ಭದ್ರಾದಿಂದ ವಿವಿ ಸಾಗರಕ್ಕೆ ಮತ್ತೆ ನೀರು ಲಿಫ್ಟ್

News Desk

36.50 ಲಕ್ಷ ರೂ.ಗಳಲ್ಲಿ ನೂತನವಾಗಿ ಪರ್ಯಾಯ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣ
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಲಿಫ್ಟ್ ಮಾಡುವ ಕಾರ್ಯ ಡಿ.13ರ ಶುಕ್ರವಾರದಿಂದ ಮತ್ತೆ ಆರಂಭವಾಗಿದೆ.

ಕಳೆದ ನವೆಂಬರ್ ತಿಂಗಳ ಕೊನೆಯಲ್ಲಿ ಸೇತುವೆ ಒಂದು ಕುಸಿದ ಕಾರಣ ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡುವ ಕಾರ್ಯ ಸ್ಥಗಿತವಾಗಿತ್ತು. ಆದರೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತುರ್ತಾಗಿ ನೂತನ ಸೇತುವೆ ನಿರ್ಮಾಣ ಮಾಡಿ ನೀರನ್ನು ಶುಕ್ರವಾರದಿಂದ ಲಿಫ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಕನಸು ಮತ್ತಷ್ಟು ಸಲೀಸು ಎನ್ನಲಾಗಿದೆ.

ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಲು ಕೇವಲ ಒಂದೂವರೆಯಿಂದ ಎರಡು ಅಡಿಯಷ್ಟು ನೀರು ಬಾಕಿ ಇರುವ ಸಂದರ್ಭದಲ್ಲಿ ಮಳೆಗಾಲ ಮುಗಿದು ಹೋಯಿತು. ಇದರ ಮಧ್ಯ ಒಂದಿಷ್ಟು ಸೈಕ್ಲೋನ್ ಬಂತು. ಇದರಿಂದ ಒಂದು ನೀರು ಬರಲು ಆರಂಭವಾಯಿತು. ವೇದಾವತಿ ನದಿ ವ್ಯಾಪ್ತಿಯ ಜಲ ನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮಳೆ ಬೀಳಲಿಲ್ಲ.

ಆಗ ಜಲ ಸಂಪನ್ಮೂಲ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿ ಭದ್ರಾ ಡ್ಯಾಂ ಭರ್ತಿಯಾಗಿದ್ದು ಸಾಕಷ್ಟು ನೀರು ಪೋಲಾಗಿ ಹರಿಯುತ್ತಿದೆ. ಇದರ ಬದಲು ವಿವಿ ಸಾಗರಕ್ಕೆ 2025ರ ಜನವರಿ ಅಂತ್ಯದವರೆಗೆ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಲಿಫ್ಟ್ ಮಾಡಿದರೆ ವಿವಿ ಸಾಗರ ಡ್ಯಾಂ ಭರ್ತಿಯಾಗಲಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದಾಗಿ ನವೆಂಬರ್ ತಿಂಗಳ ಮಧ್ಯದಿಂದ ವಿವಿ ಸಾಗರಕ್ಕೆ ನೀರು ಲಿಫ್ಟ್ ಮಾಡಲು ಆರಂಭಿಸಲಾಯಿತು.

ಆದರೆ ಸಾಂದರ್ಭಿಕ ವೈಪರಿತ್ಯಗಳು ಕಾಡಲಾರಂಭಿಸಿದ್ದರಿಂದ ಭದ್ರಾದಿಂದ ನೀರು ಲಿಫ್ಟ್ ಮಾಡದಂತೆ ತಡೆ ನೀಡಲಾಯಿತು.

ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಕುಸಿತ-
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಕಾಟನಗೆರೆ-ಅಬ್ಬಿನಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆಯಿಂದಾಗಿ ಕುಸಿದ ಕಾರಣ ಭದ್ರಾ ಜಲಾಶಯದಿಂದ ನೀರು ವಿಫ್ಟ್ ಮಾಡುವುದನ್ನ ಸ್ಥಗಿತಗೊಳಿಸಲಾಯಿತು. ಹಾಗಾಗಿ ವಿವಿ ಸಾಗರಕ್ಕೆ ಒಳ ಹರಿವು ಸಂಪೂರ್ಣ ಸ್ಥಗಿತಗೊಂಡಿತು.

ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯ ಕೋಡಿ ಬೀಳುವ ಕನಸು ಮುಗಿಯಿತು, ಇನ್ನೇನಿದ್ದರೂ ಮುಂದಿನ ಮಳೆಗಾಲ ಇಲ್ಲ ಯಾವುದಾದರೊಂದು ಸೈಕ್ಲೋನ್ ಬಂದರೆ ಮಾತ್ರ ಬಾಕಿ ಇದ್ದ ಒಂದೂವರೆ ಅಡಿ ನೀರು ಭರ್ತಿಯಾಗಿ ಕೋಡಿ ಹರಿಯುವ ಸಾಧ್ಯತೆ ಇತ್ತು. ಆದರೆ ಸೈಕ್ಲೋನ್ ನಿರೀಕ್ಷೆಯಂತೆ ಮಳೆ ಬಿದ್ದು ವಿವಿ ಸಾಗರಕ್ಕೆ ನೀರು ಹರಿಯಲಿಲ್ಲ ಎಂದು ಬೇಸರಗೊಂಡರು.

ಪರ್ಯಾಯ ಸೇತುವೆ ನಿರ್ಮಾಣ-
ತರೀಕೆರೆ ಸಮೀಪದ ಬೆಟ್ಟದತಾವರೆಕೆರೆ ಪಂಪ್ ಹೌಸ್ ನಿಂದ ನೀರನ್ನು ಲಿಫ್ಟ್ ಮಾಡಿ ಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದ ಸಮೀಪ ಇರುವ ವೈ-ಜಂಕ್ಷನ್ ಬಳಿಯ ಹಳ್ಳದ ಮೂಲಕ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಹಳ್ಳದಲ್ಲಿ ಮಳೆ ನೀರು ಮತ್ತು ಲಿಫ್ಟ್ ಮಾಡುವ ನೀರು ಸತತವಾಗಿ ನೀರಿದ ಹರಿದ ಕಾರಣ ಮಣ್ಣು ಸವಕಳಿಯಿಂದ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಕುಸಿಯಿತು.

ಇದರಿಂದಾಗಿ ಆ ಭಾಗದ ಕೆಲ ಹಳ್ಳಿಗಳಿಗೆ ಸಂಪರ್ಕ ಇದ್ದ ಸೇತುವೆ ಕುಸಿದಿದ್ದರಿಂದಾಗಿ ನೀರು ಲಿಫ್ಟ್ ಮಾಡುವುದನ್ನು ಸ್ಥಗಿತ ಮಾಡಲಾಗಿತ್ತು. ಈಗ ಬೇರೊಂದು ಸೇತುವೆ ನಿರ್ಮಾಣ ಮಾಡಿದ್ದು ಶುಕ್ರವಾರದಿಂದಲೇ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ನಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಲಾಗುತ್ತಿರುವುದರಿಂದ ವಿವಿ ಸಾಗರ ಕೋಡಿ ಬೀಳುವ ಕನಸು ಮತ್ತೆ ಜೀವಂತವಾಗಿದೆ.

ಮುಂಗಾರು-ಹಿಂಗಾರು ಹಂಗಾಮಿನಲ್ಲಿ ನೀರು ಲಿಫ್ಟ್-
2024ರ ಮುಂಗಾರು ಹಂಗಾಮಿನ ಕಳೆದ ಆಗಸ್ಟ್-4ರಿಂದ ಭದ್ರಾ ನೀರನ್ನು ಪ್ರಸಕ್ತ ಸಾಲಿನಲ್ಲಿ ಮೊದಲು ಲಿಪ್ಟ್ ಮಾಡಿ
, ಮೂರು ತಿಂಗಳ ಕಾಲ ವಿವಿ ಸಾಗರ ಜಲಾಶಯಕ್ಕೆ ಪ್ರತಿ ನಿತ್ಯ 700 ಕ್ಯೂಸೆಕ್ಸ್ ಹರಿಸಲು ಜಲ ಸಂಪನ್ಮೂಲ ಇಲಾಖೆ ಆದೇಶಿಸಿತ್ತು. ಆದರೆ ಈ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಕಾಡಿದವು.

