ಚಂದ್ರವಳ್ಳಿ ನ್ಯೂಸ್, ಶಿಗ್ಗಾವ್:
ಕೃಷಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ನಿಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಬೊಮ್ಮಾಯಿಯವರೇ? ನೀವು ಸಿಎಂಆಗಿದ್ದಾಗಲಾದರೂ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲವಲ್ಲಾ ಏಕೆ ಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಜನರಿಗೆ ಹೇಳಲು ಬಿಜೆಪಿ ಬಳಿ ಸುಳ್ಳು ಬಿಟ್ಟರೆ ಬೇರೆ ಏನೂ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದವರಿಗೆ, ದಲಿತರಿಗೆ, ಮಹಿಳೆಯರಿಗೆ, ಬಡವರಿಗೆ ಇಂತಿಂಥಾ ಕೆಲಸ ಮಾಡಿದ್ದೇವೆ ಎಂದು ಜನರಿಗೆ ಹೇಳಲು ಏನೂ ಇಲ್ಲ. ಏನಾದ್ರೂ ಜನರ ಕೆಲಸ ಮಾಡಿದ್ರೆ ತಾನೆ ಎಂದ ಸಿಎಂ, ಬಿಜೆಪಿ ಬಳಿ ಸುಳ್ಳು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.
ವಕ್ಫ್ ಭೂಮಿ ತೆರವುಗೊಳಿಸಿ ಎಂದು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸರ್ಕಾರದಲ್ಲೂ ನೋಟಿಸ್ ನೀಡಿದ್ದರು. ನಾನು ಎಲ್ಲಾ ನೋಟಿಸ್ ವಾಪಾಸ್ ಪಡೆಯಲು ಸೂಚಿಸಿ, ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ಪ್ರತಿಭಟನೆ ಮಾಡ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಂಡರೆ ಹೊಟ್ಟೆಯುರಿ- ನಮ್ಮ ಸರ್ಕಾರ ಬಡವರು, ಮಧ್ಯಮ ವರ್ಗದವರ ಪರವಾಗಿ ಗ್ಯಾರಂಟಿಗಳನ್ನು ರೂಪಿಸಿ ಜಾರಿಗೆ ತಂದಿದ್ದಕ್ಕಾಗಿ ಬಿಜೆಪಿಗೆ ನನ್ನನ್ನು ಕಂಡರೆ ಹೊಟ್ಟೆಯುರಿ. ಪಠಾಣ್ ಅವರನ್ನು ಗೆಲ್ಲಿಸುವ ಮೂಲಕ ಅವರ ಹೊಟ್ಟೆಕಿಚ್ಚಿಗೆ ಸರಿಯಾದ ಪಾಠ ಕಲಿಸಿ ಎಂದು ಕರೆ ನೀಡಿದರು.
ಶಗ್ಗಾಂ, ಸವಣೂರು ಏತ ನೀರಾವರಿಗೆ ಹಣ ಕೊಟ್ಟವರು ನಾವು. ಬೊಮ್ಮಾಯಿಯವರೇ ನೀವೇನು ಮಾಡಿದ್ರಿ ಸ್ವಾಮಿ ? ಎಂದು ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಕೋಟಿ ಮಾತ್ರ.
ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.
ದೇಶದ ಆರ್ಥಿಕತೆ ಎಕ್ಕುಡಿಸಿ, ನಿರುದ್ಯೋಗ ಸಮಸ್ಯೆ ವಿಪರೀತ ಹೆಚ್ಚಿಸಿ, ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುವಂತೆ ಮಾಡಿ, ಡೀಸೆಲ್, ಗ್ಯಾಸ್, ಪೆಟ್ರೋಲ್, ಎಣ್ಣೆ, ಚಿನ್ನ, ಕಾಳು, ಬೇಳೆ ಎಲ್ಲದರ ಬೆಲೆ ಹೆಚ್ಚಿಸಿದ ಮೋದಿಯವರೇ ನೀವು ನಮಗೆ ಬುದ್ದಿ ಹೇಳೋಕೆ ಬರ್ತೀರಾ ಎಂದು ಮೋದಿಯವರ ಎದುರು ಅವರ ಸಾಲು ಸಾಲು ವೈಫಲ್ಯಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು. ಬೊಮ್ಮಾಯಿಯವರೇ ನಮ್ಮನ್ನು ಪ್ರಶ್ನಿಸುವ ಯಾವ ನೈತಿಕತೆ ನಿಮಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.