ದುರ್ಬಲರಿಗೆ ಮೀಸಲಾತಿ ಸೌಲಭ್ಯ ಜಾರಿ ಮಾಡಿದ್ದೇ ನಾವು-ದೇವೇಗೌಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಾಮಾಜಿಕ ನ್ಯಾಯ
, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು. ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್‌ಅನುಭವಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.

ರಾಜ್ಯ ಜೆಡಿಎಸ್‌ಕಚೇರಿ ಜೆಪಿ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇವರು ಸಾಮಾಜಿಕ ನ್ಯಾಯ ಎಂದೆಲ್ಲಾ ಮಾತನಾಡುತ್ತಿದ್ದಾರೆಂದು ಸಿದ್ದರಾಮಯ್ಯ ಹೆಸರು ಹೇಳದೆ ತಿರುಗೇಟು ನೀಡಿದ ಗೌಡರು, ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲ ಜನರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ ಕಾಂಗ್ರೆಸ್‌ಪಕ್ಷಕ್ಕೆ ಅದು ಅನುಕೂಲವಾಗಿದೆ ಎಂದು ಗೌಡರು ಹೇಳಿದರು.

- Advertisement - 

ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬಿದವರು. ನಾವು ಅವರ ಜೊತೆ ಇದ್ದೇವೆ, ಯಾವ ಭಯವೂ ಇಲ್ಲ. ಪಕ್ಷದಲ್ಲಿ ಮುಂದೆ ಕನಿಷ್ಠ 50 ಮಹಿಳಾ ಸಮಾವೇಶಗಳು ನಡೆಯಬೇಕು. ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇನೆ. ಮಹಿಳಾ ಸಮಾವೇಶಕ್ಕೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಬರುತ್ತಾರೆ, ನಾನೂ ಬರುತ್ತೇನೆ. ನಿಖಿಲ್‌ಅವರು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟಬೇಕು. ಸಮಾವೇಶಗಳನ್ನು ನಡೆಸಬೇಕು ಎಂದು ದೇವೇಗೌಡರು ನಿಖಿಲ್ ಅವರಿಗೆ ಉತ್ಸಾಹ ತುಂಬಿದರು.

ಈ ನಾಡಿನ ಜನರಿಗೆ ನಾವು ಎಷ್ಟು ಕೆಲಸ ಮಾಡಿದ್ದೇವೆ ಎನ್ನುವುದನ್ನು ಹೇಳಬೇಕು. ನಾವು ಮಾಡಿರುವ ಸಾಧನೆ ಬಗ್ಗೆ ಜನರಿಗೆ ತಿಳಿಸಿ ಹೇಳಬೇಕು. ಏನೂ ಮಾಡದೆಯೇ ಅಧಿಕಾರ ಅನುಭವಿಸುತ್ತಿರುವವರ ಬಗ್ಗೆಯೂ ಜನರಿಗೆ ತಿಳಿ ಹೇಳಬೇಕಿದೆ ಎಂದು ದೇವೇಗೌಡರು ತಿಳಿಸಿದರು.

- Advertisement - 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಕನಿಷ್ಠ 80 ಮಹಿಳೆಯರು ಸ್ಪರ್ಧಿಸಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು. ಮೋದಿಯವರು ಮಹಿಳಾ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಲೊಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿದೆ ಎಂದು ದೇವೇಗೌಡರು ಸಂತಸ ವ್ಯಕ್ತಪಡಿಸಿದರು.

ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕು. ಪ್ರತಿ ಜಿಲ್ಲೆಗೆ ಭೇಟಿ ಕೊಡಬೇಕು. ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಅವರ ನೇತೃತ್ವದಲ್ಲಿಯೇ ಪಕ್ಷ ಸಂಘಟನೆ ಮಾಡಬೇಕು. ನಾನು ಕೂಡ ಎಲ್ಲಾ ಕಡೆ ಬರುತ್ತೇನೆ. ನಿಖಿಲ್‌ನೇತೃತ್ವದಲ್ಲಿ ಯುವಕರು ಸಂಘಟಿತರಾಗ ಪಕ್ಷ ಕಟ್ಟಬೇಕು ಎಂದು ಮಾಜಿ ಪ್ರಧಾನಿ ತಿಳಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪ್ರತಿ ನಿತ್ಯವೂ ನಮ್ಮ ಹೃದಯದಲ್ಲಿ ಮಹಿಳೆಯರ ದಿನಾಚರಣೆ ಆಚರಣೆ ಮಾಡೋಣ. ದೇವೇಗೌಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಗಿದೆ. ಪಕ್ಷ ಸಂಘಟನೆಗೆ ಮಹಿಳೆಯರು ಎಷ್ಟು ತ್ಯಾಗ ಮಾಡಿದ್ದಾರೆ ಎನ್ನುವುದನ್ನು ನಾನು ಬಲ್ಲೆ. ನಮ್ಮ ಅಜ್ಜ ದೇವೇಗೌಡರು ಸಂಘಟನೆಗಾಗಿ ಇಡೀ ರಾಜ್ಯ ಸುತ್ತುತ್ತಿದ್ದರೆ, ನಮ್ಮ ಅಜ್ಜಿಯವರು ಎಷ್ಟು ತ್ಯಾಗ ಮಾಡಿರಬಹುದು ಎನ್ನುವುದು ನನಗೆ ಗೊತ್ತಿದೆ ಎಂದು ನಿಖಿಲ್ ಭಾವುಕರಾಗಿ ಹೇಳಿದರು.

