ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕೆದಾಟು ಯೋಜನೆ ಅನುಷ್ಠಾನ ಕೆಲಸ ಮುಂದುವರಿಸುತ್ತೇವೆ! ಕಾವೇರಿ ನೀರಿನ ಬಳಕೆಗಾಗಿ “ನಮ್ಮ ನೀರು, ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ಮೇಕೆದಾಟಿನಿಂದ ಹೋರಾಟ ಆರಂಭಿಸಿದ್ದೆವು. ಜನ ನಮ್ಮ ಕೈಗೆ ಅಧಿಕಾರ ನೀಡಿದ ನಂತರ ಕಾನೂನು ಹೋರಾಟ ಮುಂದುವರಿಸಿದೆವು.
ಈ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ವಿಶೇಷ ಪೀಠ, ತೀರ್ಪು ಪ್ರಕಟಿಸಿದೆ ಎಂದು ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ನ್ಯಾಯಾಲಯದ ತೀರ್ಪಿನ ಪ್ರಕಾರ, ಈ ವಿಚಾರ ನ್ಯಾಯಾಲಯದಲ್ಲಿ ತೀರ್ಮಾನ ಮಾಡುವ ವಿಚಾರವಲ್ಲ. ಕರ್ನಾಟಕ ರಾಜ್ಯವು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರು ಬಿಡಲೇಬೇಕು ಎಂದು ನಿರ್ದೇಶನ ನೀಡಿ, ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಾಂಗದ ಮಾರ್ಗದರ್ಶನಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಇಲ್ಲಿ ಯಾವುದೇ ದ್ವೇಷದ ಮನೋಭಾವವಿಲ್ಲ. ತಮಿಳುನಾಡಿನ ಪಾಲಿನ ನೀರನ್ನು ಹರಿಸುತ್ತೇವೆ. ನಾವು ಪ್ರತಿ ವರ್ಷ ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕು. ಆದರೆ, ಈ ವರ್ಷ ಇಲ್ಲಿವರೆಗೆ ಹರಿಸಬೇಕಿದ್ದ, 148 ಟಿಎಂಸಿ ಬದಲು 299 ಟಿಎಂಸಿ ನೀರನ್ನು ಹರಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ನಮ್ಮ ನೆಲದಲ್ಲಿ ಅಣೆಕಟ್ಟು ನಿರ್ಮಿಸುವ ನಮ್ಮ ಮೇಕೆದಾಟು ಯೋಜನೆಯನ್ನು ಮುಂದುವರಿಸುತ್ತೇವೆ. ಈ ಯೋಜನೆಯ ಎಲ್ಲ ತೀರ್ಮಾನಗಳನ್ನು ಕೇಂದ್ರ ಜಲ ಆಯೋಗ (CWC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೀಗಾಗಿ, ಮತ್ತೆ ನ್ಯಾಯಾಲಯದ ಮುಂದೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಈಗಾಗಲೇ ಹಾರೋಬೆಲೆಯಲ್ಲಿ ಮೇಕೆದಾಟು ಕಚೇರಿ ಪ್ರಾರಂಭಿಸಿ, ಯೋಜನೆಗೆ ಅಗತ್ಯವಿರುವ ಭೂಮಿಗೆ ಪರ್ಯಾಯ ಜಾಗ ಗುರುತಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಸಂಸತ್ ಅಧಿವೇಶನ ಆರಂಭವಾದ ಬಳಿಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯದ ಸಂಸದರ ನಿಯೋಗವನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ. ಜಲ ಶಕ್ತಿ ಸಚಿವರು ಹಾಗೂ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುತ್ತೇವೆ. ನ್ಯಾಯಾಲಯದ ಈ ತೀರ್ಮಾನದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಗಳ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಈ ಯೋಜನೆ ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮಾಡಲಾಗುತ್ತಿದೆ. ನೀರಿನ ಕೊರತೆಯಾದಾಗಲೂ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟು ನೆರವಾಗಲಿದೆ.
ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಇದರಿಂದ ಅನುಕೂಲವಾಗುತ್ತದೆ. ಈಗಲಾದರೂ ಮಾನವೀಯತೆ ದೃಷ್ಟಿಯಿಂದ ಸಹಕಾರ ನೀಡಿ ಎಂದು ತಮಿಳುನಾಡಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

