ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಉಚ್ಚಾಟನೆ ಮಾಡಲಾಗಿರುವ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಈ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎನ್ನುವ ವಿಚಾರ ಅವರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿ ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಪಕ್ಷದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಇದರ ಬಗ್ಗೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಲು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಬಿಜೆಪಿ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟಿತ್ತು. ಹೆಬ್ಬಾರ್, ಸೋಮಶೇಖರ್ ಬಗ್ಗೆ ಕೋರ್ ಕಮಿಟಿಯಲ್ಲೂ ಚರ್ಚೆಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗ ಇಬ್ಬರಿಗೂ ಕೂಡ ಅವಕಾಶ ಸಿಕ್ಕಿತ್ತು. ಆದರೆ, ವಿಪಕ್ಷದಲ್ಲಿ ಕೂರಲು ಹೆಬ್ಬಾರ್ ಹಾಗೂ ಸೋಮಶೇಖರ್ ಅವರಿಗೆ ಕಷ್ಟ ಆಗಿತ್ತು. ಶಾಸಕರ ಉಚ್ಚಾಟನೆ ಬಿಜೆಪಿ ಪಕ್ಷದ ಆಂತರಿಕ ವಿಚಾರ. ಇದರ ಬಗ್ಗೆ ಡಿ.ಕೆ.ಶಿವಕುಮಾರ್ ತಲೆಕೆಡಿಸಿಕೊಳ್ಳುವುದು ಬೇಡ ಸೂಚ್ಯವಾಗಿ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬಿಜೆಪಿ ಶಾಸಕರ ಉಚ್ಚಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಪಕ್ಷಕ್ಕಿಂತ ಯಾರು ದೊಡ್ಡವರಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದ, ಭಿನ್ನಮತ ಸಾಮಾನ್ಯ. ತಡವಾಗಿಯಾದರೂ ಪಕ್ಷ ನಾಯಕು, ಕೇಂದ್ರೀಯ ಶಿಸ್ತು ಸಮಿತಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
ಈ ನಿರ್ಣಯವನ್ನು ನಾನು ಸ್ವಾಗತ ಮಾಡುತ್ತೇನೆ. ಯಾರೇ ತಪ್ಪು ಮಾಡಿದರೂ ತಪ್ಪೇ. ಇಂತಹ ಸಂದೇಶ ನಾಯಕರಿಗೂ ಆಗುತ್ತದೆ, ಕಾರ್ಯಕರ್ತರಿಗೂ ಆಗುತ್ತದೆ ಎಂದು ಹೇಳಿದರು.