ಶಾಸಕ ಬಿ.ಆರ್.ಪಾಟೀಲ್ ಅವರ ಆಡಿಯೋ ಕ್ಲಿಪ್‌ನಲ್ಲಿ ಏನಿದೆ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಳಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು  ವಸತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಆಡಿಯೋ ಕ್ಲಿಪ್‌ನಲ್ಲಿ, ಶಾಸಕ ಪಾಟೀಲ್ ತಮ್ಮಲ್ಲಿರುವ ಮಾಹಿತಿ ಬಹಿರಂಗಪಡಿಸಿದರೆ, ಸರ್ಕಾರದ ಅಡಿಪಾಯವೇ ಅಲುಗಾಡುತ್ತದೆ ಎಂದು ಹೇಳಿದ್ದಾರೆ.

- Advertisement - 

ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.

ಕಲಬುರಗಿ ಜಿಲ್ಲೆಯ ಆಳಂದ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಪಾಟೀಲ್, ಸಚಿವ ಜಮೀರ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರೊಂದಿಗೆ ಮಾತನಾಡುತ್ತಿರುವುದು ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್‌ನಲ್ಲಿ ಕೇಳಿಬರುತ್ತಿದೆ. ಪಾಟೀಲ್ ತಮ್ಮ ಕ್ಷೇತ್ರದೊಳಗಿನ ಹಳ್ಳಿಗಳಲ್ಲಿ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಲಂಚದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯದರ್ಶಿಯನ್ನು ಪ್ರಶ್ನಿಸಿದ್ದಾರೆ.

- Advertisement - 

ಲಂಚ ನೀಡಿದವರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನನ್ನ ಸ್ವಂತ ಸರ್ಕಾರದ ವಿರುದ್ಧ ಈ ದೂರು ನೀಡಲು ನನಗೆ ಬೇಸರವಾಗಿದೆ. ವಿವಿಧ ಗ್ರಾಮಗಳಲ್ಲಿ ಒಟ್ಟು 950 ಮನೆಗಳನ್ನು ಫಲಾನುಭವಿಗಳಿಂದ ಹಣ ಪಡೆದು ಹಂಚಿಕೆ ಮಾಡಲಾಗಿದೆ. ನನ್ನ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬದಲಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಸಲ್ಲಿಸಿದ ಪಟ್ಟಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಪಾಟೀಲ್ ಹೇಳಿದ್ದಾರೆ.

ಆಡಿಯೋದಲ್ಲಿ ಕಾರ್ಯದರ್ಶಿ ಸರ್ಫರಾಜ್ ಖಾನ್, ಪಾಟೀಲ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ತಮ್ಮ ಫಲಾನುಭವಿಗಳ ಪಟ್ಟಿ ಸಲ್ಲಿಸುವಂತೆ ಕೇಳುತ್ತಿದ್ದಾರೆ ಮತ್ತು ಅವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡುತ್ತಿವ ಮಾತುಗಳು ಆಡಿಯೋದಲ್ಲಿ ಇದೆ.

ಆಡಿಯೋ ಕ್ಲಿಪ್ ಬಿಡುಗಡೆಯಾದ ನಂತರ, ಶಾಸಕ ಪಾಟೀಲ್ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಪಕ್ಷದಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಏತನ್ಮಧ್ಯೆ, ಕರ್ನಾಟಕ ಬಿಜೆಪಿ ಘಟಕ ಆಡಿಯೋ ಕ್ಲಿಪ್ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಬೆಂಬಲಿಸುತ್ತದೆ ಎಂದು ದೂರಿದೆ.

ಕಾಂಗ್ರೆಸ್ ಶಾಸಕ ಮತ್ತು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಹೇಳಿದ್ದರು. ಈಗ ಆ ಹೇಳಿಕೆಯನ್ನು ಬಲಪಡಿಸುತ್ತಾ, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

 

Share This Article
error: Content is protected !!
";