ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಾನಸಿಕ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಹಾಗೆಯೇ ವಿಕಲಚೇತನರಿಗೆ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿ ಸ್ವಾವಲಂಭಿ ಬದುಕು ರೂಢಿಸಿಕೊಳ್ಳಲು ನೆರವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಹೇಳಿದರು.
ಭಾರತ ಸೇವಾದಳ ಕಟ್ಟಡದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಸಮುದಾಯ ಆಧಾರಿತ ಸಮನ್ವಯ ಅಭಿವೃದ್ದಿ(ಸಿಬಿಐಡಿ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಮಾಣ ಪತ್ರ ತರಬೇತಿ ಕಾರ್ಯಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತ್ ಸೇವಾದಳದ ಕಟ್ಟಡದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ವಾವಲಂಭಿಗಳು ಮತ್ತು ಬುದ್ದಿಶಕ್ತಿಯಿಂದ ಬದುಕುವಂತಾಗಿದ್ದು, ವಿಕಲಚೇತನರಾದ ಇವರುಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿದರೆ ಸಮಾಜದಲ್ಲಿ ಅತ್ಯುತ್ತಮವಾದ ಬದುಕು ಕಟ್ಟಿಕೊಳ್ಳಬಹುದೆಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಹಂತದಲ್ಲಿ ಮಾನಸಿಕ ಅಸ್ವಸ್ಥರಾಗಿದ್ದು, ಅಂತಹವರನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಪ್ರತಿಯೊಬ್ಬರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆಂದು ಹೇಳಿದರು.
ಪ್ರಸ್ತುತ ಸಂದರ್ಭಗಳಲ್ಲಿ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಮಾನಸಿಕ ಆರೋಗ್ಯ ಸುಧಾರಣೆಗಾಗಿ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಬೇಕೆಂದರು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆ ಅಧಿಕಾರಿ ಜೆ.ವೈಶಾಲಿ ಮಾತನಾಡಿ ವಿ.ಆರ್.ಡಬ್ಲ್ಯು, ಎಂ.ಆರ್.ಡಬ್ಲ್ಯು, ಯು.ಆರ್.ಡಬ್ಲ್ಯು. ಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿಕಲಚೇತನರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದು, ಪ್ರತಿಯೊಬ್ಬ ವಿಕಲಚೇತನರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಪುನರ್ವಸತಿ ಕಾರ್ಯಕರ್ತರು ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಅಂಗವಿಕಲರ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಪುನರ್ವಸತಿ ಕಾರ್ಯಕರ್ತರು ಸಿ.ಬಿ.ಎಂ.ಸಂಸ್ಥೆಯ ಮೂಲಕ ತರಬೇತಿ ಪಡೆದುಕೊಳ್ಳುವುದರೊಂದಿಗೆ ಉನ್ನತೀಕರಣಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆರು ತಿಂಗಳ ಪ್ರಮಾಣ ಪತ್ರ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಪುನರ್ವಸತಿ ಕಾರ್ಯಕರ್ತರು ತಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ತರಬೇತಿ ಕಾರ್ಯಕ್ರಮದಿಂದ ಸಾಕಷ್ಟು ಸುಧಾರಣೆಗೊಂಡಿದ್ದೀರೆಂದು ಅನಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಗ್ರಾಮೀಣ ಪುನರ್ವಸತಿ ಕಾರ್ಯರ್ಕರಿಗೆ ತರಬೇತಿ ನೀಡುವುದು ಅಗತ್ಯ. ಆದ್ದರಿಂದ ಸರ್ಕಾರ ಆರ್.ಸಿ.ಐ. ಸಿ.ಬಿ.ಎಂ. ಮತ್ತು ಸಿ.ಬಿ.ಐ.ಡಿ. ಮೂಲಕ ವಿಕಲಚೇತನರಿಗೆ ತರಬೇತಿ ಕಲ್ಪಿಸಿಕೊಡುವುದು ಅಗತ್ಯವಿದೆಯೆಂದು ಹೇಳಿದರು.
ಆರೋಗ್ಯ ಇಲಾಖೆ ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮಾತನಾಡುತ್ತ ವಿಕಲಚೇತನರಿಗೆ ಆರೋಗ್ಯ ಇಲಾಖೆಯಿಂದ ಸಾಕಷ್ಟು ನೆರವುಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವನ್ನು ವೃದ್ದಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಶ್ರೀಧರ್ ಟಿ. ಮಾತನಾಡಿ ಎಲ್ಲರೂ ಒಂದಲ್ಲ ಒಂದು ರೀತಿಯ ಖಿನ್ನತೆ, ಆತಂಕ, ಒತ್ತಡಕ್ಕೆ ಸಿಲುಕುವುದು ಸಹಜ. ಅತಿಯಾದ ಖಿನ್ನತೆಯುಳ್ಳವರು ಆತ್ಮಹತ್ಯೆಗೆ ಶರಣಾಗುತ್ತಾರೆ. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಾಗ ಖಿನ್ನತೆಯಿಂದ ಹೊರಬರಬಹುದೆಂದು ತಿಳಿಸಿದರು.
ಗೀಳು, ವ್ಯಸನ ಎಲ್ಲರಲ್ಲಿಯೂ ಇರುತ್ತದೆ. ಜಾಸ್ತಿಯಾದಾಗ ಮಾನಸಿಕ ಹಾಗೂ ದೈಹಿಕವಾಗಿ ಕಾಯಿಲೆಗೆ ತುತ್ತಾಗುತ್ತಾರೆಂದರು.
ಸಮಾರಂಭದಲ್ಲಿ ಜಿಲ್ಲಾ ಸಂಯೋಜಕ ನಾಗರಾಜ್, ಎಂ.ಆರ್.ಡಬ್ಲ್ಯು. ಮೈಲಾರಪ್ಪ, ನರಸಿಂಹಮೂರ್ತಿ, ದಾದಾಪೀರ್, ಭಾರತ ಸೇವಾದಳದ ಜಿಲ್ಲಾ ಸಂಘಟಕ ಅಣ್ಣಯ್ಯ, ಎನ್.ಅರುಣ್ಕುಮಾರ್, ರಮೇಶ್ ಇವರುಗಳು ಉಪಸ್ಥಿತರಿದ್ದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಉಮಾದೇವಿ, ಶೈಲಜಾ, ಕರಿಬಸಪ್ಪ, ನೀಲಾಂಬಿಕೆ ಇವರುಗಳು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿ ವಂದಿಸಿದರು.

