ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಚ್ಚರಿಕೆ
—————
ನೆಲದಗಲಕ್ಕೂ ಚಾಚಿರೊ
ತವರ ಬೇರುಗಳೇ
ರೆಂಬೆ ಕುಡಿ ಮೊಗ್ಗುಗಳೇ
ನಮ್ಮತ್ತ ನೋಡದ
ಮಡಿಗಳ ಓಡಿಸ ಬನ್ನಿ
ಗುಲಾಮಿ ಹೇರುವ
ಬಲ ವಾದದ ಸಂಗವೇಕೆ
ಅಕ್ಷರ ಕಸಿದ ಹೆಣ್ಣೈಕಳು
ದೈವ ನೈವೇದ್ಯವೇ
ನಿಂತ ನೀರಂತ
ಮಾಸಲು ಮನಸುಗಳು
ಧರ್ಮದ ಬಿಳಲು
ಬೇವು ಭಂಡಾರಗಳಿಗೆ
ಮನ ಸೋಲದಿರಿ
ಎದ್ದರೆ ಸಿಡಿಯುವ ತುಪಾಕಿಗಳು
ಬಂದರೆ ಹರಿಯುವ ತೊರೆಗಳು
ಕೂಗುಗಳೋ ಗುಡುಗು ಸಿಡಿಲುಗಳು
ಪ್ರಜಾಪ್ರಭುತ್ವದ ಧ್ವನಿಗಳು
ಸಾಟಿ ಯಾರು ಒಮ್ಮೆ ಪ್ರತಿಭಟಿಸಿ
ಅಸಮಾನತೆಯ ಸಾಲಿಂದ
ಹೊರ ಬನ್ನಿರಿ
ನಿಲ್ಲುವ ತನಕ ಮಲಗಿಸಿಯೇ
ಕತ್ತಲ ತೊಟ್ಟಿಲಲಿ ತೂಗುತಿದೆ
ಬೆಳಕೇ ಕಾಣದಂತೆ
ಅದೆಷ್ಟು ವರ್ಷಗಳು ಮಲಗಿದ್ದೀರಿ
ಮಲಗಿದ್ದಲ್ಲೇ ಸತ್ತಿದ್ದೀರಿ
ಅರ್ಥವಿಲ್ಲದ ಬದುಕು
ಬದುಕಿದ್ದು ಸಾಕು
ವ್ಯರ್ಥವಾಗುತ್ತಿರುವ
ನಮ್ಮ ಉಳಿಸಿಕೊಳ್ಳಬೇಕು
ಬಯಲಲಿ ಬೆತ್ತಲು ಮಾಡಿ
ಬಂಧಿಸಿದ
ನಿನ್ನ ಸ್ವಾತಂತ್ರ್ಯಕ್ಕೊಮ್ಮೆ
ಕೇಳಬೇಕು
ಆ ಮೋಹಿನಿ ರೂಪ
ಅಮೃತ ಕತೆ
ಇನ್ನೆಲ್ಲಿಯವರೆಗೆ ಇಂಡಿಯಾ
ಸೂರ್ಯನೊಂದಿಗೆ
ನಮ್ಮನ್ನೂ ಉದಯಿಸು
ಬೆಳಕಲಿಟ್ಟು ನಿಜ ಹಗಲ
ಬಾನ ಬಯಲಿಗೆ ಚಿಮ್ಮಿಸಬಾರದೇ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.