ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಹಾರ ರಾಜ್ಯದ ಛಾಪ್ರದಿಂದ ಹಿರಿಯೂರು ನಗರಕ್ಕೆ ಆಗಮಿಸಿದ ಯಾದವ ಕಳಸ ರಥಯಾತ್ರೆಗೆ ತಾಲ್ಲೂಕು ಯಾದವ ಗೊಲ್ಲ ಸಂಘದ ನೇತೃತ್ವದಲ್ಲಿ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಹಿರಿಯೂರಿಗೆ ಬರಮಾಡಿಕೊಳ್ಳಲಾಯಿತು.
ಕಳೆದ 1962ರಲ್ಲಿ ಭಾರತ –ಚೀನಾ ರೆಜಾಂಗ್ ಲಾ ಕದನದಲ್ಲಿ ಹುತಾತ್ಮರಾದ 114 ಯೋಧರ ಸ್ಮರಣಾರ್ಥ ಭಾರತೀಯ ಸೇನೆಯಲ್ಲಿ ಪ್ರತ್ಯೇಕ (ರೆಜಿಮೆಂಟ್ ) ಮೀಸಲಾತಿಗೆ ಒತ್ತಾಯಿಸಿ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ವೀರ ಮರಣ ಹೊಂದಿದ ಯಾದವ ಸೈನಿಕರಿಗೆ ಗೌರವ ಸಮರ್ಪಣೆ, ಪ್ರತ್ಯೇಕ ಮೀಸಲಾತಿ ಪಡೆಯಲು ಯಾದವ ಕಳಸಯಾತ್ರೆ ಬಿಹಾರದ ಛಾಪ್ರಾದಿಂದ ಆರಂಭವಾಗಿದೆ ಎಂದರಲ್ಲದೆ,
ಬಂಗಾಳ, ಜಾರ್ಖಂಡ್, ಛತ್ತೀಸ್ಗಡ, ಒಡಿಶಾ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಪಂಜಾಬ್, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ಮೂಲಕ ಯಾತ್ರೆಯು ಸಂಚರಿಸಿ ನವೆಂಬರ್ 18ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ತಾಲ್ಲೂಕು ಗೊಲ್ಲ ಸಂಘದ ಅಧ್ಯಕ್ಷ ಬಿ.ಆರ್.ರಂಗಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಾಪಣ್ಣ, ಶಿವಣ್ಣ, ಕರಿಯಪ್ಪ, ಕಿರಣ್ ಕುಮಾರ್, ಡಾಬಾ ಚಿಕ್ಕಣ್ಣ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ಸಣ್ಣಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ಅಭಿನಂದನ್, ವಿಶ್ವನಾಥ್, ವೇದಮೂರ್ತಿ, ಚಿತ್ತಪ್ಪ, ನಿರಂಜನಮೂರ್ತಿ, ಸರವಣ, ಗಾಯಿತ್ರಿ ಸೇರಿದಂತೆ ಅನೇಕ ಯಾದವ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

