ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಕಲ ಜೀವರಾಶಿಗಳಿಗೂ ನೀರು ಅಮೂಲ್ಯ. ನೀರಿಲ್ಲದೆ ಬದುಕುವುದು ಅಸಾಧ್ಯ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ ಸುಜಾತ ಸುವರ್ಣ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಅಭಿಯೋಜನಾ ಇಲಾಖೆ ನೇತೃತ್ವದಲ್ಲಿ ವಿಶ್ವ ಜಲ ದಿನ ಮತ್ತು ಆಸಿಡ್ ದಾಳಿ ಸಂತ್ರಸ್ತರಿಗೆ ಕಾನೂನು ಅರಿವು -ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳ್ಳಿ, ಬಂಗಾರ ವಜ್ರಕಿಂತ ಮಿಗಿಲಾದುದ್ದು ನೀರು. ಮಿತಿ ಮೀರಿದ ನೀರಿನ ಬಳಕೆ ಕಡಿಮೆ ಮಾಡುವುದು ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದೇ ವಿಶ್ವ ಜಲ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗಿದೆ. ದೇಶದ ಸಮೃದ್ಧಿಗೆ ನೀರು ಭೂಮಿ ಅವಶ್ಯಕತೆ ಎಂದರು. ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಪ್ರೀತಿ, ದ್ವೇಷ ಇತರೆ ಕಾರಣಗಳಿಂದ ಆಸಿಡ್ ದಾಳಿ ಮಾಡುವುದು ಹೆಚ್ಚುತ್ತಿದೆ. ಆಸಿಡ್ ದಾಳಿಗೆ ಒಳಗಾದವರಿಗೆ ತುರ್ತು ಮತ್ತು ದೀರ್ಘಾವದಿ ಚಿಕಿತ್ಸೆ, ಆಸ್ಪತ್ರೆ ವೆಚ್ಚ ಸೇರಿದಂತೆ ಮತ್ತಿತರ ಸರ್ಕಾರದ ಸೌಲಭ್ಯಗಳಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ವಕೀಲ ಬಿ ಜಗದೀಶ್ ಉಪನ್ಯಾಸ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪ ತಿಮ್ಮಾಪುರ್, ಅಪರ ಸಿವಿಲ್ ನ್ಯಾಯಾಧೀಶರಾದ ಎಚ್ ಡಿ ಶ್ರೀಧರ್, ಎಚ್ ಬೀನಾ ರಾಣಿ, ಜಿ ಚಿತ್ರಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.