ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊಳಕಾಲ್ಮುರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ, ಜಲ ಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯತಿ ವಡೇರಹಳ್ಳಿ ಗ್ರಾಮದ ಬಳಿ ಇರುವ ಮೇಲ್ಮಟ್ಟದ ಜಲ ಸಂಗ್ರಹಾಗಾರಕ್ಕೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸಿ, ಈ ಜಲ ಸಂಗ್ರಹಾಗಾರಕ್ಕೆ ಸಂಬಂಧಿಸಿದ 36 ಗ್ರಾಮಗಳಿಗೆ ತುಂಗಭದ್ರಾ ಹಿನ್ನೀರು ತಲುಪಿಸಲು ಆದಷ್ಟು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲ ಸಂಗ್ರಹಾಗಾರದ ನೀರಿಗೆ ಕ್ಲೋರಿನೇಷನ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಸೂಚಿಸಿ, ಎಂ.ಎಸ್ ಮೆಗಾ ಇಂಜಿನಿಯರಿಂಗ್ ಇನ್‍ಪ್ರಾಸ್ಟ್ರಕ್ಚರ್ ಲಿಮಿಟೆಡ್ ಅವರು ತ್ವರಿತವಾಗಿ ಬೆಸ್ಕಾಂ ಇಲಾಖೆಯಿಂದ ಕ್ಲೋರಿನೇಷನ್ ಘಟಕಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ನಿರ್ದೇಶಿಸಿದರು.
ತದನಂತರ ಜಹಗೀರ್ ಬುಡ್ಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಕ್ಕುರ್ತಿ ಗ್ರಾಮದ ಸಮೀಪ ಇರುವ ಇಂಟರ್‍ಮಿಡಿಯೇಟ್ ಪಂಪಿಂಗ್ ಸ್ಟೇಷನ್‍ಗೆ ಭೇಟಿ ನೀಡಿ ಪರಿಶೀಲಿಸಿ, ಘಟಕದಲ್ಲಿ ಅಳವಡಿಸಿರುವ 65 HP/45 KW ಪಂಪ್-ಮೋಟಾರ್ ವ್ಯವಸ್ಥೆ ಪರಿಶೀಲಿಸಿ ಪಂಪಿನಲ್ಲಿ ಸೋರಿಕೆಯಾಗುತ್ತಿರುವುದನ್ನು ತಕ್ಷಣವೇ ಸರಿಪಡಿಸಲು ಸೂಚಿಸಿ, ಘಟಕದ ರಿಜಿಸ್ಟರ್ ಪುಸ್ತಕವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಲು ತಾಕೀತು ಮಾಡಿದರು.
ಜಹಗೀರ್‍ಬುಡ್ಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲಾರೆಡ್ಡಿಕೊಂಡಾಪುರ ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಪರಿವೀಕ್ಷಣೆ ಮಾಡಿ, ಗ್ರಾಮದ ಎಸ್.ಸಿ. ಕಾಲೋನಿಗೆ ಭೇಟಿ ನೀಡಿ ಕಾಲೋನಿಯಲ್ಲಿ ನಿರ್ವಹಿಸಿರುವ ಕಾಮಗಾರಿಯ ಸಿ.ಸಿ.ರಸ್ತೆ ರೆಸ್ಟೋರೆಷನ್ ಕಾರ್ಯ ವೀಕ್ಷಿಸಿ ಶ್ಲಾಘಿಸಿದರು.
ಮುಂದುವರೆದು ಗ್ರಾಮದ ಶಾಲೆ ಹಾಗೂ ಅಂಗನವಾಡಿಗೆ ಕೇಂದ್ರಗಳಿಗೆ ಭೇಟಿ ನೀಡಿ, ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಉತ್ತಮವಾಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕವೇ ನೀರು ಸರಬರಾಜು ಮಾಡಲು ಸೂಚಿಸಿದರು.
ಮೊಳಕಾಲ್ಮುರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಸದುಪಯೋಗ ಪಡಿಸಿಕೊಳ್ಳಲು ಹಾಗೂ ತುಂಗಾಭದ್ರ ಹಿನ್ನೀರು ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೊಳಕಾಲ್ಮುರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಸಹಾಯಕ ಇಂಜಿನಿಯ್‍ಗಳಾದ ಮಲ್ಲಿಕಾರ್ಜುನ, ರೇಖಾ, ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ಎಸ್ ನಾಡರ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೀರುಗಂಟಿಗಳು ಇದ್ದರು.