ಮೂರು ತಿಂಗಳ ಕಾಲ ನೀರು ಲಿಫ್ಟ್ ಮಾಡಬೇಕಿತ್ತು ಹಲವು ಅಡೆ ತಡೆಗಳಿಂದಾಗಿ ಸರಿಯಾಗಿ ಒಂದೂವರೆ ತಿಂಗಳು ನೀರನ್ನು ಲಿಫ್ಟ್ ಮಾಡಲಿಲ್ಲ.

ಮುಂಗಾರು ಹಂಗಾಮಿನಲ್ಲಿ ಎರಡೆರಡು ಸಲ ಭದ್ರಾ ಡ್ಯಾಂ ಭರ್ತಿಯಾಗಿ ಕೋಡಿ ಹರಿದ ನೀರು ಸಮುದ್ರ ಸೇರಿ ಪೋಲಾಗುತ್ತಿರುವುದನ್ನು ನೋಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ 2024ರ ನವೆಂಬರ್ ತಿಂಗಳ ಕೊನೆ ವಾರದಲ್ಲಿ ಮತ್ತೊಂದು ಆದೇಶ ಹೊರಡಿಸಿ ಪ್ರತಿ ನಿತ್ಯ 700 ಕ್ಯೂಸೆಕ್ಸ್ ನೀರನ್ನು 2025ರ ಜನವರಿ ಅಂತ್ಯದವರೆಗೆ ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡುವಂತೆ ಆದೇಶಿಸಲಾಗಿತ್ತು. ಆದೇಶ ಹೊರ ಬಿದ್ದ ಎರಡು ದಿನಗಳ ನಂತರ ಸೇತುವೆ ಕುಸಿತದ ಕಾರಣಕ್ಕೆ ಮತ್ತೆ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಕೇವಲ ಒಂದೂವರೆ ಅಡಿಯಷ್ಟು ಮಾತ್ರ ಬಾಕಿ ಇತ್ತು.

ಸೇತುವೆ ಕುಸಿದಿದ್ದರಿಂದಾಗಿ ಅಬ್ಬಿನಹೊಳಲು, ಮೆಣಸಿನಕಾಯಿ ಹೊಸಳ್ಳಿ, ಜಾವೂರು, ಕಾಟಿಗನೇರಿ, ಸೊಲ್ಲಾಪುರ ತಮ್ಮಟದ ಹಳ್ಳಿ ಗೇಟ್, ಮೆಣಸಿನಕಾಯಿ ಹೊಸಳ್ಳಿ ಇನ್ನಿತರೇ ಗ್ರಾಮಗಳ ಜನ, ಜಾನುವಾರುಗಳಿಗೆ  ಓಡಾಟ ಮಾಡಲು ಸಂಪರ್ಕವೇ ಇಲ್ಲವಾಗಿದ್ದರಿಂದ ಸಾರ್ವಜನಿಕರ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಸಾಕಷ್ಟು ಅಡ್ಡಿ ಕಾಡಲಾರಂಭಿಸಿತು.

ಈ ಭಾಗದಲ್ಲಿ ಕುಸಿದ ಸೇತುವೆ ಕಾಟಿಗನೇರಿ-ಅಬ್ಬಿನಹೊಳಲು-ಮೆಣಸಿಕಾಯಿಹೊಸಳ್ಳಿ-ಜಾವೂರು ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ. ಬೇರೆ ಯಾವುದೇ ಪರ್ಯಾಯ ಹಾದಿಗಳಿಲ್ಲ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಅನಾನುಕೂಲ ಉಂಟಾಯಿತು. ಆದ್ದರಿಂದ ವಿಶ್ವೇಶ್ವರಯ್ಯ ನೀರಾವರಿ ನಿಗಮವು 36.50 ಲಕ್ಷ ರೂ.ಗಳಲ್ಲಿ ತುರ್ತಾಗಿ ಬೇರೊಂದು ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಲಾಯಿತು. ಹಾಗಾಗಿ ಮತ್ತೆ ಭದ್ರಾದಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ.

