844013068