ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ದೊಡ್ಡಪೇಟೆ ರಾಜ ಬೀದಿಯಲ್ಲಿ ಪ್ರತಿ ವರ್ಷದಂತೆ ಏ. ೭ ರಂದು ಮಂಗಳವಾರ ರಾತ್ರಿ ನಡೆಯುವ ಐತಿಹಾಸಿಕ ನಗರ ದೇವತೆಗಳಾದ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮನವರ ಭೇಟಿ ಉತ್ಸವ ಜಿಟಿಪಿಎಲ್ ಕೇಬಲ್ ನೆಟ್‌ವರ್ಕ್‌ನಿಂದ ಕೋಟೆನಾಡು ಯುಟೂಬ್ ಚಾನಲ್‌ನಲ್ಲಿ ನೇರ ಪ್ರಸಾರವಾಗಲಿದೆ.
ಹಿರಿಯ ನಾಗರೀಕರು, ವಯೋವೃದ್ದರು, ಮಹಿಳೆಯರು, ಮಕ್ಕಳು ಮನೆಯಲ್ಲಿಯೇ ಕುಳಿತು ಅಕ್ಕ-ತಂಗಿಯರ ಭೇಟಿಯ ಐತಿಹಾಸಿಕ ಕ್ಷಣವನ್ನು ವೀಕ್ಷಿಸಿ ಕಣ್ತುಂಬಿಕೊಳ್ಳುವಂತೆ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ವಿನಂತಿಸಿದರು.
ಕರುವಿನಕಟ್ಟೆ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರ ದೇವತೆಗಳ ಭೇಟಿ ಪ್ರಯುಕ್ತ ಕರುವಿನಕಟ್ಟೆ ವೃತ್ತದಲ್ಲಿ ನವತರುಣ ಕಲಾ ಸಂಘದಿಂದ ಮಂಗಳವಾರ ರಾತ್ರಿ ೯-೩೦ ಕ್ಕೆ ವೆಂಕಣ್ಣ ಆರ್.ಬಿಸರಳ್ಳಿ ಸಾ ಕವಲೂರು ವಿರಚಿತ ಕುಡುಕ ಕಟ್ಟಿದ ತಾಳಿ ಅಥಾರ್ತ್ ಸಾಕು ತಂಗಿಯ ಸಂಕಟ ಹಾಸ್ಯ ಭರಿತ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಸಿ.ಟಿ.ಕೃಷ್ಣಮೂರ್ತಿ ಮನವಿ ಮಾಡಿದರು.
ತಿಮ್ಮಣ್ಣ, ನಿಜಲಿಂಗಪ್ಪ, ಸಲ್ಮಾನ್, ಶ್ರೀನಿವಾಸ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