ಭರ್ತಿಗೆ ಒಂದು ಕಾಲಡಿ ಬಾಕಿ-
ವಿವಿ ಸಾಗರ ಭರ್ತಿಯಾಗಲು ಕೇವಲ ಒಂದೂಕಾಲಡಿ ಬಾಕಿ ಇದೆ. ಶುಕ್ರವಾರ ಬೆಳಿಗ್ಗೆ 8 ಗಂಟೆ ವೇಳೆ 128.75 ಅಡಿ ನೀರು ಶೇಖರಣೆಯಾಗಿದೆ. 130 ಅಡಿಗಳ ಸಾಮರ್ಥ್ಯದ ವಿವಿ ಸಾಗರ ಡ್ಯಾಂ ಭರ್ತಿಯಾಗಲು ಕೇವಲ 1.25 ಅಡಿ ಮಾತ್ರ ಬಾಕಿ ಇದ್ದು ಜನವರಿ ಅಂತ್ಯದವರೆಗೆ ಭದ್ರಾದಿಂದ ನೀರು ಲಿಫ್ಟ್ ಮಾಡಿದರೆ ವಿವಿ ಸಾಗರ ಡ್ಯಾಂ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ.

ಪ್ರಸಕ್ತ ಸಾಲಿನಲ್ಲಿ ವಿವಿ ಸಾಗರ ಡ್ಯಾಂ ಭರ್ತಿಯಾದರೆ ಇತಿಹಾಸದಲ್ಲಿ 3ನೇ ಬಾರಿಗೆ ವಿವಿ ಸಾಗರ ಡ್ಯಾಂ ಭರ್ತಿಯಾದಂತೆ ಆಗಲಿದೆ. ಡ್ಯಾಂ ನಿರ್ಮಿಸಿ 26 ವರ್ಷಗಳ ನಂತರ 1033ರಲ್ಲಿ ಡ್ಯಾಂ ಭರ್ತಿಯಾಗಿದ್ದು ಮೊದಲ ಸಲವಾಗಿದೆ. ಮತ್ತೆ 89 ವರ್ಷಗಳ ನಂತರ ಅಂದರೆ 2022ರಲ್ಲಿ 2ನೇ ಸಲ ಡ್ಯಾಂ ಭರ್ತಿಯಾಗಿತ್ತು. 2024ರಲ್ಲಿ ಮತ್ತೆ ಡ್ಯಾಂ ಭರ್ತಿಯಾಗುವ ಎಲ್ಲ ಸಾಧ್ಯತೆಗಳು ಇರುವುದರಿಂದ 3ನೇ ಸಲ ಡ್ಯಾಂ ಭರ್ತಿ ಆದಂತೆ ಆಗಲಿದೆ.

ಹಳೆ ಸೇತುವೆ ಕುಸಿತವಾಗಿತ್ತು. ತಾಂತ್ರಿಕ ಕಾರಣದಿಂದ ಭದ್ರಾ ನೀರು ಲಿಫ್ಟ್ ಮಾಡುವುದು ಸ್ಥಗಿತವಾಗಿತ್ತು. ಪರ್ಯಾಯ ಸೇತುವೆ ನಿರ್ಮಿಸಿ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಬೆಟ್ಟದತಾವರೆಕೆರೆ ಪಂಪ್ ಹೌಸ್ ನಿಂದ ನೀರು ಲಿಫ್ಟ್ ಮಾಡಲಾಗುತ್ತಿದೆ ”. ಎಫ್.ಹೆಚ್.ಲಮಾಣಿ, ಮುಖ್ಯ ಇಂಜಿನಿಯರ್, ಭದ್ರಾ ಮೇಲ್ದಂಡೆ, ಚಿತ್ರದುರ್ಗ.

- Advertisement -  - Advertisement - 
Share This Article
error: Content is protected !!
";