ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಾರು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರೋ, ಆದರ್ಶ ಪಥ ದರ್ಶನ ಮಾಡಿಸಿದವರನ್ನು ನಮ್ಮ ನಮ್ಮ ಜಾತಿ ವ್ಯವಸ್ಥೆಗೆ ಕಟ್ಟಿ ಹಾಕುತ್ತಿರುವುದು ಆದರ್ಶ ಸಮಾಜ ನಿರ್ಮಾತೃಗಳಿಗೆ ಮಾಡುತ್ತಿರುವ ಘೋರ ಅನ್ಯಾಯವಲ್ಲದೆ ಮತ್ತೇನು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳವರು ವಿಷಾದ ವ್ಯಕ್ತಪಡಿಸಿದರು.
ಅವರು ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಕರ್ತೃ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ
ವಿಶ್ವಸಂತರನ್ನ ,ದಾರ್ಶನಿಕರನ್ನ ವಿಶ್ವ ವಿಭೂತಿ ಪುರುಷರನ್ನ ಒಂದೊಂದು ಜಾತಿಗೆ ಹಣೆ ಪಟ್ಟಿ ಕಟ್ಟುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಶ್ರೀಗಳು ಅದರಿಂದ ಅವರನ್ನ ಹೊರ ತರದ ಹೊರತು ಸಮಗ್ರ ಸಮಾಜದ ಬೆಳವಣಿಗೆಗೆ ಕಂಟಕಪ್ರಾಯ.
ವ್ಯವಸ್ಥೆ ಕಟ್ಟಲಿಕ್ಕೆ, ಸಂಘಟನೆ ದೃಷ್ಟಿಯಿಂದ ನಾವು ಮಹಾತ್ಮರನ್ನ ಜಾತಿಗೆ ಸೀಮಿತ ಮಾಡುವುದು ಬೇಡ. ಅವರ ತತ್ವವಾದರ್ಶಗಳನ್ನು ಹೇಳುತ್ತಲೇ ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ ಮತ್ತು ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಬೇಕಾದ ಅನಿವಾರ್ಯವೂ ಬಂದೊದಗಿದೆ ಎಂದು ತಿಳಿಸಿದರು.
ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯ ಸಮಾಜದ ಸಾಮರಸ್ಯಕ್ಕೋಸ್ಕರವಾಗಿ ಶ್ರಮಿಸಿದೆ. ಕನಕ ಪುರಂದರ ಕೀರ್ತನೆಗಳು ಶ್ರೇಷ್ಠ ಮಟ್ಟದ್ದಾಗಿವೆ. ಕನಕದಾಸರಂತೂ ಕೀರ್ತನೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಮನುಷ್ಯನಿಗೆ ಹುಟ್ಟಿನಿಂದ ಕುಲ ಬಂದದ್ದಲ್ಲ.
ಹುಟ್ಟಿದ ನಂತರ ಇವ ಯಾವ ಕುಲದವ ಎಂದು ಬೇರ್ಪಡಿಸುವ ಹಂತದಲ್ಲಿ ಇಂದಿನ ಸಮಾಜವಿದೆ. ನಿಸರ್ಗ ಅರ್ಥಾತ್ ಭಗವಂತನ ದೃಷ್ಟಿಯಲ್ಲಿ ಯಾವ ಬೇಧವೂ ಇಲ್ಲ. ನಾವೀಗ ಸ್ವಾರ್ಥಕ್ಕಾಗಿ ಜಾತಿ ಸೃಷ್ಟಿಸಿಕೊಂಡು ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಮಹಾವೀರ, ಏಸು, ಪೈಗಂಬರ್, ಗುರುನಾನಕರಂತ ಇನ್ನುಳಿದ ಮಹಾನ್ ಮೇರು ವ್ಯಕ್ತಿತ್ವಗಳನ್ನು ಇಂದಿನ ಆಧುನಿಕ ಸಮಾಜ ಜಾತಿಗೆ ಸೀಮಿತ ಮಾಡುತ್ತಿರುವುದು ಸಮಾಜದ ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ಯುವ ಪೀಳಿಗೆ ಇಂತಹ ಅಸಮಾನತೆಯ ಮಾರ್ಗ ಇತರೆ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಗಮನ ಕೊಡದೆ ಆದರ್ಶ ಯಾವುದು ಎಂದರಿತು ಆ ಮಾರ್ಗದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಮಠದ ವಿದ್ಯಾರ್ಥಿಗಳು ವಚನ ತತ್ವಪದಗಳನ್ನು ಹಾಡಿದರು. ವಿಜಯದೇವರು ಸ್ವಾಗತಿಸಿದರು. ಅಧ್ಯಾಪಕ ನವೀನ್ ಮಾಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಆನಂದ್ ಕುಮಾರ್ ವಂದಿಸಿದರು.