ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಂದ ಸ್ಥಳೀಯ ನೇಕಾರ ಉದ್ಯಮದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ್ದು, ಪರಿಹಾರಕ್ಕಾಗಿ ಸೋಮವಾರ ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ನೇಯ್ಗೆ ಕಾರ್ಮಿಕರ ಸಭೆ ನಡೆಸಲಾಯಿತು.
ಉತ್ತರ ಪ್ರದೇಶ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್ ಮುಂತಾದ ಉತ್ತರ ಭಾರತದಿಂದ ವಲಸೆ ಬಂದಿರುವ ಜನರು ನೇಯ್ಗೆ ಕಾರ್ಮಿಕರಾಗಿ ಸೇರುತ್ತಿರುವುದು, ಇಲ್ಲಿನ ಮೂಲ ನಿವಾಸಿ ಕಾರ್ಮಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು, ಮಗ್ಗದ ಮಾಲೀಕರಿಂದ ಕೂಲಿ ಕಡಿತ ಮತ್ತು ಉದ್ಯೋಗ ಕಸಿತವನ್ನು ಎದುರಿಸುತ್ತಿದ್ದೇವೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ನೇಕಾರ ಸಮಸ್ಯೆ ಕುರಿತು ಕೂಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸ್ಥಳೀಯ ಶಾಸಕ ಧೀರಜ್ ಮುನಿರಾಜ್, ಜವಳಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿ ಶಾಸಕ ಧೀರಜ್ ಮುನಿರಾಜು ಮಾತನಾಡಿ ಮಾಲಿಕರು ವಲಸೆ ಕಾರ್ಮಿಕರಿಂದಾಗಿ ಕಾರ್ಮಿಕರ ಕೂಲಿ ಕಡಿತ ಉದ್ಯೋಗ ನಿರಾಕರಣೆ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಮಾರುಕಟ್ಟೆಯಲ್ಲಿ ಸೀರೆಗಳ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ಅದನ್ನ ಪರಿಶೀಲನೆ ಮಾಡಿ ಕಾರ್ಮಿಕರು ಮತ್ತು ಮಾಲಿಕರ ಜೊತೆಗೆ ಒಂದು ಸಭೆ ನಡೆಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳೋಣ ಎಂದರು.
ಮಾಲೀಕರು ಮತ್ತು ಕಾರ್ಮಿರು ಇಬ್ಬರಿಗೂ ಸಮಸ್ಯೆಗಳಿವೆ. ಮಗ್ಗಗಳ ಮಾಲೀಕರು ತಾವು ನೇಯ್ದ ಸೀರೆಗಳನ್ನು ಮಾರಾಟ ಮಾಡಿ ತಡವಾಗಿ ಹಣ ಪಡೆಯುತ್ತಾರೆ. ಸಾಲ ಪಡೆದಾದರೂ ಸರಿಯೇ ಪ್ರತಿ ಭಾನುವಾರ ತಮ್ಮ ಕಾರ್ಮಿಕರಿಗೆ ಸಂಬಳ ನೀಡುತ್ತಾರೆ.
ಆದರೆ ಮಾಲೀಕರಿಂದ ಸೀರೆ ಖರೀದಿ ಮಾಡಿದ ಬಂಡವಾಳಶಾಹಿಗಳು ನಮ್ಮದೇ ಸೀರೆಗೆ ಒಂದು ಬ್ರಾಂಡ್ ಕೊಟ್ಟುಪುನಃ ನಮಗೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ದೊಡ್ಡಬಳ್ಳಾಪುರದ್ದೆ ಆದ ಬ್ರಾಂಡ್ (ಗುರುತು) ಮಾಡುವ ಆಲೋಚನೆ ಇದೆ. ನೇಕಾರರ ಮಾರುಕಟ್ಟೆ ನಿರ್ಮಾಣಕ್ಕಾಗಿ 11 ಗುಂಟೆ ಜಾಗವನ್ನು ಮೀಸಲಿಡಲಾಗಿದೆ. ಭವನ ನಿರ್ಮಿಸಲು ನನ್ನ ಶಾಸಕರ ಅನುದಾನದಲ್ಲಿ ಒಂದು ಕೋಟಿ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಸರ್ಕಾರದಿಂದ ನೇಕಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿ ಮಾಡಿದೆ.
ಸರ್ಕಾರ ನೇಕಾರ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರಾಗಿ ಘೋಷಿಸಿ ಗುರುತಿನ ಪತ್ರ ನೀಡುತ್ತಿದೆ.ಇದರ ಅಡಿಯಲ್ಲಿ ಪ್ರತಿ ನೇಕಾರನಿಗೆ ವಾರ್ಷಿಕ ಐದು ಸಾವಿರ ರೂಗಳ ವರೆಗೆ ಸಹಾಯ ಧನ ನೀಡುತ್ತದೆ. ಆದ್ದರಿಂದ ಪ್ರತಿ ನೇಯ್ಗೆ ಕಾರ್ಮಿಕರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಸರ್ಕಾರದ ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಇದರಿಂದ ಕಾರ್ಮಿಕ ಇಲಾಖೆಯಲ್ಲಿ ಇತರೆ ಅಸಂಘಟಿತ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳೂ ನೇಕಾರರಿಗೆ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸೌಮ್ಯ, ಕಾರ್ಮಿಕ ಇಲಾಖೆಯ ಹೇಮಂತ್, ದಯಾನಂದ್, ಡಿವೈಎಸ್ಪಿ ರವಿ, ಮುಖಂಡರಾದ ಮಂಜುನಾಥ ಮತ್ತಿತ್ತರರು ಇದ್ದರು.

“ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ನೇಕಾರಿಕೆ ನಂಬಿ ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೇವೆ ಹೊರರಾಜ್ಯಗಳ ವಲಸೆ ಕಾರ್ಮಿಕರಿಂದ ಮತ್ತು ಕೆಲವು ನೇಕಾರ ಮಾಲೀಕರಿಂದ ಸ್ಥಳೀಯ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.ಕೆಲವು ನೇಕಾರ ಮಾಲೀಕರು ಸ್ಥಳೀಯ ಕಾರ್ಮಿಕರನ್ನು ಕಡೆಗಣಿಸಿ ವಲಸಿಗರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು ಹಲವಾರು ವರ್ಷಗಳಿಂದ ಮಾಲೀಕರು ಹಾಗೂ ಕಾರ್ಮಿಕರ ನಡುವೆ ಇದ್ದ ಅವಿನಾಭಾವ ಸಂಬಂಧ ವಲಸಿಗರಿಂದ ಹಾಳಾಗುತ್ತಿದೆ.ನೇಕಾರಿಕೆ ಮಾಡುವ ಎಷ್ಟೋ ಕಾರ್ಮಿಕರಿಗೆ ವಿದ್ಯಾಭ್ಯಾಸ ಇಲ್ಲ, ನಮಗೆ ಮಗ್ಗದ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಮಾಲೀಕರ ಮನಸ್ಥಿತಿ ಬದಲಾಗಬೇಕು ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಬೇಕು”.
ಜೆ. ಶಿವಕುಮಾರ್, ನೇಕಾರ ಮುಖಂಡರು, ದೊಡ್ಡಬಳ್ಳಾಪುರ.

