ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಾಲ್‌ಬಾಗ್‌ನ ಅಭಿವೃದ್ಧಿಗೆ 10 ಕೋಟಿ ಅನುದಾನವನ್ನು ಜಿಬಿಎ ವತಿಯಿಂದ ಘೋಷಿಸಲಾಗಿದೆ. ಸಾರ್ವಜನಿಕರ ಮನವಿ ಮೇರೆಗೆ ಇಲ್ಲಿ ಇನ್ನು ಮುಂದೆ ಉಚಿತ ಶೌಚಾಲಯ, ಜಿಮ್ ವ್ಯವಸ್ಥೆ ಹಾಗೂ ಬೆಳಗ್ಗೆಯಿಂದ ಸಂಜೆಯವರೆಗೂ ವೈದ್ಯರು ಮತ್ತು ಆಂಬುಲೆನ್ಸ್ ಸೇವೆ ನಿಯೋಜಿಸಲಾಗುವುದು.
ಅಲ್ಲದೆ, ಬೆಂಗಳೂರಿನ ಇತರೆಡೆಗಳಲ್ಲಿಯೂ ಲಾಲ್‌ಬಾಗ್ ಮಾದರಿಯಲ್ಲಿ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಾರ್ವಜನಿಕರ ಆಸ್ತಿಯಾದ ಲಾಲ್‌ಬಾಗ್ ಉದ್ಯಾನಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ. ಟನಲ್ ರಸ್ತೆಯ ಪ್ರವೇಶ-ನಿರ್ಗಮನಕ್ಕೆ ಕೇವಲ ಅರ್ಧ ಎಕರೆ ಪ್ರದೇಶ ಮಾತ್ರ ಬಳಸಲಾಗುವುದು.
ಪಾರ್ಕಿಂಗ್ ಜಾಗವನ್ನು ತಾತ್ಕಾಲಿಕವಾಗಿ ಉಪಯೋಗಿಸಿ, ನಂತರ ಅದನ್ನು ಉದ್ಯಾನಕ್ಕೆ ಹಿಂದಿರುಗಿಸಲಾಗುವುದು. ಉತ್ತಮ ಆಡಳಿತ ನೀಡಲು ಎಲ್ಲಾ ಸಲಹೆಗಳನ್ನು ಪರಿಗಣಿಸಿ, ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ತಿಳಿಸಿದರು.