ಈಗಾಗಲೇ ನಾನು ಮೂರು ಚುನಾವಣೆಯಲ್ಲಿ ಎಡವಿದ್ದೇನೆ. ಚುನಾವಣೆಯಲ್ಲಿ ಏಳುಬೀಳು ಸಾಮಾನ್ಯ. ಒಳ್ಳೆಯ ಉದ್ದೇಶ ಇದ್ದರೆ ಗುರಿ ಮುಟ್ಟುತ್ತೇವೆ. ಆ ಭಗವಂತನ ಆಶೀರ್ವಾದ ಹಾಗೂ ದೇವೇಗೌಡರ ಆಶೀರ್ವಾದ ನನ್ನ ಮೇಲೆ ಇದೆ. ಮುಂದಿನ ದಿನಗಳಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಅವತರಿಸುವ ದಿನಗಳು ದೂರವಿಲ್ಲ. ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತವನ್ನು ಎಲ್ಲರೂ ಮೆಚ್ಚಬೇಕು. ಇಂದು ಭಾರತಕ್ಕೆ ಜಾಗತಿಕವಾಗಿ ದೊಡ್ಡ ಗೌರವ ಸಿಕ್ಕಿದೆ ಅಂದರೆ ಅದಕ್ಕೆ ಮೋದಿ ಅವರೇ ಕಾರಣ ಎಂದು ನಿಖಿಲ್‌ಹೇಳಿದರು.

ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ ಮಾಜಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ನಾನು ರಾಮನಗರದ ಶಾಸಕಿಯಾಗಿದ್ದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಿದ್ದೆ. ಹಾರೋಹಳ್ಳಿ ತಾಲೂಕು ರಚನೆ ಮಾಡುವುದಕ್ಕೆ ಕೆಲವರು ಬಿಡಲಿಲ್ಲ. ವಿಧಾನಸೌದದಲ್ಲಿ ಫೈಲ್​ಗಳನ್ನು ಮುಚ್ಚಿಡುತ್ತಿದ್ದರು ಎಂದು ಕಾಂಗ್ರೆಸ್‌ನಾಯಕರ ವಿರುದ್ಧ ಅನಿತಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಎಲ್ಲಿ, ಹೇಗಿತ್ತು ಎಂಬುದು ಅವರಿಗೆ ಗೊತ್ತಿರಲಿಲ್ಲ, ಅವರು ವೀರಾವೇಷದ ಭಾಷಣ ಮಾಡುತ್ತಿದ್ದಾರೆ. ರಾಮನಗರಕ್ಕೆ ನಮ್ಮ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ. ಹೇಗಿದ್ದ ರಾಮನಗರ ಇವತ್ತು ಹೇಗಾಗಿದೆ? ಅಭಿವೃದ್ಧಿ ಹೊಂದಿದ ರಾಮನಗರವನ್ನು ನಾವು ನೋಡುತ್ತಿದ್ದೇವೆ. ಅದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವರು ಹಾಗೂ ನನ್ನ ಕೊಡುಗೆ ಇದೆ. ಕಾಂಗ್ರೆಸ್‌ಕೊಡುಗೆ ಶೂನ್ಯ ಎಂದು ಡಿ.ಕೆ.ಸುರೇಶ್‌ಹೆಸರು ಹೇಳದೆಯೇ ಅನಿತಾ ಕುಮಾರಸ್ವಾಮಿ ಅವರು ವಾಗ್ದಾಳಿ ಮಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಹಿಳಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಚಿವೆ ಲೀಲಾದೇವಿ ಆರ್.‌ಪಸ್ರಾದ್‌, ಪ್ರತಿಭಾ ನಂದಕುಮಾರ್‌, ಬೆಂಗಳೂರು ಮಹಾನಗರದ ಘಟಕದ ಅಧ್ಯಕ್ಷೆ ಶೈಲಜಾ, ಶೀಲಾನಾಯಕ್‌, ಕವಿತಾರೆಡ್ಡಿ, ಕವಿತಾ ರಾಮಚಂದ್ರ, ಪ್ರಶಾಂತಿ ಹಾಗೂ ವಿವಿಧ ಜಿಲ್ಲಾ ಘಟಕಗಳ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ವಿಧಾನ ಪರಿಷತ್‌ಸದಸ್ಯರಾದ ಟಿ.ಎನ್‌. ಜವರಾಯಿಗೌಡ, ಟಿ.ಎ. ಶರವಣ, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್‌.ಎಂ. ರಮೇಶ್‌ಗೌಡ, ಮಾಜಿ ವಿಧಾನ ಪರಿಷತ್‌ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು.

 

Share This Article
error: Content is protected !!
";